Advertisement

ಭೂಸ್ವಾಧೀನ ದರ ನಿಗದಿ ಸಭೆಗೆ ರೈತರ ಬಹಿಷ್ಕಾರ

05:44 PM Oct 21, 2022 | Team Udayavani |

ದೇವನಹಳ್ಳಿ: ಭೂಸ್ವಾಧೀನ ರೈತರು ಹಾಗೂ ಕೆಐಎಡಿಬಿ ಅಧಿಕಾರಿಗಳ ನಡುವೆ ಆಯೋಜಿಸಿದ್ದ ಭೂ ಸ್ವಾಧೀನ ದರ ನಿಗದಿ ಸಭೆ ವಿಫ‌ಲವಾಗಿದ್ದು, ಜಿಲ್ಲಾಧಿಕಾರಿ ಆರ್‌. ಲತಾ ಅವರು ವಾಪಸ್‌ ಆದ ಘಟನೆ ದೇವನಹಳ್ಳಿ ತಾಲೂಕಿನ ಕುಂದಾಣ ಬಳಿ ನಡೆದಿದೆ.

Advertisement

ತಾಲೂಕಿನ ಅರವನಹಳ್ಳಿ, ದೊಡ್ಡಗೊಲ್ಲಹಳ್ಳಿ, ಚಪ್ಪರ ದಹಳ್ಳಿ, ಭೈರದೇನಹಳ್ಳಿ ಗ್ರಾಮಗಳಲ್ಲಿ 867ಎಕರೆಯಷ್ಟು ಕೆಐಎಡಿಬಿಯಿಂದ ಭೂಸ್ವಾಧೀನ ಪಡಿಸಿಕೊಂಡಿದ್ದು, ಈಗಾಗಲೇ ಅಂತಿಮ ನೊಟಿμಕೇಷನ್‌ ಆಗಿದೆ. ಅಂತಿಮವಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ದರ ನಿರ್ಧಾರ ಮಾಡಬೇಕಾದ ಪ್ರಕ್ರಿಯೆ ಇತ್ತು. ಈ ಭಾಗದ ಜಮೀನುಗಳ ರೈತರು ಮತ್ತು ಮಾಲೀಕರನ್ನು ನೋಟಿಸ್‌ ನೀಡಿ ಸಭೆಗೆ ಕರೆ ನೀಡಲಾಗಿತ್ತು. ಆದರೆ, ರೈತರು ಭೂಸ್ವಾಧೀನ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿ ಸಭೆಗೆ ಬಹಿಷ್ಕಾರ ಹಾಕುವುದರ ಮೂಲಕ ರೈತರು ಆಕ್ರೋಶವನ್ನು ಹೊರಹಾಕಿದರು.

ರೈತರ ಆಕ್ರೋಶದ ನುಡಿಗಳು: ಈ ವೇಳೆ ಮಾತನಾಡಿದ ರೈತರು, ಕುಂದಾಣ ಹೋಬಳಿ ವ್ಯಾಪ್ತಿಯ ಫ‌ಲವತ್ತಾದ ಐದು ಗ್ರಾಮಗಳ ಭೂಮಿಯನ್ನು ಕೆಐಎಡಿಬಿಗೆ ಯಾವುದೇ ಕಾರಣಕ್ಕೂ ಕೊಡಲು ಆಗುವುದಿಲ್ಲವೆಂದು ಪ್ರತಿ ಗ್ರಾಮದ ಜನರು ಒಗ್ಗೂಡಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಹಿಂದೆಯೂ ಸಹ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ಒತ್ತಾಯಿಸಿ ಪ್ರತಿಭಟನೆಯನ್ನು ಮಾಡಲಾಗಿತ್ತು. ನಮ್ಮ ಪ್ರಾಣ ಹೋದರೂ ಸಹ ಭೂಮಿ ಕೊಡುವುದಿಲ್ಲ. ಇದೇ ರೀತಿ ಮುಂದುವರಿ ದರೆ, ತೀವ್ರ ಪ್ರತಿಭಟನೆ ಮಾಡ್ತೇವೆ ಎಂದರು.

ತಾಲೂಕಾದ್ಯಂತ ಭೂಕಬಳಿಕೆ ಹುನ್ನಾರ: ಭೂ ಸ್ವಾಧೀನ ಹೋರಾಟ ನಡೆಯುತ್ತಿದ್ದು, ದೇವನಹಳ್ಳಿ ತಾಲೂಕಾದ್ಯಂತ ಭೂಕಬಳಿಕೆ ಹುನ್ನಾರ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಎಂತಹ ಪರಿಸ್ಥಿತಿ ಬಂದರೂ, ಭೂಮಿ ಕೊಡಲಾಗುವುದಿಲ್ಲ. ಒಂದು ವೇಳೆ ಸ್ವಾಧೀನ ವಾದ ನಂತರ ಜನಗಳಿಗೆ ಕಷ್ಟ ಬಂದರೆ, ದೇಶಾಂತರ ಹೋಗಿ ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾಗುತ್ತದೆ. ನಮ್ಮ ವಂಶಪರಂಪರೆಯಾಗಿ ಉಳಿಸಿಕೊಂಡು ಬಂದಂತಹ ಜಮೀನು ಈಗ ಭೂಸ್ವಾಧೀನ ಮಾಡಿಕೊಂಡರೆ, ನಮ್ಮ ಭವಿಷ್ಯದ ಮೇಲೆ ಕಲ್ಲು ಬೀಳುತ್ತದೆ. ಭೂ ಸ್ವಾಧೀನಕ್ಕೆ ಮೂರ್ಕಾಸು ಕೊಡುತ್ತಾರೆ. ಅದನ್ನು ನಾವು ಖರ್ಚು ಮಾಡಿ ಹೋಗ್ಬಿಡ್ತಿವಿ. ಆದರೆ, ನಮ್ಮ ಮಕ್ಕಳು ಏನು ತಿನ್ನಬೇಕು. ಆಗ ಮುಂದಿನ ದಿನಗಳಲ್ಲಿ ಮಕ್ಕಳೇ ಪ್ರಶ್ನಿಸುತ್ತಾರೆ. ಅದಕ್ಕೆ ಉತ್ತರ ಸರ್ಕಾರ ಕೊಡುತ್ತಾ.

ಏನೇ ಆಗಲಿ ನಾವು ಭೂಮಿ ಬಿಟ್ಟು ಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಆರ್‌.ಲತಾ ಸಹ ಸಭೆಗೆ ಹಾಜರಾಗಿದ್ದರು. ಆದರೆ, ರೈತರು ಒಳಗೆ ಹೋಗದೆ ಹೊರಗಡೆ ಉಳಿದಿದ್ದರಿಂದ ಕೆಲ ಕಾಲ ಜಿಲ್ಲಾಧಿಕಾರಿಗಳಿದ್ದು, ಮರಳಿ ಕಚೇರಿಗೆ ವಾಪಾಸ್‌ ಆದರು. ಜಮೀನಿಗೆ ಬೆಲೆಯನ್ನು ನಿಗದಿ ಪಡಿಸುವ ಪ್ರಕ್ರಿಯೆ ಮೊದಲ ಸಭೆ ವಿಫ‌ಲವಾಯಿತು.

Advertisement

ಅಭಿವೃದ್ಧಿಗೆ ಕೈಗಾರಿಕೆ ಸ್ಥಾಪನೆ ಅವಶ್ಯ: ರೈತರು ಭೂಸ್ವಾಧೀನಕ್ಕೆ ಭೂಮಿ ಕೊಡುವುದಿಲ್ಲವೆಂದು ಹೇಳುತ್ತಿದ್ದು, ಮುಂದಿನ ದಿನಗಳಲ್ಲಿ ರೈತರೊಂದಿಗೆ ಚರ್ಚಿಸಿ, ಸರ್ಕಾರದ ಹಂತದಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಎಲ್ಲಿ ಅವಶ್ಯಕತೆ ಇದೆಯೆಂಬ ಜಾಗಗಳಲ್ಲಿ ಕೈಗಾರಿಕಾ ಬರುತ್ತಿವೆಯೋ, ಅಂತಹ ಜಾಗದಲ್ಲಿ ಸರ್ಕಾರ ಭೂ ಸ್ವಾಧೀನ ಪಡಿಸಿಕೊಳ್ಳುತ್ತಿದೆ. ರೈತರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಸರ್ಕಾರದ ಹಂತದಲ್ಲಿ ಅಂತಿಮ ನೋಟಿμಕೆಷನ್‌ ಆಗಿದ್ದರಿಂದ ಇದನ್ನು ಕೈ ಬಿಡಲು ಬರುವುದಿಲ್ಲ. ದೇಶದ ಅಭಿವೃದ್ಧಿಗೆ ಕೈಗಾರಿಕೆ ಸ್ಥಾಪನೆ ಅವಶ್ಯಕತೆ ಇದೆ. ಅದಕ್ಕಾಗಿ ಈ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ತಹಶೀಲ್ದಾರ್‌ ಶಿವರಾಜ್‌, ಕೆಐಎಡಿಬಿ ವ್ಯವಸ್ಥಾಪಕ ಶಿವಾನಂದ್‌, ಪ್ರಥಮ ದರ್ಜೆ ಸಹಾಯಕ ಬಿ.ವಿ. ರಾಜು, ಭೂತಪಾಸಕ ಸತ್ಯಪ್ರಕಾಶ್‌, ಅವಿನಾಶ್‌, ತಾಂತ್ರಿಕ ಸಹಾಯಕ ಸುನೀಲ್‌, ಜಿಲ್ಲಾ ಕೃಷಿ ಇಲಾಖೆ ಉಪನಿರ್ದೇಶಕಿ ವಿನುತಾ, ಸಹಾಯಕ ಮುಜಾಮಿಲ್‌, ರಾಜಸ್ವ ನಿರೀಕ್ಷಕ ಚಿದಾನಂದ್‌, ಗ್ರಾಮಲೆಕ್ಕಿಗರಾದ ಲಾವಣ್ಯ, ರಾಮಚಂದ್ರ, ವಿಶ್ವನಾಥಪುರ ಪೊಲೀಸ್‌ ಠಾಣಾ ಇನ್ಸ್‌ಪೆಕ್ಟರ್‌ ನಾಗಪ್ಪ ಅಂಬಿಗೇರ್‌, ರೈತರು ಇದ್ದರು.

ಸಭೆಯಲ್ಲಿ ನಾಲ್ಕು ಗ್ರಾಮಗಳ ಭೂಸ್ವಾಧೀನವಿದೆ. ಸುಮಾರು 867ಎಕರೆಯಷ್ಟು ಜಮೀನಿಗೆ ದರ ನಿಗದಿ ಮಾಡಲು ಸಭೆ ಕರೆಯಲಾಗಿತ್ತು. ಕೆಐಎಡಿಬಿ ಎಸ್‌ಎಲ್‌ಎಒ ಮುಖೇನ ರೈತರಿಗೆ ಸಭೆ ಕರೆಯಲು ನೋಟಿಸ್‌ ಜಾರಿ ಮಾಡಲಾಗಿತ್ತು. ಆದರೆ, ಯಾರೂ ಒಪ್ಪದ ಕಾರಣ ಹಾಗೂ ಸಭೆಗೆ ಯಾರೂ ಬರದ ಕಾರಣದಿಂದ ಸಭೆ ನಡೆಸಲು ಅವಕಾಶ ಆಗದೆ ಅಲ್ಲಿಂದ ವಾಪಾಸ್‌ ಬಂದಿದ್ದೇನೆ.
● ಆರ್‌. ಲತಾ, ಜಿಲ್ಲಾಧಿಕಾರಿ

ರೈತರು ಸಭೆಗೆ ಬಂದು ಅವರ ಸಮಸ್ಯೆ ಹೇಳಿಕೊಳ್ಳಬಹುದಿತ್ತು. ಆದರೆ, ಸಭೆಗೆ ಬಾರದ ಕಾರಣ ಮುಂದಿನ ದಿನಗಳಲ್ಲಿ ಮತ್ತೂಂದು ದಿನಾಂಕ ನಿಗದಿಗೊಳಿಸಿ ಸಭೆ ಕರೆಯಲಾಗುತ್ತದೆ. ಸರ್ಕಾರದಿಂದ ಭೂಸ್ವಾಧೀನ ಪ್ರಕ್ರಿಯೆಗೆ ನಾಲ್ಕು ಗ್ರಾಮ ಗುರುತಿಸಿದ್ದು, ಅಂತಿಮ ಹಂತದಲ್ಲಿದೆ. ರೈತರ ಜಮೀನಿಗೆ ದರ ನಿಗದಿಗಾಗಿ ಜಿಲ್ಲಾಧಿಕಾರಿ ಮುಖೇನ ಸಭೆ ಕರೆಯಲಾಗಿತ್ತು.
● ಬಾಳಪ್ಪ ಹಂದಿಗುಂದ, ವಿಶೇಷ ಭೂಸ್ವಾಧೀನಾಧಿಕಾರಿ,

Advertisement

Udayavani is now on Telegram. Click here to join our channel and stay updated with the latest news.

Next