Advertisement

ಕೃಷಿ ಪರಿಹಾರ ನಿಯಮ ಸಡಿಲಿಕೆಗೆ ರೈತರ ಆಗ್ರಹ

12:09 PM May 21, 2020 | Suhan S |

ಬೆಳಗಾವಿ: ಕೋವಿಡ್ ವೈರಸ್‌ ಹಾವಳಿ ತಡೆಗಟ್ಟಲು ಸರಕಾರ ಜಾರಿ ಮಾಡಿದ ಲಾಕ್‌ಡೌನ್‌ನಿಂದ ಸಣ್ಣ ರೈತರು, ಬಡಕುಟುಂಬಗಳು, ಕೃಷಿ ಕೂಲಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಸಣ್ಣ ರೈತರು ಬೆಳೆ ಪರಿಹಾರ ಪಡೆಯುವಂತಾಗಲು ನಿಯಮಾವಳಿಗಳನ್ನು ಸಡಿಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸಾಕಷ್ಟು ಬೆಳೆ ಹಾನಿ ಅನುಭವಿಸಿದ ಸಣ್ಣ ರೈತರಿಗೆ ಕನಿಷ್ಠ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಮನವಿ ಸಲ್ಲಿಸಿದರು. ಲಾಕ್‌ಡೌನ್‌ನಿಂದ ಸಣ್ಣ ರೈತರು, ಭೂಮಿ ಇಲ್ಲದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭೂಮಿಯ ಪಹಣಿ ಪತ್ರ ಇಲ್ಲದೇ ಹಾನಿಗೊಳಗಾದ ಬೆಳೆಗೆ ಪರಿಹಾರ ಪಡೆಯಲೂ ಸಹ ಅನರ್ಹರಾಗಿದ್ದಾರೆ. ಬೇರೆಯವರ ಭೂಮಿಯನ್ನು ಉತ್ತು, ಬಿತ್ತಿ ಬೆಳೆ ಪಡೆಯುವ ರೈತರಿಗೆ ಸರ್ಕಾರದ ಪರಿಹಾರ ಸಿಗುವುದಿಲ್ಲ. ಕಾರಣ ಸರ್ಕಾರ ನಿಯಮಾವಳಿಗಳನ್ನು ಸಡಿಲಗೊಳಿಸಿ, ಭೂಮಿ ಊಳುವವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕಾಧ್ಯಕ್ಷ ಅಪ್ಪಾಸಾಹೇಬ ದೇಸಾಯಿ, ಸಣ್ಣ ರೈತರು ಬದುಕುವ ಸ್ಥಿತಿಯಲ್ಲಿ ಇಲ್ಲ. ಸರ್ಕಾರ ಸ್ಥಳೀಯವಾಗಿ ಸರ್ವೇ ಮಾಡಿಸಿ ಬಡ ರೈತರನ್ನು ಗುರುತಿಸಬೇಕು. ಸಣ್ಣ ರೈತರಿಗೆ, ಬಡ ಕುಟುಂಬಗಳಿಗೆ ಕನಿಷ್ಠ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಮನಗೌಡ ಪಾಟೀಲ, ನಾಮದೇವ ದುಡುಂ, ಮಾರುತಿ ಕಡೆಮನಿ, ಗಜು, ದುಂಡಪ್ಪ ಪಾಟೀಲ ಮೊದಲಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next