Advertisement
ಚೌತಿ ದಿನದಂದು ದೇವಸ್ಥಾನಗಳಲ್ಲಿ ತೆನೆ ತುಂಬಿಸಿಕೊಳ್ಳುವ ಆಚರಣೆ ನಡೆದಿದೆ. ಆದರೆ ಬೇಸಾಯ ಅವಲಂಬಿಸಿರುವ ಮನೆಗಳಲ್ಲಿ ಶುಕ್ರವಾರ (ಸೆ. 28) ತೆನೆ ಹಬ್ಬದ ಕಾರ್ಯಕ್ರಮ ನಡೆಯಿತು. ತುಳುವಿನ ನಿರ್ನಾಲ್ ತಿಂಗಳಿನ ಎರಡನೇ ಶುಕ್ರವಾರ ಅಥವಾ ಸಂಕ್ರಮಣದ ಎರಡನೇ ಶುಕ್ರವಾರ ಸಾಮಾನ್ಯವಾಗಿ ತೆನೆ ತುಂಬಿಸಿಕೊಳ್ಳುವ ಕಾರ್ಯಕ್ರಮವನ್ನು ಬೇಸಾಯದ ಮನೆಗಳಲ್ಲಿ ಆಚರಿಸುತ್ತಾರೆ.
Related Articles
ರೈತ ವರ್ಗ ಅತ್ಯಂತ ಆನಂದ ಪಡುವುದು ಏಣೇಲು ಕೊಯ್ಲಿನ ಸಂದರ್ಭದಲ್ಲಿ. ರೈತ ಕುಟುಂಬಕ್ಕೆ ಆರ್ಥಿಕ ಶಕ್ತಿಯನ್ನು ಸಂಚಯಿಸಿ ಕೊಡುವುದು ಇದೇ ಅವಧಿ. ಕಷ್ಟದ ದಿನಗಳು ದೂರವಾಗಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಿನಗಳು ಎಂದರ್ಥ. ಆದ್ದರಿಂದ ಭೂಮಿ ತಾಯಿಗೆ ಪೂಜೆ ಮಾಡುವ ಸಂಪ್ರದಾಯ ಬೆಳೆಯುತ್ತಾ ಬಂದಿದೆ. ಫಲ ತುಂಬಿ ನಿಂತ ಭತ್ತದ ತೆನೆಗೆ ಪೂಜೆ ಮಾಡಿ, ಮನೆ ತುಂಬಿಸಿಕೊಳ್ಳಲಾಗುತ್ತದೆ.
Advertisement
ಮನೆ ತುಂಬಿಸಿಕೊಳ್ಳುವುದುಮುಂಜಾನೆ ಬೇಗನೆ ಏಳುವ ಮನೆಯ ಕೆಲವರು ಗದ್ದೆಯಲ್ಲಿ ಬೆಳೆದು ನಿಂತ ಫಲವತ್ತಾದ ಒಂದಷ್ಟು ತೆನೆಗಳನ್ನು ಕಿತ್ತು ಅಲ್ಲಿಯೇ ಬಿಟ್ಟು ಬರುತ್ತಾರೆ. ಅನಂತರ ಮನೆ ಮಂದಿ ಜತೆಗೆ ಹೋಗಿ, ಭತ್ತದ ತೆನೆಗಳನ್ನು ಹಿಡಿದುಕೊಂಡು, ಪೊಲಿ ಪೊಲಿ ಪೊಲಿಯೇರಡ್ (ಸಂಪತ್ತು ತುಂಬಿ ಬರಲಿ) ಎಂದು ಹಾಡುತ್ತಾ ಮನೆ ಕಡೆಗೆ ಹೆಜ್ಜೆ ಹಾಕುತ್ತಾರೆ. ಮನೆ ಅಂಗಳದಲ್ಲಿ ತಂದಿಟ್ಟ ಮರದ ಕಲಸೆ, ಬಳ್ಳಿಯಿಂದ ಮಾಡಿರುವ ಮಿಜ (ಸೂಪಿನ ಆಕಾರದ) ದಲ್ಲಿ ತುಂಬಿಸುತ್ತಾರೆ. ಇದಕ್ಕೆ ಮುಳ್ಳು ಸೌತೆ, ದಡ್ಡಲ್ ಮರದ ನಾರಿನ ಹಗ್ಗ, ಮಾವಿನ ಎಲೆ, ಹಲಸಿನ ಎಲೆ, ಬಿದಿರಿನ ಎಲೆ, ನೈಕಂರ್ಬು ಎಲೆ, ಇಲ್ಲ್ ಬೂರು ಎಲೆಗಳನ್ನು ಹಾಕಿ, ಧೂಪ ಹಾಕಿ ಪೂಜಿಸುತ್ತಾರೆ. ಇದನ್ನು ಮನೆಯೊಳಗೆ ಕೊಂಡೊಯ್ಯಲಾಗುತ್ತಾದೆ. ದೈವ – ದೇವರ ಕೊಣೆಯಲ್ಲಿ ಇದನ್ನು ಇಟ್ಟು, ಭತ್ತದ ತೆನೆಯಿಂದ ಅಕ್ಕಿ ತೆಗೆದು ದೀಪಕ್ಕೆ ಹಾಕಿ ಪೂಜೆ ನಡೆಸುತ್ತಾರೆ. ಈ ಅಕ್ಕಿಯನ್ನು ಅಟ್ಟಕ್ಕೆ ಹಾಕುವ ಸಂಪ್ರದಾಯವನ್ನು ಕೆಲವರು ಆಚರಿಸುತ್ತಾರೆ. ಇವೆಲ್ಲವನ್ನು ಸೂರ್ಯ ಉದಯಿಸುವ ಮೊದಲೇ ನಡೆಸಬೇಕು ಎಂಬ ನಂಬಿಕೆ ಇದೆ. ತೆನೆ ಹಬ್ಬ
ಸಾಮಾನ್ಯವಾಗಿ ಚೌತಿ ಸಂದರ್ಭ ಎಲ್ಲರೂ ತೆನೆ ಹಬ್ಬ ಆಚರಿಸಿದ್ದಾರೆ. ತೆನೆಯ ಜತೆಗೆ ಒಂದಷ್ಟು ವಿಧದ ಸುವಸ್ತುಗಳನ್ನು ಇಟ್ಟು, ಮನೆಗೆ ಕಟ್ಟಿರುತ್ತಾರೆ. ಕ್ರಿಶ್ಚಿಯನ್ ಸಮುದಾಯದಲ್ಲಿ ಮೋಂತಿ ಹಬ್ಬದ ಹೆಸರಿನಲ್ಲಿ ತೆನೆ ತುಂಬಿಸುವ ಕಾರ್ಯಕ್ರಮ ನಡೆದಿದೆ. ಇದೇ ಆಚರಣೆಯನ್ನು ಬೇಸಾಯದ ಮನೆಗಳಲ್ಲಿಯೂ ಶುಕ್ರವಾರ ಆಚರಿಸಲಾಯಿತು. ತೆನೆಯ ಜತೆಗೆ ಪ್ರಕೃತಿಯಲ್ಲಿ ದೊರೆತ ವಿವಿಧ ಐದು ವಸ್ತುಗಳನ್ನು ಜತೆಗಿಟ್ಟು ಒಂದು ಎಲೆಯಲ್ಲಿ ಕಟ್ಟಲಾಯಿತು. ಇದನ್ನು ಮನೆಯ ಮಾಡು, ತೆಂಗಿನ ಮರ, ಅಡಿಕೆಮರ, ವಾಹನಗಳಿಗೆ ಕಟ್ಟಿದರು. ಮನೆ ಬಾಗಿಲಿಗೆ ಭತ್ತದ ತೆನೆ ಹಾಗೂ ಹಲವು, ಮಾವಿನ ಎಲೆಗಳಿಂದ ಶೃಂಗಾರ ಮಾಡಲಾಗುತ್ತದೆ. ರಾತ್ರಿ ಹೊಸ ಅಕ್ಕಿ ಊಟ (ಪುದ್ವಾರ್) ಮಾಡಲಾಗುತ್ತದೆ. ಸಂಭ್ರಮಪಟ್ಟೆವು
ಬೇಸಾಯ ದೂರ ಆಗುತ್ತಿದ್ದಂತೆ ತೆನೆ ತುಂಬಿಸುವ ಕಾರ್ಯವೂ ದೂರವಾಗುತ್ತಿದೆ. ತೆನೆ ಹಬ್ಬವನ್ನು ಆಚರಿಸಲು ದೇವಸ್ಥಾನಗಳನ್ನೇ ಆಶ್ರಯಿಸಿರುವವರು ಇಂದು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಿದ್ದು ಕೆಲವು ಮನೆಗಳಲ್ಲಾದರೂ ತೆನೆಹಬ್ಬ ನಡೆಯುತ್ತದೆ ಎನ್ನುವುದು ಖುಷಿಯ ವಿಚಾರ. ಇದನ್ನು ಸಾಂಪ್ರದಾಯಿಕವಾಗಿ ಕುರಲ್ ಪರ್ಬ ಎನ್ನುತ್ತೇವೆ. ಶುಕ್ರವಾರ ತೆನೆ ಹಬ್ಬ ಆಚರಿಸಿ ಸಂಭ್ರಮಪಟ್ಟೆವು.
– ರಾಮಣ್ಣ ಗೌಡ ಪಾಲೆತ್ತಾಡಿ
ರೈತ ಗಣೇಶ್ ಎನ್. ಕಲ್ಲರ್ಪೆ