ರಾಮನಗರ: ರೈತರ ಸಾಲ ಮನ್ನಾ ಮಾಡುವುದಾಗಿ ಸಿಎಂ ಕುಮಾರಸ್ವಾಮಿ ಘೋಷಿಸಿದ್ದಾರೆ. ಆದರೆ, ಇನ್ನೂ ಸಾಲ ಮನ್ನಾ ಆಗಿಲ್ಲ, ಇನ್ನೊಂದೆಡೆ ರೈತರಿಗೆ ಹೊಸ ಸಾಲ ಸಿಗುತ್ತಿಲ್ಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಎಪಿಎಂಸಿ ಯಾರ್ಡ್‌ನಲ್ಲಿರುವ ರೈತ ಭವನದಲ್ಲಿ ನಡೆದ ರೈತರ ಸಭೆಯಲ್ಲಿ ಅವರು ಮಾತನಾಡಿ, ಡಿಸಿಸಿ ಬ್ಯಾಂಕ್ ಅಧಿಕಾರಿಗಳನ್ನು ವಿಚಾರಿಸಿದರೆ ತಮಗಿನ್ನು ಸರ್ಕಾರದಿಂದ ಸಾಲ ಮನ್ನಾ ಮಾಡುವ ಬಗ್ಗೆ ನಿಯಮಾವಳಿಗಳು ಬಂದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿಗಳಿಗೆ ಮನಸ್ಸೇ ಇಲ್ಲ: ಪ್ರೊ.ನಂಜುಂಡಸ್ವಾಮಿ ಅವರ ಪ್ರಕಾರ ದೊಡ್ಡ ರೈತ, ದೊಡ್ಡ ಸಾಲಗಾರ. ಆದರೆ, ಇಲ್ಲಿ ಮುಖ್ಯಮಂತ್ರಿಗಳಿಗೆ ಇವರ ಸಾಲ ಮನ್ನಾಕ್ಕೆ ಮನಸ್ಸೇ ಇಲ್ಲ. ರೈತರು ಹೈನೋದ್ಯಮ, ಟ್ರ್ಯಾಕ್ಟರ್ ಮುಂತಾದ ಕೃಷಿ ಮತ್ತು ಪರ್ಯಾಯ ಕೃಷಿ ಪದ್ಧತಿಗಳಿಗೆ ಮಾಡಿರುವ ಎಲ್ಲಾ ಸಾಲವನ್ನು ಮನ್ನಾ ಮಾಡಬೇಕು. ಎಪಿಎಂಸಿ ಒಳ ಬರಲು ರೈತರಿಗೆ ಪ್ರವೇಶ ಚೀಟಿಯನ್ನು ಕೊಡಬೇಕು. ಎಪಿಎಂಸಿ ಯಾರ್ಡುಗಳು ದಲ್ಲಾಳಿಗಳ ಮಾರುಕಟ್ಟೆಯಾಗಿದೆ. ಈ ಬಗ್ಗೆ ಎಪಿಎಂಸಿ ಸಮಿತಿ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಕೊಲೆ ಮಾಡುವ ಮಟ್ಟಕ್ಕೆ ಇಳಿದ ಶಾಸಕರು: ರೈತ ಸಂಘದ ರಾಜ್ಯ ಉಪಾಧ್ಯಕ್ಷ ರಾಮು ಮಾತನಾಡಿ, ಇಂದು ಚುನಾಯಿತ ಪ್ರತಿನಿಧಿಗಳು ಕೊಲೆ ಮಾಡುವ ಮಟ್ಟಕ್ಕೆ ಇಳಿದಿದ್ದಾರೆ ಎಂದು ಈಗಲ್ಟನ್ ರೆಸಾರ್ಟ್‌ನಲ್ಲಿ ಕೈ ಶಾಸಕರ ಮಾರಾಮಾರಿ ಪ್ರಕರಣವನ್ನು ಖಂಡಿಸಿದರು. ಮತದಾರರು ಜಾಗೃತರಾಗಿದ್ದು, ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಮೀಷನ್ ಕಡಿವಾಣಕ್ಕೆ ಕಾಯ್ದೆ ಜಾರಿ ಮಾಡಿ: ಎಪಿಎಂಸಿಗಳಲ್ಲಿ ಕಮೀಷನ್ ದಂಧೆಯಿಂದ ರೈತರು ಹೈರಾಣಾಗಿದ್ದಾರೆ. ಕಮೀಷನ್ ದಂಧೆಗೆ ಕಡಿವಾಣ ಹಾಕಲು ಕಾಯ್ದೆಯನ್ನು ಜಾರಿ ಮಾಡಬೇಕು. ಸಿಎಂ ಕುಮಾರಸ್ವಾಮಿ ಅವರು ಇತ್ತೀಚಿಗೆ ತಮ್ಮ ಭಾಷಣದಲ್ಲಿ ಎಪಿಎಂಸಿಗಳ ಮೂಲಕವೇ ರೈತರ ಉತ್ಪನ್ನಗಳನ್ನು ಖರೀದಿ ಮಾಡುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ಈ ಪದ್ಧತಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಪ್ರಮುಖರಾದ ಪಾಪಣ್ಣ, ರಾಜಣ್ಣ, ಲೋಕೇಶ್, ಪುಟ್ಟಸ್ವಾಮಿ, ಕೃಷ್ಣಯ್ಯ, ಮುನಿರಾಜು ಸೇರಿದಂತೆ ರೈತರು ಹಾಜರಿದ್ದರು.
ಪ್ರಸಕ್ತ ಸಾಲಿನ ಆಯವ್ಯಯ ತಾಯಾರಿಕೆಗೆ ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ಈ ಸಂಬಂಧ ರೈತರ ಸಲಹೆಗಳನ್ನು ಕೇಳಲು ಸಭೆ ಕರೆದಿದ್ದಾರೆ. ತಾವು ಸಹ ಈ ಸಭೆಯಲ್ಲಿ ಭಾಗವಹಿಸಲಿದ್ದು, ಭವಿಷ್ಯದಲ್ಲಿ ರೈತ ಮತ್ತೆ ಸಾಲಗಾರನಾಗಬಾರದು ಅಂತಹ ವ್ಯವಸ್ಥೆ ಜಾರಿಗೆ ಆಯವ್ಯಯ ಸಿದ್ಧಪಡಿಸುವಂತೆ ಸಲಹೆ ನೀಡಲಾಗುವುದು. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಕೃಷಿ ಬೆಲೆ ಆಯೋಗ ಸ್ಥಾಪನೆ ಆಗಿದೆ.
ಆದರೆ, ಈ ಆಯೋಗದ ಹೊಣೆ ಕೇವಲ ರಾಗಿ ಮತ್ತು ಭತ್ತಕ್ಕೆ ಮಾತ್ರ ಸೀಮಿತವಾಗಿದೆ. ರೇಷ್ಮೆ ಗೂಡಿನ ಧಾರಣೆ ದಿನೇ ದಿನೆ ಇಳಿಮುಖವಾಗುತ್ತಿದೆ. ಬೇಡಿಕೆಯೂ ಕುಸಿಯುತ್ತಿದೆ. ರೇಷ್ಮೆ ಗೂಡು ಕೃಷಿಯನ್ನು ಉಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ರಾಮು ಹೇಳಿದರು.