Advertisement

ಪ್ರಧಾನಿ ನಿರ್ಧಾರಕ್ಕೆ ರೈತರು ನಿರಾಳ

10:05 PM Nov 05, 2019 | Lakshmi GovindaRaju |

ಚಿಕ್ಕಬಳ್ಳಾಪುರ: ದೇಶದ ಹಾಲು ಉತ್ಪಾದಕರಲ್ಲಿ ತೀವ್ರ ಆತಂಕ ಮೂಡಿಸಿದ್ದ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ) ಒಪ್ಪಂದಕ್ಕೆ ಕಡೆಗೂ ಪ್ರಧಾನಿ ನರೇಂದ್ರ ಮೋದಿ ಅವರು ಸಹಿ ಹಾಕದಿರುವುದು ರಾಷ್ಟ್ರದ ಹೈನುಗಾರಿಕೆಯಲ್ಲಿ ತೊಡಗಿರುವ ಕೋಟ್ಯಂತರ ರೈತ ಸಮುದಾಯಕ್ಕಿದ್ದ ಆತಂಕ ದೂರವಾಗಿದ್ದು, ಮೋದಿ ರವರ ರೈತಪರ ನಿರ್ಧಾರಕ್ಕೆ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಕೃತಜ್ಞತೆ ಸಲ್ಲಿಸುತ್ತದೆ ಎಂದು ಕೋಚಿಮುಲ್‌ ಚಿಕ್ಕಬಳ್ಳಾಪುರ ನಿರ್ದೇಶಕ ಎನ್‌.ಸಿ.ವೆಂಕಟೇಶ್‌ ತಿಳಿಸಿದರು.

Advertisement

ನಗರದ ಕೋಚಿಮುಲ್‌ ಉಪ ಶಿಬಿರ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಥೈಲಾಂಡ್‌ನ‌ಲ್ಲಿ ನಡೆದ 15 ರಾಷ್ಟ್ರಗಳ ಸಮಾವೇಶದಲ್ಲಿ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ) ಒಪ್ಪಂದದಿಂದ ಭಾರತ ಕೊನೆ ಕ್ಷಣದಲ್ಲಿ ಹಿಂದೆ ಸರಿದಿರುವುದು ದೇಶದ ರೈತ ಸಮುದಾಯದ ಹೋರಾಟಕ್ಕೆ ಸಿಕ್ಕಿ ದೊಡ್ಡ ಗೆಲುವು ಎಂದರು.

ಉತ್ತಮ ನಿರ್ಧಾರ: ಆರ್‌ಸಿಇಪಿ ಒಪ್ಪಂದದಿಂದ ದೇಶಕ್ಕೆ ಕೃಷಿ ಉತ್ಪನ್ನಗಳು ಸೇರಿದಂತೆ ಬಹುವಾಗಿ ಹಾಲು ಹಾಗೂ ಹಾಲಿನ ಉತ್ಪನ್ನಗಳು ಯಾವುದೇ ಸುಂಕ ಇಲ್ಲದೇ ದೇಶದ ಮುಕ್ತ ಮಾರುಕಟ್ಟೆ ಪ್ರವೇಶಿಸಿ ದೇಶದ ಹೈನೋದ್ಯಮಕ್ಕೆ ದೊಡ್ಡ ಪೆಟ್ಟು ಬೀಳುತ್ತಿತ್ತು. ಆದರೆ ರಾಷ್ಟ್ರದಲ್ಲಿ ಆರ್‌ಸಿಇಪಿ ಒಪ್ಪಂದಕ್ಕೆ ವ್ಯಕ್ತವಾದ ವಿರೋಧ ಮನಗಂಡು ಮೋದಿರವರು ಒಪ್ಪಂದಕ್ಕೆ ಸಹಿ ಹಾಕದಿರುವುದು ಸಂತಸ ತಂದಿದೆ. ಆದರೂ 2020 ರೊಳಗೆ ಸಹಿ ಹಾಕಬೇಕೆಂದು ಇತರೆ ರಾಷ್ಟ್ರಗಳು ಭಾರತದ ಮೇಲೆ ಒತ್ತಡ ಹೇರಿವೆ.

ಸಹಿ ಮಾಡದೆ ಹೋದರೆ ಆಮದು ಮಾಡಿಕೊಳ್ಳುತ್ತಿರುವ ವಸ್ತುಗಳನ್ನು ನಿಲ್ಲಿಸುವುದರ ಜೊತೆಗೆ ದೇಶದಿಂದ ರಪು¤ ಮಾಡಿಕೊಳ್ಳುತ್ತಿರುವ ವಸ್ತುಗಳನ್ನು ತಡೆಯುವುದಾಗಿ ಬೆದರಿಕೆ ಹಾಕಿವೆ. ಆದರೆ ದೇಶದ ರೈತರ ಹಿತದೃಷ್ಟಿಯಿಂದ ಭಾರತಕ್ಕೆ ಎಷ್ಟೇ ನಷ್ಟವಾದರೂ ಒಪ್ಪಂದದಿಂದ ದೂರ ಸರಿದಿರುವುದು ಒಳ್ಳೆಯ ನಿರ್ಧಾರ ಎಂದರು.

ರೈತ ವಿರೋಧಿ: ನಾಯನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬಿ.ಎನ್‌.ಮುನಿಕೃಷ್ಣಪ್ಪ ಮಾತನಾಡಿ, ಆರ್‌ಸಿಇಪಿ ಒಪ್ಪಂದದಿಂದ ವಿದೇಶಿ ಕಂಪನಿಗಳಿಂದ ದೇಶಕ್ಕೆ ಆಮದು ಆಗುವ ಸಾಮಗ್ರಿಗಳು ಸ್ಥಳೀಯ ಮಾರುಕಟ್ಟೆಗಳನ್ನು ಅಳಿಸಿ, ಹೆಚ್ಚಿನ ಶಕ್ತಿಯನ್ನು ಪಡೆಯುತ್ತವೆ. ಆರ್‌ಸಿಇಪಿ ಒಪ್ಪಂದ ರೈತ ವಿರೋಧಿಯಾಗಿದೆ ಎಂದು ಆರೋಪಿಸಿದರು.

Advertisement

ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 195 ಹಾಲು ಉತ್ಪಾದಕ ಸಂಘಗಳು ಕಾರ್ಯಚರಣೆಯಲ್ಲಿದ್ದು, 9128 ಮಂದಿ ಹಾಲು ಸರಬರಾಜು ಮಾಡುತ್ತಿರುವ ಸದಸ್ಯರಿದ್ದಾರೆ. ದಿನಕ್ಕೆ 1.01 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದ್ದು, ಸರಾಸರಿ ದಿನದ ವಹಿವಾಟು 23.42 ಲಕ್ಷ ಲಕ್ಷ ರೂ. ನಡೆಯುತ್ತಿದೆ. ತಿಂಗಳಿಗೆ 7.27 ಕೋಟಿ ರೂ. ವಹಿವಾಟು ಆಗುತ್ತಿದೆ ಎಂದು ಮಾಹಿತಿ ನೀಡಿದ ಅವರು, ಕೇಂದ್ರದ ನಿರ್ಧಾರ ಸರಿಯಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹರಿಸ್ಥಳ ಡೇರಿ ಅಧ್ಯಕ್ಷ ಚಿಕ್ಕಗೆರಿಗರೆಡ್ಡಿ, ನೌಕರರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎಂ.ರಾಮಕೃಷ್ಣರೆಡ್ಡಿ, ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಪಾಪೇಗೌಡ, ಕೊತ್ತೂರು ಡೇರಿ ಅಧ್ಯಕ್ಷ ಎ.ವೆಂಕಟರೆಡ್ಡಿ, ಡಿ.ಹೊಸುರು ಡೇರಿ ಅಧ್ಯಕ್ಷ ರಾಮಚಂದ್ರಪ್ಪ, ಗಿಡ್ನಹಳ್ಳಿ ಜಿ.ಬಿ.ನಾರಾಯಣಸ್ವಾಮಿ, ದೊಡ್ಡೇಗೌಡ, ಒಕ್ಕೂಟದ ವಿಸ್ತರಣಾಧಿಕಾರಿಗಳಾದ ರಮೇಶ್‌ಬಾಬು, ಸದಾಶಿವ ಉಪಸ್ಥಿತರಿದ್ದರು.

7ಕ್ಕೆ ಹಮ್ಮಿಕೊಂಡಿದ್ದ ಹೋರಾಟ ಮುಂದೂಡಿಕೆ: ಆರ್‌ಸಿಇಪಿ ಒಪ್ಪಂದ ವಿರೋಧಿಸಿ ಒಪ್ಪಂದಕ್ಕೆ ಭಾರತ ಸಹಿ ಹಾಕಬಾರದೆಂದು ಆಗ್ರಹಿಸಿ ಇದೇ ತಿಂಗಳ ನ.7 ರಂದು ಜಿಲ್ಲಾಡಳಿತ ಭವನದ ಎದುರು ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಆಯೋಜಿಸಿದ್ದ ಬೃಹತ್‌ ಮಟ್ಟದ ಹೋರಾಟವನ್ನು ಭಾರತ ಒಪ್ಪಂದದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಹೋರಾಟ ಮುಂದೂಡಲಾಗಿದೆ. 2020ರಲ್ಲಿ ಇತರೆ ರಾಷ್ಟ್ರಗಳ ಒತ್ತಡಕ್ಕೆ ಮಣಿದು ಭಾರತ ಸಹಿ ಹಾಕಿದರೆ ಆಗಲೂ ದೊಡ್ಡ ಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಕೋಚಿಮುಲ್‌ ನಿರ್ದೇಶಕ ಎನ್‌.ಸಿ.ವೆಂಕಟೇಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next