ಬೆಂಗಳೂರು: ಕಬ್ಬಿಗೆ ಬೆಂಬಲ ಬೆಲೆ, ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರು ಸೋಮವಾರ ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದ್ದು, ಏತನ್ಮಧ್ಯೆ ರೈತರನ್ನು ಅವಮಾನಿಸುವ ರೀತಿ ಹೇಳಿಕೆ ಕೊಟ್ಟ ಮೇಲೂ ಕ್ಷಮೆ ಕೇಳದ ಹಾಗೂ ರೈತರ ಸಮಸ್ಯೆ ಬಗೆಹರಿಸುವ ಬಗ್ಗೆ ಸರ್ಕಾರದ ನಿಲುವು ಸ್ಪಷ್ಟಪಡಿಸಲು ಸಿಎಂಗೆ ರೈತರು ಒಂದೂವರೆ ಗಂಟೆಗಳ ಕಾಲ ಡೆಡ್ ಲೈನ್ ಕೊಟ್ಟಿದ್ದಾರೆ.
ಫ್ರೀಡಂಪಾರ್ಕ್ ರಸ್ತೆಯಲ್ಲೇ ಕುಳಿತು ಧರಣಿ:
ವಿಧಾನಸೌಧ ಮುತ್ತಿಗೆ ಹಾಕಲು ಪ್ರತಿಭಟನೆಯಲ್ಲಿ ನಡೆಸುತ್ತ ಬಂದ ರೈತರನ್ನು ಪೊಲೀಸರು ಫ್ರೀಡಂಪಾರ್ಕ್ ಬಳಿಯೇ ತಡೆದು ನಿಲ್ಲಿಸಿದ್ದಾರೆ. ಇದರಿಂದ ಆಕ್ರೋಶಿತರಾದ ರೈತರು ರಸ್ತೆಯಲ್ಲಿಯೇ ಮಲಗಿ ಧರಣಿ ನಡೆಸುತ್ತಿದ್ದಾರೆ. ಫ್ರೀಡಂ ಪಾರ್ಕ್ ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸಿ ಸಮಸ್ಯೆ ಆಲಿಸಬೇಕೆಂದು ಪಟ್ಟು ಹಿಡಿದಿರುವ ರೈತ ಮುಖಂಡರು ಮಧ್ಯಾಹ್ನ 2ಗಂಟೆಯೊಳಗೆ ಅಂತಿಮ ನಿಲುವು ಪ್ರಕಟಿಸುವಂತೆ ಗಡುವು ನೀಡಿದ್ದಾರೆ.
ಬಂಡೆಪ್ಪ ಕಾಶೆಂಪೂರ್ ಗೆ ರೈತರಿಂದ ತರಾಟೆ:
ಸಹಕಾರ ಸಚಿವ ಬಂಡೆಪ್ಪ ಕಾಶಂಪುರ ಅವರು ಪ್ರತಿಭಟನಾ ನಿರತ ಸ್ಥಳಕ್ಕೆ ಆಗಮಿಸಿದ್ದ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೆಟಿ ಗಂಗಾಧರ್ ಅವರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ನನಗೆ ಕ್ಯಾಬಿನೆಟ್ ಮೀಟಿಂಗ್ ಇದೆ ಎಂದು ಹೊರಡುತ್ತೇನೆ ಎಂದಾಗ ನೀವು ಮೊದಲು ನಮಗೆ ಲಿಖಿತವಾಗಿ ಭರವಸೆ ನೀಡಿ ನಂತರ ಬೇಕಾದರೆ ಹೋಗಿ ಎಂದು ರೈತ ಮುಖಂಡರು ತರಾಟೆಗೆ ತೆಗೆದುಕೊಂಡರು.