ಯಲಹಂಕ: ಸ್ಥಳೀಯರು ಮಾತ್ರವಲ್ಲದೆ, ರಾಜಧಾನಿಯ ನಾಗರಿಕರನ್ನೂ ತನ್ನತ್ತ ಸೆಳೆದಿದ್ದ, ಇಲ್ಲಿನ ಹೊಸ ಬೀದಿಯ ರೈತಮಿತ್ರ ಗಣಪನ ಮೂರ್ತಿ ವಿಸರ್ಜನೆ ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿತು. ಹುಲಿ ಕುಣಿತ, ಅರ್ಜುನ ನೃತ್ಯ, ವಾದ್ಯ ಮೇಳ, ಶಿವ, ಪಾರ್ವತಿ ಒಳಗೊಂಡಂತೆ 30ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿದ್ದರಿಂದ ಮೆರವಣಿಗೆ ಮತ್ತಷ್ಟು ಕಳೆಗಟ್ಟಿತ್ತು.
ವಿನಾಯಕ ರೈತ ಬಾಲಕರ ಕನ್ನಡ ಸೇವಾ ಸಮಿತಿ ವತಿಯಿಂದ ಹೊಸಬೀದಿಯಲ್ಲಿ ಪ್ರತಿಷ್ಠಾಪಿಸಿದ್ದ ರೈತಮಿತ್ರನ ರೂಪದಲ್ಲಿನ ಗಣೇಶ ಮೂರ್ತಿ ಈ ಬಾರಿ ಗಣೇಶೋತ್ಸವದ ಆಕರ್ಷಣೆಯ ಕೇಂದ್ರವಾಗಿತ್ತು. ತ್ತುಗಳನ್ನು ಹೂಡಿಕೊಂಡು ಹೊಲ ಹೂಳುತ್ತಿರುವ ರೈತ ಗಣಪ, ಮಗನಿಗಾಗಿ ಅಡುಗೆ ತಯಾರಿಸುವ ಪಾರ್ವತಿ ಮೂರ್ತಿಗಳನ್ನು ನೋಡಲು ಜನ ಮುಗಿಬಿದ್ದಿದ್ದರು.
ಸುಮಾರು ಒಂದು ತಿಂಗಳ ಕಾಲ ಸ್ಥಾಪನೆಗೊಂಡಿದ್ದ ಮೂರ್ತಿಯ ವಿಸರ್ಜನೆ ವೇಳೆ ರಾಜ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ನೆರೆದಿದ್ದು ವಿಶೇಷವಾಗಿತ್ತು. ಆನೆಯೊಂದಿಗೆ ಭರ್ಜರಿ ಮೆರವಣಿಗೆಯಲ್ಲಿ ಸಾಗಿದ ಗಣಪನ ಮೂರ್ತಿಗೆ ಪಿರಂಗಿ ಮೂಲಕ ಪುಷ್ಪಾರ್ಚನೆ ಮಾಡಲಾಯಿತು.
ಚಂಡಿ ವಾದ್ಯ, ಸಾಸಿಕ್ ಡೋಲು, ಶಕ್ತಿ ತಮಟೆ, ಮಂಡ್ಯ ತಮಟೆ, ಕೋಲಾರ ತಮಟೆ, ಬಳ್ಳಾರಿ ತಮಟೆ, ಆಂಧ್ರ ತಮಟೆ ಸದ್ದುಗಳು ನೆರೆದವರು ನಿಂತಲ್ಲೇ ಕುಣಿಯುವಂತೆ ಮಾಡಿದ್ದು ಸುಳ್ಳಲ್ಲ. ಸ್ಥಳೀಯ ಮುಖಂಡರಾದ ಸಂಘದ ಅಧ್ಯಕ್ಷ ವೈ.ಸಿ.ವೆಂಕಟೇಶ್, ಮು.ಕೃಷ್ಣಮೂರ್ತಿ, ಶಾಸಕ ಎಸ್.ಅರ್.ವಿಶ್ವನಾಥ್, ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಅ.ಬ.ಶಿವಕುಮಾರ್ ಭಾಗವಸಿದ್ದರು. ಸಂಜೆವರೆಗೂ ಮೆರವಣಿಗೆ ನಡೆಸಿ ಅಮಾನಿ ಕೆರೆಯಲ್ಲಿ ಮೂರ್ತಿ ವಿಸರ್ಜನೆ ಮಾಡಲಾಯಿತು.