ಗೊರೇಬಾಳ: ಸಿಂಧನೂರು ತಾಲೂಕಿನ ಕೆ.ಬಸಾಪುರ, ಗಾಂಧಿನಗರ, ರೌಡಕುಂದ, ಸಾಲಗುಂದ, ಮುಕ್ಕುಂದಾ, ಇ.ಜೆ.ಹೊಸಳ್ಳಿ ಗ್ರಾಮ ಪಂಚಾಯತಿಗಳಿಂದ ಕಳೆದ ವರ್ಷ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ
ಯೋಜನೆಯಡಿ ಕೈಗೊಂಡ ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಹಾಗೂ ಕಾಡಾ ಕಚೇರಿಯಿಂದ ನಿರ್ಮಿಸಿದ
ರೈತರ ಹೊಲಗಳ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ದುರಸ್ತಿಗೊಳಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಪ್ರತಿವರ್ಷ ಸರಕಾರ ದಿಂದ ಗ್ರಾಮ ಪಂಚಾಯತಿ ಹಾಗೂ ಕಾಡಾ ಕಚೇರಿಗಳಿಗೆ ರೈತರ ಹೊಲಗಳ ರಸ್ತೆ
ನಿರ್ಮಾಣಕ್ಕೆ ಕೋಟ್ಯಂತರ ಹಣ ಮಂಜೂರು ಮಾಡುತ್ತದೆ.
ಪ್ರತಿ ವರ್ಷ ಒಂದೊಂದು ಗ್ರಾಪಂ ವ್ಯಾಪ್ತಿಗೊಳಪಡುವ ಗ್ರಾಮಗಳ ರೈತರ ಹೊಲದ ರಸ್ತೆಗಳಿಗೆ ಮರಂ ಹಾಕಲು ಸುಮಾರು 10 ರಿಂದ 20 ಲಕ್ಷ ರೂ. ವ್ಯಯಿಸಲಾಗುತ್ತಿದೆ. ಕಾಡಾ ಕಚೇರಿಯಿಂದಲೂ ಹೋಬಳಿ ವ್ಯಾಪ್ತಿಗಳಲ್ಲಿರುವ ಕೆಲ ಗ್ರಾಮಗಳಲ್ಲಿ 1ರಿಂದ 2ಕಿ.ಮೀ. ರೈತರ ಹೊಲಗಳ ರಸ್ತೆ ನಿರ್ಮಿಸಲು 8 ಲಕ್ಷದಿಂದ 10 ಲಕ್ಷ ರೂ. ಬಳಸಿ ಮೆಟಲಿಂಗ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಎರಡೂ ಇಲಾಖೆಗಳು ರಸ್ತೆಗಳ ಗುಣಮಟ್ಟ ಕಾಯ್ದುಕೊಳ್ಳಲು ವಿಫಲವಾಗಿವೆ. ಕಳೆದ ವರ್ಷ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಮಳೆಯಿಂದ ಮರಂ ಹಾಗೂ ಮೆಟಲಿಂಗ್ ರಸ್ತೆಗಳ ಕಂಕರ್ ತ್ತುಹೋಗಿ ರಸ್ತೆಗಳು ಹಾಳಾಗಿವೆ.
ಕಳೆದ 20 ದಿನಗಳಿಂದ ವಿವಿಧ ಗ್ರಾಮಗಳ ರೈತರು ಹೊಲಗಳಲ್ಲಿ ಭತ್ತ ಕಟಾವು ಮಾಡುತ್ತಿದ್ದಾರೆ. ರಸ್ತೆ ಹಾಳಾಗಿದ್ದರಿಂದ ಟ್ರ್ಯಾಕ್ಟರ್, ಬಂಡಿಗಳ ಸಂಚಾರಕ್ಕೆ ಸಮಸ್ಯೆಯಾಗಿದೆ, ಇನ್ನು ಕೆಲ ಗ್ರಾಮಗಳ ರೈತರು ಬೇಸಿಗೆ ಬೆಳೆಗೆ ಭತ್ತ ನಾಟಿ ಮಾಡಿದ್ದು, ಬಂಡಿ ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಗೊಬ್ಬರ ಹಾಕಿಕೊಂಡು ಹೋಗಲು ಸಮಸ್ಯೆಯಾಗಿದೆ. ಜಿಪಂ ಸಿಇಒ ಹಾಗೂ ಜಿಲ್ಲಾಧಿಕಾರಿಗಳು ಗಮನಹರಿಸಿ ರೈತರ ಹೊಲದ ರಸ್ತೆಗಳನ್ನು ಗುಣಮಟ್ಟದಿಂದ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಜಾಲಿಹಾಳ, ಕೆ.ಹಂಚಿನಾಳ, ಶಾಂತಿನಗರ, ರೌಡಕುಂದ, ಗೊರೇಬಾಳ ಗ್ರಾಮಗಳ ರೈತರು ಆಗ್ರಹಿಸಿದ್ದಾರೆ.