ಗುಳೇದಗುಡ್ಡ: ಕಳೆದ ವಾರ ಸುರಿದ ಭಾರಿ ಮಳೆ ಹಾಗೂ ಹವಾಮಾನದಲ್ಲಿನ ಬದಲಾವಣೆಯಿಂದ ತಾಲೂಕಿನ ಹಲವು ಕಡೆಗಳಲ್ಲಿ ಬೆಳೆದ ಬೆಳೆಗೆ ಕೀಟಬಾಧೆ ಆವರಿಸಿದ್ದು, ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತರ ಚಿಂತೆಗೀಡು ಮಾಡಿದೆ. ತಾಲೂಕಿನ ಕೋಟೆಕಲ್, ಮುರುಡಿ, ತೆಗ್ಗಿ, ಹಂಸನೂರ, ತೋಗುಣಶಿ ಸೇರಿದಂತೆ ನಾನಾ ಭಾಗಗಳಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಹಾಕಲಾಗಿದ್ದ ಜೋಳ, ಶೇಂಗಾ, ಕಡಲೆ, ಅಲಸಂಧಿ ಬೆಳೆಗಳಿಗೆ ಕೀಟಬಾಧೆ ಕಾಣಿಸಿಕೊಂಡಿದ್ದು, ರೈತರನ್ನು ಮತ್ತಷ್ಟು ಆತಂಕ್ಕೀಡು ಮಾಡಿದೆ. ಮೊದಲೇ ಅತಿವೃಷ್ಟಿಯಿಂದ ಹಾನಿಯಾಗಿದ್ದು, ಅದರಲ್ಲಿ ಈಗ ಕೀಟಬಾಧೆಯಿಂದ ರೈತರಿಗೆ ಗಾಯದ ಮೇಲೆ ಬರೆ
ಎಳೆದಂತಾಗಿದೆ.
13500 ಹೆಕ್ಟೇರ್ ಬೆಳೆ ಪ್ರದೇಶ: ತಾಲೂಕಿನಲ್ಲಿ ಕಡಲೆ 3800ಹೆಕ್ಟೇರ್, ಹಿಂಗಾರಿ ಜೋಳ 4500 ಹೆಕ್ಟೇರ್, ಶೇಂಗಾ 2500 ಹೆಕ್ಟೇರ್, 2760 ಹೆಕ್ಟೇರ್ ಇತರೆ ಬೆಳೆಗಳು ಒಟ್ಟು 13500 ಹೆಕ್ಟೇರ್ ಬೆಳೆ ಪ್ರದೇಶ ತಾಲೂಕಿನ ವ್ಯಾಪ್ತಿಯಲ್ಲಿದ್ದು, ಇಷ್ಟೇ ಹೆಕ್ಟೇರ್ ಬೆಳೆಗೆ ಕೀಟಬಾಧೆ ಕಾಣಿಸಿಕೊಂಡಿದೆ ಎಂದು ಹೇಳಲು ಸಾಧ್ಯವಿಲ್ಲ. ಆಯಾ ಬೆಳೆಗಳ ಅವ ಧಿಯ ಮೇಲೆ ಈ ಕೀಟ ಕಾಣಿಸಿಕೊಳ್ಳುತ್ತದೆ. 50-60 ದಿನಗಳಲ್ಲಿ ಬೆಳೆದ ಬೆಳೆಗೆ ಈ ಕೀಟಬಾಧೆ ಕಾಣಿಸಿಕೊಳ್ಳುತ್ತದೆ ಎಂಬುದು ಕೃಷಿ ಅಧಿಕಾರಿಗಳ ಮಾತು.
ಸೈನಿಕ ಹುಳು ಕಾಟ: ಕೋಟೆಕಲ್, ಮುರುಡಿ, ತೋಗುಣಶಿ, ಇಂಜಿನವಾರಿ, ಹಳದೂರ ಗ್ರಾಮದಲ್ಲಿ ಬೆಳೆದ ಜೋಳ, ಗೋವಿನಜೋಳಕ್ಕೆ ಸೈನಿಕ ಹುಳುವಿನ ಕೀಟ ಅಲ್ಲದೇ ಶೇಂಗಾ, ಅಲಸಂಧಿ ಬೆಳೆಗೆ ನ್ಪೋಡೊಕ್ಟರ್ ಕೀಟ ಕಾಣಿಸಿಕೊಂಡಿದ್ದು, ಇದು ಎಲೆಗಳನ್ನು ತಿನ್ನುತ್ತಿರುವುದರಿಂದ ಕಷ್ಟಪಟ್ಟು ಬೆಳೆದ ಬೆಳೆ ಸಹ ಕೈಗೆ ಬಾರದಂತಾಗಿದೆ.
ಗಿಡದಿಂದ ಗಿಡಕ್ಕೆ ಹಾರುವ ಹುಳು: ಕೋಟೆಕಲ್, ಮುರುಡಿ ಗ್ರಾಮದ ಹೊಲಗಳಲ್ಲಿ ಚೆನ್ನಾಗಿ ಬೆಳೆದು ನಿಂತಿರುವ ಬೆಳೆಗಳಿಗೆ ನಾಲ್ಕು ರೀತಿಯ ಕೀಟಗಳು ಕಾಣಿಸಿಕೊಂಡಿವೆ. ಕೀಟಗಳ ಸೀರು, ಅಲ್ಲದೇ ಕಪ್ಪು ಬಣ್ಣದ ಹುಳ ಹಾರುತ್ತ ಗಿಡದಿಂದ ಗಿಡಕ್ಕೆ ಹಾರಿ ಶೇಂಗಾ, ಕಡಲೆ, ಅಲಸಂಧಿ, ಜೋಳ, ಎಳ್ಳು, ಹುರುಳಿ ಮುಂತಾದ ಬೆಳೆಗಳ ನಾಶವಾಗುತ್ತಿವೆ.
ಯಾವ ಬೆಳೆಗೆ ಯಾವ ಔಷಧ: ಸಹಜವಾಗಿ ಹವಾಮಾನ ಬದಲಾವಣೆಯಿಂದ ಈ ಬೆಳೆಗಳಿಗೆ ಕೀಟಬಾಧೆ ಕಾಣಿಸಿಕೊಳ್ಳುತ್ತದೆ. ಕಡಲೆಗೆ ಹಸಿರುಕಾಯಿ ಕೊರಕ, ಜೋಳಕ್ಕೆ ಫಾಲ್ ಸೈನಿಕ ಹುಳು, ಶೇಂಗಾಕ್ಕೆ ಸ್ಫೋಡೊಪ್ಟೆರಾ ಲಿಟುರಾ ಜಾತಿಯ ಕೀಟ ಕಾಣಿಸಿಕೊಳ್ಳುತ್ತದೆ. ಕಡಲೆ ಹಾಗೂ ಜೋಳಕ್ಕೆ ಇಮಾಮೆಕ್ಟೆನ್ ಬೆಂಜುಯೆಟ್ ಸಿಂಪರಿಸಿದ ನಂತರ ಮತ್ತೆ ಹುಳು ಕಂಡರೆ ಕೊರಾಜಿನ್ ಸಿಂಪರಣೆ ಮಾಡಬೇಕು. ಶೇಂಗಾಕ್ಕೆ ಪ್ರೋಫೆನೋಪಾಸ್ +ಮತ್ತು ಸೈಫರಮೆಟ್ರಿನ್ ಕಾಂಬಿ ಸಿಂಪರಣೆ ಮಾಡಬೇಕು. ಮತ್ತೆ ಹುಳು ಕಂಡರೆ ಕೊರಾಜಿನ್ ಸಿಂಪರಣೆ ಮಾಡಬೇಕು.
ಕಳೆದ 15ದಿನಗಳಿಂದ ಮೋಡ ಕವಿದ ವಾತಾವರಣ ಇರುವುದರಿಂದ ಕೀಟಗಳ ಜೀವನ ಚಕ್ರ ಅತಿ ಬೇಗ ಮುಗಿಯುವುದರಿಂದ ಹುಳುಗಳ ಸಂಖ್ಯೆ ಹೆಚ್ಚುತ್ತದೆ. ಇದರಿಂದ ಬೆಳೆಗಳಿಗೆ ಹಾನಿ ಹೆಚ್ಚುತ್ತದೆ. ಆದ್ದರಿಂದ ರೈತರು ಇಲಾಖೆ ತಿಳಿಸಿದ ಕೀಟನಾಶಕಗಳನ್ನು ಜಾಗರೂಕತೆಯಿಂದ ಬಳಸಿ ನಿಯಂತ್ರಣ ಮಾಡಬಹುದು ಎನ್ನುತ್ತಾರೆ ಕೃಷಿ ಅಧಿಕಾರಿ ಆನಂದ ಗೌಡರ.
ಮಲ್ಲಿಕಾರ್ಜುನ ಕಲಕೇರಿ