ಬೆಂಗಳೂರು: ಕೇಂದ್ರ ಸರ್ಕಾರಿ ಕೆಲಸ ಒಲಿದು ಬಂದಿತ್ತು. ಸ್ವಂತ ಊರಿನಲ್ಲಿ ಎಂಜಿನಿಯರಿಂಗ್ ಸೀಟು ಕೂಡ ಸಿಕ್ಕಿತ್ತು. ಹಾಗಾಗಿ, ಎಂಜಿನಿಯರ್ ಆಗಬಹುದಿತ್ತು. ಅಷ್ಟೇ ಅಲ್ಲ, ಬಿಎಚ್‌ಎಂಎಸ್ ಸೀಟೂ ದೊರಕಿದ್ದರಿಂದ ಹೋಮಿಯೋಪಥಿ ವೈದ್ಯೆ ಕೂಡ ಆಗಬಹುದಿತ್ತು. ಈ ಎಲ್ಲ ಅವಕಾಶಗಳನ್ನೂ ತೊರೆದು ಆಕೆ ಆಯ್ಕೆ ಮಾಡಿಕೊಂಡಿದ್ದು ಮುಳ್ಳಿನ ಹಾದಿಯನ್ನು.
ಆ ಹಾದಿಯಲ್ಲಿ ಅಗತ್ಯಬಿದ್ದರೆ ಬಿಸಿಲು-ಮಳೆ, ಗುಡ್ಡ-ಬೆಟ್ಟಗಳೆನ್ನದೆ ಗಡಿ ರಕ್ಷಣೆಗೂ ನಿಲ್ಲಬೇಕು! ಬೆಳಗಾವಿ ಜಿಲ್ಲೆ ಖಾನಾಪುರದ ಕಾಮಸಿನಕೊಪ್ಪದ ರೈತನ ಮಗಳು ಜ್ಯೋತಿ ಬಸಪ್ಪ ಚವಳಗಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.98ರಷ್ಟು ಅಂಕ ಗಳಿಸಿದ್ದಾಳೆ. ಪಿಯುಸಿಯಲ್ಲಿ ಕೂಡ ಶೇ.89ರಷ್ಟು ಅಂಕ ಪಡೆದು, ಸಿಇಟಿ ಮತ್ತು ನೀಟ್‌ಪರೀಕ್ಷೆ ಬರೆದಿದ್ದರು. ಅಲ್ಲಿಯೂ ಉತ್ತಮ ಅಂಕ ಗಳಿಸಿದ್ದರಿಂದ ಇದ್ದೂರಲ್ಲಿಯೇ ಎಂಜಿನಿಯರಿಂಗ್ ಸೀಟು ಸಿಕ್ಕಿತ್ತು. ಮನಸ್ಸು ಮಾಡಿದ್ದರೆ, ಯಾವುದೇ ಖರ್ಚಿಲ್ಲದೆ ಆರಾಮಾಗಿ ಎಂಜಿನಿಯರಿಂಗ್ ವ್ಯಾಸಂಗ ಮಾಡಬಹುದಿತ್ತು.
ಈ ಮಧ್ಯೆ ಅಂಚೆ ಇಲಾಖೆಯಲ್ಲಿ ಪಿಯುಸಿ ಮೇಲೆ ಆಹ್ವಾನಿಸಿದ್ದ ಹುದ್ದೆಗೂ ಆಯ್ಕೆಯಾಗಿದ್ದರು. ಆರ್‌ಆರ್‌ಬಿ ಮೊದಲ ಪರೀಕ್ಷೆಯಲ್ಲೂ ಉತ್ತೀರ್ಣಳಾಗಿ ದ್ದಳು. ಆದರೆ, ಜ್ಯೋತಿ ಅದೆಲ್ಲ ವನ್ನೂ ಬದಿಗೊತ್ತಿ ಮಿಲಿಟರಿ ಪೊಲೀಸ್ ಆಯ್ಕೆ ಮಾಡಿಕೊಳ್ಳುವ ಮೂಲಕ ಭಾರತೀಯ ಸೇನೆ ಸೇರಿದ್ದಾರೆ.
ಅದೇ ಬೆಳಗಾವಿ ಜಿಲ್ಲೆ ಕಾಗವಾಡದ ಆರತಿ ತಳವಾರ ಕೂಡ ರೈತನ ಮಗಳು. ಕೇವಲ ಒಂದು ಎಕರೆ ಜಮೀನು ಇದ್ದು, ಕುಟುಂಬ ನಿರ್ವಹಣೆಯೂ ಕಷ್ಟಕರವಾಗಿದೆ. ಇಬ್ಬರು ತಮ್ಮಂದಿರ ಜವಾಬ್ದಾರಿಯೂ ಆಕೆಯ ಮೇಲಿದೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ.92 ಹಾಗೂ ಪಿಯುಸಿಯಲ್ಲಿ ಶೇ.85 ಅಂಕ ಗಳಿಸಿರುವ ಆರತಿ, ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಬ್ಯಾಂಕಿಂಗ್ ಕ್ಷೇತ್ರಕ್ಕೆ ಅನಾಯಾಸವಾಗಿ ಹೋಗಬಹುದಿತ್ತು. ಆದರೆ, ಆಕೆ ಆಯ್ಕೆ ಮಾಡಿಕೊಂಡಿದ್ದೂ ದೇಶ ಸೇವೆಯನ್ನು. ಕೇವಲ ಜ್ಯೋತಿ ಅಥವಾ ಆರತಿಯ ಕಥೆ ಅಲ್ಲ.
ಇಲ್ಲಿನ ಸೇನಾ ಪೊಲೀಸ್ ಕೇಂದ್ರದಲ್ಲಿ ದೇಶದ ಮೊದಲ “ಮಹಿಳಾ ಮಿಲಿಟರಿ ಪೊಲೀಸ್ ದಳ’ದಲ್ಲಿ ಇಂತಹ ಹತ್ತಾರು ಯುವತಿಯರ ಸಾಹಸಗಾಥೆ ನಿಮಗೆಸಿಗುತ್ತದೆ. ನೂರು ಜನರ ಆ ಪಡೆಯಲ್ಲಿ ಬಹುತೇಕರು ಕುಗ್ರಾಮದ ಬಂದ ರೈತನ ಮಕ್ಕಳಾಗಿದ್ದಾರೆ. ಸಾಕಷ್ಟುಅವಕಾಶಗಳಿದ್ದರೂ ದೇಶದ ಗಡಿ ಕಾಯುವ ತುಡಿತ ಅವರನ್ನು ಇಲ್ಲಿ ಕರೆತಂದಿದೆ. ಆ ಪೈಕಿ ಬೆಳಗಾವಿಯ ಏಳು ಹಾಗೂ ಧಾರವಾಡದ ಓರ್ವ ಯುವತಿ ಸೇರಿ ಕರ್ನಾಟಕದ ಎಂಟು ಕನ್ನಡತಿಯರೂ ಇದ್ದಾರೆ. ಮುಂದಿನ ಒಂದೂವರೆ ತಿಂಗಳಲ್ಲಿ ಈ ಯುವತಿಯರು ದೇಶದ ಐತಿಹಾಸಿಕ ಕ್ಷಣಕ್ಕೆ ಮುನ್ನುಡಿ ಬರೆಯಲಿದ್ದಾರೆ.
ಹೌದು, 61 ವಾರಗಳ ತರಬೇತಿ ಮುಗಿಸಿ ಮೇ 8ರಂದು 100 ಯುವತಿಯರು ದೇಶ ಸೇವೆಗೆಅಣಿಯಾಗಲಿದ್ದಾರೆ. 11 ಯೂನಿಟ್‌ಗಳಲ್ಲಿ ಇವರನ್ನು ನಿಯೋಜನೆ ಮಾಡಲು ಈಗಾಗಲೇ ಸಿದ್ಧತೆ ನಡೆದಿದೆ. ತರಬೇತಿ ಪಡೆಯುತ್ತಿರುವ ಯುವತಿಯರೂ ಆ ಕ್ಷಣಗಳಿಗಾಗಿ ಕಾತುರರಾಗಿದ್ದಾರೆ.
ತರಬೇತಿಯಲ್ಲಿ ನಿರತಳಾಗಿದ್ದ ಜ್ಯೋತಿಯನ್ನು “ಉದಯವಾಣಿ’ ಈ ಸಂದರ್ಭದಲ್ಲಿ ಮಾತಿಗೆಳೆದಾಗ, “ಎಂಜಿನಿಯರ್ ಎಲ್ಲರೂ ಆಗುತ್ತಾರೆ. ಆದರೆ, ಭಾರತೀಯ ಸೇನೆ ಅದರಲ್ಲೂ ಮೊದಲ ಮಹಿಳಾ ಮಿಲಿಟರಿ ಪೊಲೀಸ್ ಪಡೆಯಲ್ಲಿ ಯೋಧಳಾಗುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ನನಗೆಮೊದಲಿನಿಂದಲೂ ಸೇನೆ ಸೇರಬೇಕೆಂಬ ಹಂಬಲ ಇತ್ತು. ಅಲ್ಲದೆ, ನನ್ನ ಅಣ್ಣ ಹಲವು ಬಾರಿ ಪ್ರಯತ್ನಿಸಿದರೂ ಆಗಿರಲಿಲ್ಲ. ಅವನ ಗುರಿಯನ್ನು ನಾನು ಸಾಧಿಸಬೇಕು ಎಂಬ ಹಠದಿಂದ ಇಲ್ಲಿಗೆ ಬಂದಿದ್ದೇನೆ. ವ್ಯಾಸಂಗ ಮಾಡುತ್ತಿದ್ದಾಗ, ಮಿಲಿಟರಿ ಸಮವಸ್ತ್ರ ಧರಿಸಬೇಕೆಂಬ ತುಡಿತ ತುಂಬಾ ಇತ್ತು. ಅದರ ಹಿಂದೆ ಎಷ್ಟು ಶ್ರಮ ಇದೆ ಎಂಬುದು ಈಗ ನನಗೆ ಗೊತ್ತಾಗುತ್ತಿದೆ’ ಎಂದು ಹೇಳಿದರು.
ಧಾರವಾಡ ಮದಿಕೊಪ್ಪದ ಭೀಮಕ್ಕ ಚವಾಣ್, “ಸೇನೆಯಲ್ಲಿ ಕೆಲಸ ಮಾಡಬೇಕು ಎನ್ನುವುದು ನನ್ನ ಕನಸು. ಈ ಮಧ್ಯೆ ಬಡ ಕುಟುಂಬವಾಗಿದ್ದರಿಂದ ಮನೆಯಲ್ಲಿ ನಾನೇ ದೊಡ್ಡವಳು. ಏನಾದರೂ ಕೆಲಸಮಾಡಬೇಕು ಎಂಬುದಿತ್ತು. ಪಿಯುಸಿ ಮುಗಿಯುತ್ತಿದ್ದಂತೆ ಈ ಅವಕಾಶ ಸಿಕ್ಕಿತು. ಇಲ್ಲಿ ಬಂದ ವೇತನದಲ್ಲಿ ಅರ್ಧಕ್ಕರ್ಧ ಊರಿಗೆ ಕಳಿಸುತ್ತೇನೆ. ಇಬ್ಬರೂ ತಮ್ಮಂದಿರನ್ನು ದೊಡ್ಡ ಆಫೀಸರ್ ಮಾಡುವ ಗುರಿ ಇದೆ’ ಎಂದು ತಿಳಿಸಿದರು.
ಏನೇನು ತರಬೇತಿ? :
29 ವಾರಗಳು ಪ್ರಾಥಮಿಕ ತರಬೇತಿ ಹಾಗೂ 26 ವಾರ ಸುಧಾರಿತ ಹಾಗೂ 6 ವಾರಗಳು ರಜಾ ಅವಧಿ ಇರುತ್ತದೆ. ಈ ಅವಧಿಯಲ್ಲಿ ಓಟ,ಡ್ರಿಲ್‌ನಂತಹ ದೈಹಿಕ ಕ್ಷಮತೆಯ ತರಬೇತಿ ಅಲ್ಲದೆ,ಶಸ್ತ್ರಾಸ್ತ್ರ ಬಳಕೆ, ಸಂಚಾರದಟ್ಟಣೆ ನಿರ್ವಹಣೆ, ಈಜು, ಚಾಲನಾ ತರಬೇತಿಯನ್ನೂ ನೀಡಲಾಗುತ್ತದೆ. ಅತ್ಯಾಚಾರ, ಆತ್ಮಹತ್ಯೆ, ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯದಂತಹಪ್ರಕರಣಗಳ ತನಿಖೆ ನಡೆಸುವ, ನಿಯಂತ್ರಣಕೊಠಡಿ ನಿರ್ವಹಿಸುವ, ತುರ್ತು ಸಂದರ್ಭದಲ್ಲಿ ಸರ್ಕಾರಿ ಸಂಸ್ಥೆಗಳ ನೆರವು ನೀಡುವ, ವಿಶಾಖಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವ ಕುರಿತೂ ಈ ಯುವತಿಯರು ತರಬೇತಿ ಪಡೆದಿದ್ದಾರೆ.
ಹತ್ತು ಲಕ್ಷದಲ್ಲಿ ನೂರು ಆಯ್ಕೆ! :
ಮಹಿಳಾ ಮಿಲಿಟರಿ ದಳಕ್ಕೆ ಅರ್ಜಿ ಆಹ್ವಾನಿಸಿದಾಗ, ದೇಶಾದ್ಯಂತ ಹತ್ತು ಲಕ್ಷ ಅರ್ಜಿಗಳು ಬಂದಿದ್ದವು. ಎರಡು ಲಕ್ಷ ಜನ ರ್ಯಾಲಿಯಲ್ಲಿ ಭಾಗವಹಿಸಿದ್ದರು. 250ಜನ ಪರೀಕ್ಷೆ ಬರೆದಿದ್ದರು. ಆ ಪೈಕಿ ನೂರು ಯುವತಿಯರನ್ನು ಆಯ್ಕೆಮಾಡಲಾಗಿದೆ. ಹೆಚ್ಚು ಅರ್ಜಿಗಳು ಬಂದಿದ್ದರಿಂದ ಆಯ್ಕೆ ಕಠಿಣವಾಯಿತು.ಹಾಗಾಗಿ, ಶೈಕ್ಷಣಿಕ ಅರ್ಹತೆಯನ್ನು ಹೆಚ್ಚಿಸಲಾಯಿತು. ಮುಂದಿನ ದಿನಗಳಲ್ಲಿಪ್ರತಿ ವರ್ಷ ನೂರು ಮಹಿಳಾ ಮಿಲಿಟರಿ ಪೊಲೀಸರಿಗೆ ತರಬೇತಿ ನೀಡಿ, ಸೇನೆಗೆಸೇರ್ಪಡೆಗೊಳಿಸಲಾಗುವುದು. ಒಟ್ಟಾರೆ 2037ರ ವೇಳೆಗೆ 1,700 ಪೊಲೀಸರ ನಿಯೋಜನೆ ಗುರಿ ಇದೆ ಎಂದು ಕಮಾಂಡಿಂಗ್ ಆಫೀಸರ್ ಜೂಲಿ ತಿಳಿಸಿದರು.
ಧ್ವನಿ ಕೇಳಿ ಗುರುತಿಸಿದ್ರು! :
“ತರಬೇತಿ ಮಧ್ಯೆ ಸೂಟಿ ಸಿಕ್ಕಾಗ ಊರಿಗೆ ಹೋಗಿದ್ವಿ. ಆದ್ರ, ಊರಲ್ಲಿ ನಮ್ಮನ್ನು ಒಂಥರಾ ನೋಡಿದ್ರು. ಯಾರೋ ಬೇರೆ ರಾಜ್ಯದಿಂದ ಬಂದವ್ರಂಗೆ ಕಂಡ್ರು. ನಮ್ಮ ಧ್ವನಿ ಕೇಳಿದಮ್ಯಾಲೆ ಗುರುತು ಹಿಡಿದು ಲಟಿಕಿ ಮುರಿದ್ರು…’!ತರಬೇತಿ ಪಡೆಯುತ್ತಿರುವ ಉತ್ತರ ಕರ್ನಾಟಕದ ಎಂಟೂ ಯುವತಿಯರುಹೀಗೆ ತಮ್ಮೂರಿನ ಮೊದಲ ಭೇಟಿಯ ಅನುಭವ ಹಂಚಿಕೊಳ್ಳುತ್ತಿದ್ದಾಗ ಅವರ ಮುಖದಲ್ಲಿ ಸಾರ್ಥಕತೆಯ ಭಾವ ಎದ್ದುಕಾಣುತ್ತಿತ್ತು.