ಬೆಂಗಳೂರು: ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ರುವ ಜಿ.ಟಿ ಮಾಲ್ ಗೆ ಸಿನಿಮಾ ವೀಕ್ಷಿಸಲು ಪಂಚೆ ಧರಿಸಿಕೊಂಡು ಬಂದಿದ್ದ ಫಕೀರಪ್ಪ ಎಂಬ ವೃದ್ಧರಿಗೆ ಮಾಲ್ ಒಳಗೆ ಬಿಡದೇ ಅವಮಾನಿಸಿದ ಘಟನೆಗೆ ಆಕ್ರೋಶ ವ್ಯಕ್ತವಾದ ಬಳಿಕ ಅವಮಾನ ಮಾಡಿದ್ದ ಸಿಬ್ಬಂದಿಯೇ ಅವರನ್ನು ಸನ್ಮಾನಿಸಿ ಕ್ಷಮಾಪಣೆ ಕೇಳಿದ ಬಳಿಕ ಪ್ರಕರಣ ಸುಖಾಂತ್ಯ ಕಂಡಿದೆ.
ರೈತ ಫಕೀರಪ್ಪ ಅವರು ಪಂಚೆ ಧರಿಸಿದ್ದಕ್ಕೆ ಮಾಲ್ ಒಳಗೆ ಬಿಡದಿರುವ ಸಂಗತಿ ಎಲ್ಲೆಡೆ ಹಬ್ಬುತ್ತಿದ್ದಂತೆ ಕನ್ನಡ ಪರ ಸಂಘಟನೆಗಳ ಹೋರಾಟಗಾರರು ಮಾಲ್ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಸಾಮಾಜಿಕ ಜಾಲತಾಣಗಳಲ್ಲೂ ಭಾರಿ ಚರ್ಚೆಗೆ ಗ್ರಾಸವಾಗಿ, ಮಾಲ್‌ನ ಸಿಬ್ಬಂದಿ ನಡೆ ವಿರುದ್ಧ ಸಾರ್ವಜನಿರು ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಎಚ್ಚೆತ್ತುಕೊಂಡ ಮಾಲ್‌ನ ಸಿಬ್ಬಂದಿ ಕ್ಷಮೆಯಾಚಿಸಿದ್ದಾರೆ.
ಫಕೀರಪ್ಪ ಅವರನ್ನು ಮಾಲ್ ಒಳಗೆ ಬಿಡದೆ ರೈತರಿಗೆ ಅವಮಾನ ಮಾಡಿದ ಸೆಕ್ಯೂರಿಟಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಅಚಾತುರ್ಯದಿಂದ ಈ ಘಟನೆ ನಡೆದಿದೆ. ನಾವೂ ರೈತರ ಮಕ್ಕಳು. ಈ ಘಟನೆ ಬಗ್ಗೆ ಕ್ಷಮೆಯಾಚಿಸುತ್ತೇವೆ ಎಂದು ಮಾಲ್
ಉಸ್ತುವಾರಿ ನೋಡಿಕೊಳ್ಳುವ ಸುರೇಶ್ ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ. ಬುಧವಾರ ಫಕೀರಪ್ಪ ಅವರನ್ನು ಮಾಲ್‌ಗೆ ಕರೆಸಲಾಗಿತ್ತು. ಜಿಟಿ ಮಾಲ್ ಸಿಬ್ಬಂದಿ ಹೂವಿನ ಹಾರ ಹಾಕಿ ಅವರನ್ನು ಸನ್ಮಾನಿಸಿ ಕ್ಷಮಾಪಣೆ ಕೇಳಿದರು.
ಏನಿದು ಪ್ರಕರಣ?: ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿ.ಟಿ ಮಾಲ್ ಗೆ ಹಾವೇರಿ ಮೂಲದ ಕುಟುಂಬವೊಂದು ಕಲ್ಕಿ ಸಿನಿಮಾ ವೀಕ್ಷಣೆಗೆ ಬಂದಿತ್ತು. ಕುಟುಂಬ ಸದಸ್ಯರಾಗಿದ್ದ ಫಕೀರಪ್ಪ ಎಂಬ ವೃದ್ಧರೊಬ್ಬರು ಪಂಚೆ ಧರಿಸಿ ಬಂದಿದ್ದರು. ಪಂಚೆ ಧರಿಸಿದ್ದಾರೆ ಎಂಬ ಒಂದೇ ಕಾರಣಕ್ಕೆ ಜಿ.ಟಿ.ಮಾಲ್ ನ ಸೆಕ್ಯೂರಿಟಿ ಗಾರ್ಡ್‌ಗಳು ಮಾಲ್ ಒಳಗೆ ಪ್ರವೇಶಕ್ಕೆ ನಿರಾಕರಿಸಿದ್ದರು. ವೃದ್ಧನನ್ನು ಮಾಲ್ ಮುಂದೆ ಕೂರಿಸಿ ಮುಜುಗರಕ್ಕೀಡಾಗುವಂತೆ ಮಾಡಿದ್ದರು. ಫಕೀರಪ್ಪನವರ ಮಗ ನಾಗರಾಜ್ ಮಾಲ್ ನವರ
ಬಳಿ ತಂದೆಯನ್ನು ಒಳಗೆ ಬಿಡುವಂತೆ ಮನವಿ ಮಾಡಿದರೂ ಪ್ರವೇಶ ನಿರಾಕರಿಸಲಾಗಿತ್ತು. ಇದರಿಂದ ಆಕ್ರೋಶಗೊಂಡ ನಾಗರಾಜ್ ಈ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದರು.