ವಿಜಯಪುರ: ಕೃಷಿ ಪ್ರಧಾನ ಭಾರತದಲ್ಲಿ ರೈತರು ಪರಿಶ್ರಮ ವಹಿಸಿ ಬೆಳೆ ಬೆಳೆದಾಗ ಮಾತ್ರವೇ ದೇಶವಾಸಿಗಳು ನೆಮ್ಮದಿಯಿಂದ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯ. ಆದರೆ ಪ್ರಸ್ತುತ ಸಂದರ್ಭದಲ್ಲಿ ಕೃಷಿ ವ್ಯವಸ್ಥೆ ಹಲವು ಸಮಸ್ಯೆ ಎದುರಿಸುತ್ತಿದೆ. ರೈತನಿಗೆ ಬೆಲೆ ನೀಡುವಲ್ಲಿ ಮೋಸ, ತೂಕದಲ್ಲಿ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸಂಗಮೇಶ ಸಗರ ಹೇಳಿದರು.
ಕೋಡಿಹಳ್ಳಿ ಚಂದ್ರಶೇಖರ ಬಣದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿಜಯಪುರ ತಾಲೂಕಿನ ನೂತನ ಪದಾಧಿಕಾರಿಗಳಿಗೆ ನೇಮಕ ಪತ್ರ ವಿತರಿಸಿ ಮಾತನಾಡಿದ ಅವರು, ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ರೈತರೆಲ್ಲರನ್ನೂ ಸಂಘಟಿತ ವ್ಯವಸ್ಥೆಗೆ ತರಬೇಕಿದೆ ಎಂದರು.
ಯಾವೊಬ್ಬ ರೈತನಿಗೂ ಅನ್ಯಾಯವಾದರೆ ರೈತ ಸಂಘಟನೆ ಧ್ವನಿ ಎತ್ತಿ, ನ್ಯಾಯ ಒದಗಿಸುವುದು ಮೂಲ ಉದ್ದೇಶ. ಅಲ್ಲದೇ ಸರ್ಕಾರ ರೈತರಿಗಾಗಿ ರೂಪಿಸುವ ಯೋಜನೆಗಳನ್ನು ಅರ್ಹ ಪ್ರತಿಯೊಬ್ಬ ರೈತನಿಗೂ ತಿಳಿಸುವ ಮಹತ್ತರ ಜವಾಬ್ದಾರಿ ನಿರ್ವಹಿಸಬೇಕಿದೆ ಎಂದರು.
ವಿಜಯಪುರ ತಾಲೂಕಾಧ್ಯಕ್ಷರಾಗಿ ನೇಮಕಗೊಂಡ ರಾಕೇಶ ಕೋಟಿ, ಉಪಾಧ್ಯಕ್ಷ ಪ್ರತಾಪ ನಾಗರಗೋಜಿ, ಸಂಚಾಲಕರನ್ನಾಗಿ ಚಂದ್ರಶೇಖರ ನಾಗರಗೋಜಿ ಅವರನ್ನು ಆದೇಶ ಪ್ರತಿ ನೀಡಿ, ಹಸಿರು ಶಾಲು ಹೊದಿಸಿ ಸನ್ಮಾನಿಸಲಾಯಿತು.
ನೂತನ ಪದಾಧಿಕಾರಿಗಳಿಗೆ ಸಂಘಟನೆಯನ್ನು ಬಲಪಡಿಸಲು ವಿಜಯಪುರ ತಾಲೂಕಿನ ಎಲ್ಲ ಹೋಬಳಿ ಮತ್ತು ಗ್ರಾಮಗಳಲ್ಲಿ ರೈತರೊಂದಿಗೆ ಸಂಪರ್ಕ ಇರಿಸಿಕೊಳ್ಳಬೇಕು. ಜಾತಿ, ಮತ, ಪಕ್ಷ ಪಂಗಡದ ಹಮಗಿಲ್ಲದೇ ರೈತರೆಲ್ಲರೂ ಸಂಘಟಿತರಾಗಿ ಅನ್ಯಾಯದ ವಿರುದ್ಧ ಧ್ವನಿ ಎತ್ತುಂವತೆ ಜಾಗೃತಿ ಮೂಡಿಸಬೇಕು ಎಂದರು.