ಆಲಂಕಾರು: ಗದ್ದೆ ಬೇಸಾಯವನ್ನು ಮುಂದಿನ ಪೀಳಿಗೆಗೆ ತಿಳಿಯಪಡಿಸಬೇಕಂಬ ಮಹತ್ತರ ಉದ್ದೇಶವನ್ನಿಟ್ಟುಕೊಂಡು ವ್ಯಕ್ತಿಯೋರ್ವರು ದುಬಾರಿ ಬೆಲೆತೆತ್ತು ಗುಡ್ಡವನ್ನು ಗದ್ದೆ ಮಾಡಿ ಈ ವರ್ಷ ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದಾರೆ.
ಕಡಬ ತಾಲೂಕು ಆಲಂಕಾರು ಗ್ರಾಮದ ನಡುಮನೆ ನಾರಾಯಣ ಪೂಜಾರಿ ಈ ಸಾಹಸಕ್ಕಿಳಿದ ವ್ಯಕ್ತಿ. ಎಲ್ಲರೂ ವಾಣಿಜ್ಯ ಬೆಳೆಗಳತ್ತ ಆಕರ್ಷಿತರಾಗಿರುವ ಸಂದರ್ಭದಲ್ಲಿ ನಾರಾಯಣ ಪೂಜಾರಿ ಮಾದರಿಯಾಗಿದ್ದಾರೆ.
ಮೂಲತಃ ಇವರದ್ದು ಬೇಸಾಯ ಕೃಷಿಯ ಕುಟುಂಬ. ಜಮೀನು ವಿಭಾಗೀಕರಣದ ಸಮಯದಲ್ಲಿ ಗದ್ದೆ ಕುಟುಂಬಸ್ಥರ ಪಾಲಾಯಿತು. ಬಳಿಕ ಇವರು ವಾಣಿಜ್ಯ ಬೆಳೆಯಲ್ಲಿ ತೊಡಗಿಕೊಂಡರು. ಆರಂಭದಿಂದಲೂ ಬೇಸಾಯ ಕೃಷಿಯಲ್ಲಿ ಆಸಕ್ತಿಯಿದ್ದ ನಾರಾಯಣ ಪೂಜಾರಿ ಒಂದಲ್ಲ ಒಂದು ದಿನ ಗದ್ದೆ ಮಾಡಲೇಬೇಕೆಂಬ ಉದ್ದೇಶ ಹೊಂದಿದ್ದರು. ಉತ್ತಮ ಪೈರು ಮೂರು ವರ್ಷಗಳ ಹಿಂದೆ ಕಾಡು ಬೆಳೆದುಕೊಂಡಿದ್ದ ಗುಡ್ಡವನ್ನು ಸುಮಾರು ನಾಲ್ಕು ಅಡಿಗಳಷ್ಟು ಅಗೆದು 50 ಸೆಂಟ್ಸ್ ವಿಸ್ತೀರ್ಣಕ್ಕೆ ಗದ್ದೆ ಮಾಡಲಾಗಿತ್ತು. 17 ದಿವಸ ಜೆಸಿಬಿ ಮತ್ತು ಟಿಪ್ಪರ್ ಬಳಸಿ ಕಾಮಗಾರಿಯನ್ನು ಮಾಡಲಾಗಿದ್ದು, ಈ ಗದ್ದೆಗಾಗಿ ಈಗಾಗಲೇ 1.63 ಲಕ್ಷ ರೂ. ಖರ್ಚು ಮಾಡಲಾಗಿದೆ.
ಮೂರು ವರ್ಷ ನಿರಂತರವಾಗಿ ಎರಡು ಬೆಳೆಗಳನ್ನು ಮಾಡಿದರೂ ನಿರೀಕ್ಷಿತ ಬೆಳೆ ಕೈ ಸೇರಿರಲಿಲ್ಲ. ಈ ವರ್ಷ ಪೈರು ಉತ್ತಮವಾಗಿ ಬಂದಿದೆ. ಹಟ್ಟಿ ಗೊಬ್ಬರ ಮತ್ತು ಸೊಪ್ಪು ಹಾಕಿ ಉಳುಮೆ ಮಾಡಿ ನೇಜಿ ನಾಟಿ ಮಾಡಲಾಗಿದೆ. ನಾರಾಯಣ ಪೂಜಾರಿ ವರ್ಷಕ್ಕೆ ಎರಡು ಬಾರಿ (ಏನೆಲು ಮತ್ತು ಸುಗ್ಗಿ)ಬೇಸಾಯ ಮಾಡುವ ಗುರಿ ಇಟ್ಟುಕೊಂಡಿದ್ದಾರೆ. 20 ಮುಡಿ ಭತ್ತದ ಫಸಲು ನಿರೀಕ್ಷಿಸಲಾಗಿದೆ. ಪ್ರಥಮ ಬಾರಿಯ ಬೇಸಾಯದಲ್ಲಿ ಇಷ್ಟು ಫಸಲು ಬಾರದಿದ್ದರೂ ಸುಗ್ಗಿ ಬೇಸಾಯದಲ್ಲಿ ಉತ್ತಮ ಬೆಳೆ ವಿಶೇಷ ನಿರೀಕ್ಷಿಸುತ್ತಿದ್ದಾರೆ.
ಕಾಡು ಪ್ರಾಣಿ ಉಪಟಳದ ಭೀತಿ
23 ವರ್ಷಗಳ ಹಿಂದೆ ತವರು ಮನೆಯಲ್ಲಿ ಮಾಡಿದ ಬೇಸಾಯದ ಅನುಭವವಿದೆ. ಆ ಸಮಯದಲ್ಲಿ ಕೇಳುತ್ತಿದ್ದ ಓಬೇಲೆ, ಪಾಡ್ದಾನದಂತಹ ಜಾನಪದ ಗೀತೆಗಳು ಇದೀಗ ಬಹಳ ಕಾಲದ ಅನಂತರ ನಮ್ಮ ಜಮೀನಿನಲ್ಲಿ ಕೇಳಿಸುತ್ತಿರುವುದು ಸಂತಸ ತಂದಿದೆ. ಬೇಸಾಯದಲ್ಲಿ ತೊಡಗುವ ಅವಕಾಶ ಸಿಕ್ಕಿರುವುದಕ್ಕೆ ಖುಷಿಯಾಗುತ್ತಿದೆ. ಕಾಡು ಪ್ರಾಣಿಗಳ ಜತೆಗೆ ಹಕ್ಕಿಗಳ ಉಪಟಳ ಹೆಚ್ಚಾಗುವ ಭೀತಿಯಿದೆ ಎಂದು ನಾರಾಯಣ ಪೂಜಾರಿ ಅವರ ಪತ್ನಿ ಶಕುಂತಳಾ ಪ್ರತಿಕ್ರಿಯಿಸಿದ್ದಾರೆ.
ಯುವ ಸಮುದಾಯಕ್ಕೆ ತಿಳಿಸುವ ಯತ್ನ: ಇದೀಗ ಭತ್ತ ಕೃಷಿ ಬಹಳಷ್ಟು ಸುಲಭವಾಗಿದೆ. ಎಲ್ಲ ಕೆಲಸಗಳು ಯಂತ್ರೋಪಕರಣದೊಂದಿಗೆ ನಡೆಯುತ್ತದೆ. ಕಡಿಮೆ ವೆಚ್ಚದಲ್ಲಿ ಸುಲಭವಾಗಿ ಗದ್ದೆಯ ಕೆಲಸ ಕಾರ್ಯಗಳು ಮುಗಿಯುತ್ತವೆ. ನಮ್ಮ ಮನೆಯಲ್ಲಿ ಇಂದಿಗೂ ಹಿರಿಯರು ಅನುಸರಿಸಿಕೊಂಡು ಬರುತ್ತಿದ್ದ ಹೊಸ ಅಕ್ಕಿ ಊಟ(ಪುದ್ವಾರ್), ತೆನೆ ಕಟ್ಟುವ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತಿದೆ. ಮುಂದಿನ ಜನಾಂಗಕ್ಕೆ ಪೂರ್ವಜರ ಆಚಾರ ವಿಚಾರಗಳನ್ನು ತಿಳಿಸಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಗದ್ದೆ ಮಾಡುವ ಸಾಹಸಕ್ಕೆ ಕೈ ಹಾಕಲಾಗಿದೆ –
ನಾರಾಯಣ ಪೂಜಾರಿ