ದಾವಣಗೆರೆ: ಬಿರುಗಾಳಿಯಿಂದಾಗಿ ನೆಲಕ್ಕೆ ಉರುಳಿರುವ ಭತ್ತದ ಬೆಳೆಗೆ ಪರಿಹಾರ ನೀಡಲು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ಪಿಬಿ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಮನವಿ ಸಲ್ಲಿಕೆಗೂ ಮುನ್ನ ಮಾತನಾಡಿದ ಸಂಘದ ರಾಜ್ಯ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ, ಕೆಲ ದಿನಗಳ ಹಿಂದೆ ಬೀಸಿದ ಭಾರೀ ಬಿರುಗಾಳಿಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆಯಲಾದ ಭತ್ತದ ಬೆಳೆ ನೆಲಕ್ಕೆ ಉರುಳಿದೆ. ಇದರಿಂದ ತೀರಾ ನಷ್ಟವಾಗಿದೆ ಎಂದರು.
ಭದ್ರಾ ಅಚ್ಚುಕಟ್ಟು ಭಾಗದಲ್ಲಿ ಕಳೆದ 5 ಬೆಳೆ ಕಳೆದುಕೊಂಡಿದ್ದ ರೈತ ಈ ಬಾರಿ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ. ಆದರೆ, ಪ್ರಕೃತಿಯ ಮುನಿಸಿಗೆ ಇದೀಗ ಈ ಬೆಳೆ ಸಹ ಕೈಗೆ ಸಿಗಲಾರದಂತಹ ಸ್ಥಿತಿಗೆ ಈಡಾಗಿದ್ದಾನೆ. ಸರ್ಕಾರ ಕೂಡಲೇ ಇತ್ತಮ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಇನ್ನು 15 ದಿನ ಕಳೆದರೆ ಭತ್ತ ಕಟಾವು ಮಾಡಬೇಕಿತ್ತು. ಆದರೆ, ಇದೀಗ ನೆಲಕ್ಕೆ ಉರುಳಿದ ಭತ್ತದ ಪೈರಿನಿಂದ ಒಂದು ಕಾಳು ಭತ್ತ ಸಹ ಸಿಗಲಾರದಂತಹ ಸ್ಥಿತಿ ಇದೆ. ಎಕರೆಗೆ ಕನಿಷ್ಠ 50 ಚೀಲ ಭತ್ತ ಬೆಳೆಯುವ ಸಾಧ್ಯತೆ ಇದ್ದ ಈ ಸಂದರ್ಭದಲ್ಲಿ ಸಂಪೂರ್ಣ ಬೆಳೆ ಕಳೆದುಕೊಂಡ ರೈತನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಅಧ್ಯಕ್ಷ ಅರಸನಾಳು ಸಿದ್ದಪ್ಪ, ಹೂವಿನಮಡು ನಾಗರಾಜ, ಕಲ್ಕೆರೆ ಅಣ್ಣಪ್ಪ, ಯರವನಾಗ್ತಿಹಳ್ಳಿ ರುದ್ರಪ್ಪ, ಗುಮ್ಮನೂರು ಕೃಷ್ಣ, ರುದ್ರೇಶ್ ಮೆರವಣಿಗೆ ನೇತೃತ್ವ ವಹಿಸಿದ್ದರು.