ಬೆಂಗಳೂರು: ಪಕ್ಷದ ಪ್ರಚಾರದ ಖರ್ಚಿಗಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರಿಗೆ ರೈತನೊಬ್ಬ ಎರಡು ಲಕ್ಷ ರೂ. ನೀಡಿದ ಪ್ರಸಂಗ ನಡೆದಿದೆ. ಕುಮಾರಸ್ವಾಮಿ ಅವರು ಬುಧವಾರ ಮೈಸೂರಿಗೆ ತೆರಳುತ್ತಿದ್ದ ಮಾರ್ಗ ಮಧ್ಯೆ ಅವರ ವಾಹನ ನಿಲ್ಲಿಸಿದ ಮಾಗಡಿ ವಿಧಾನಸಭಾ ಕ್ಷೇತ್ರದ ಕೂಟಗಲ್‌ನ ರೈತ ಕೃಷ್ಣಪ್ಪ, ತಮ್ಮಲ್ಲಿದ್ದ 2 ಲಕ್ಷ ರೂ.ಗಳನ್ನು ಕುಮಾರಸ್ವಾಮಿ ಅವರಿಗೆ ನೀಡಿ, ನೀವೇ ನಾಡಿನ ಮುಖ್ಯಮಂತ್ರಿಯಾಗ ಬೇಕು ಎಂದು ಹಾರೈಸಿದರು.
ನಂತರ ಮಾತನಾಡಿದ ರೈತ ಕೃಷ್ಣಪ್ಪ, ಏಕಾಂಗಿಯಾಗಿ ರಾಜ್ಯದಾದ್ಯಾಂತ ರೈತರ ಪರವಾದ ಧ್ವನಿ ಎತ್ತುತ್ತಿರುವ ಕುಮಾರಸ್ವಾಮಿ ಅವರಿಗೆ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯವರು ಸಾಕಷ್ಟು ಹಣ ಖರ್ಚು ಮಾಡುತ್ತಿದ್ದು, ಕುಮಾರಸ್ವಾಮಿ ಬಳಿ ಅಷ್ಟೊಂದು ಹಣ ಇಲ್ಲದ ಕಾರಣ ನಾನು ದುಡಿದು ಸೇರಿಸಿಟ್ಟ ಹಣವನ್ನು ಅವರಿಗೆ ಕೊಟ್ಟಿದ್ದೇನೆ. ಕುಮಾರಸ್ವಾಮಿಯಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲ. ಅವರು ಸಿಎಂ ಆಗಬೇಕೆಂಬುದು ನನ್ನ ಆಸೆ ಎಂದು ಹೇಳಿದರು.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, “ಕುಮಾರ ಸ್ವಾಮಿಯವರ ಕಷ್ಣ ನೋಡಿ ನಾಡಿನ ಪ್ರತಿಯೊಬ್ಬ ರೈತ ಕೂಡ ಮಿಡಿಯುತಿದ್ದಾನೆ. ಕೂಟಗಲ್ ಕೃಷ್ಣಪ್ಪ ತನ್ನ ಕಷ್ಟದ ನಡುವೆಯೂ ಸಹಾಯ ಮಾಡಿದ್ದಾರೆ. ಅವರಿಗೆ ಭಗವಂತ ಒಳ್ಳೆಯದನ್ನ ಮಾಡಲಿ. ಇಂತಹ
ಮುಗ್ಧ ಮತ್ತು ನಿಷ್ಕಲ್ಮಷ ಮನಸ್ಸಿನ ರೈತರ ಆಶೀರ್ವಾದದಿಂದ ಜೆಡಿಎಸ್ ಅಧಿಕಾರಕ್ಕೆ ಬಂದೇಬರುತ್ತದೆ,’ ಎಂದು ಹೇಳಿದರು.