ನವದೆಹಲಿ:ದೆಹಲಿ ಗಡಿಯಲ್ಲಿ ಬೃಹತ್ ಪ್ರಮಾಣದಲ್ಲಿ ಕೇಂದ್ರದ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತು ಬುಧವಾರ(ಫೆ.3) ರಾಜ್ಯಸಭೆಯಲ್ಲಿ ಚರ್ಚಿಸಲು ಅನುಮತಿ ದೊರೆತ ಸಂದರ್ಭದಲ್ಲಿ ವಿಪಕ್ಷಗಳು ಒಗ್ಗಟ್ಟನ್ನು ಪ್ರದರ್ಶಿಸಿದ್ದು, ಈ ವೇಳೆ ವಿಪಕ್ಷ ನಾಯಕ ಗುಲಾಂ ನಬಿ ಅಜಾದ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕಾಯ್ದೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು.
ಇದನ್ನೂ ಓದಿ:ಮನರಂಜನೆಗಿಂತ ಜನರ ಆರೋಗ್ಯ ಮುಖ್ಯ: ಚಿತ್ರಮಂದಿರ ನೀತಿಯ ಬಗ್ಗೆ ಸಮರ್ಥನೆ ನೀಡಿದ ಸುಧಾಕರ್
ಈ ಹಿಂದೆ ದೇಶದಲ್ಲಿ ಬ್ರಿಟಿಷರು ಆಡಳಿತ ನಡೆಸುತ್ತಿದ್ದಾಗಲೂ ಒಮ್ಮೆ ರೈತರ ಕಾಯ್ದೆಯನ್ನು ವಾಪಸ್ ಪಡೆದಿದ್ದರು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಗುಲಾಂ ನಬಿ ರಾಜ್ಯಸಭೆಯಲ್ಲಿ ಚರ್ಚೆಯ ವೇಳೆ ಹೇಳಿದರು.
ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ರೈತರ ಪ್ರತಿಭಟನೆ ಕುರಿತು ಚರ್ಚಿಸಲು ಒಪ್ಪಿಗೆ ಸೂಚಿಸಿದ ನಂತರ ಲೋಕಸಭೆಯಲ್ಲಿ 15 ಗಂಟೆಗಳ ಕಾಲ ಚರ್ಚಿಸಲು ಸಮಯ ನಿಗದಿಪಡಿಸಲಾಗಿದೆ. ರೈತರ ಪ್ರತಿಭಟನೆ ಕುರಿತು ಚರ್ಚಿಸುವ ನಿಟ್ಟಿನಲ್ಲಿ ರಾಜ್ಯಸಭೆಯ ಎರಡು ದಿನಗಳ ಕಾಲದ ಪ್ರಶ್ನೋತ್ತರ ಅವಧಿಯನ್ನು ರದ್ದುಗೊಳಿಸಲಾಗಿದೆ.
ರಾಜ್ಯಸಭೆಯಲ್ಲಿ ಚರ್ಚೆಯ ವೇಳೆ ಗುಲಾಂ ನಬಿ ಅಜಾದ್ ಅವರು, ಜನವರಿ 26ರ ಘಟನೆ ನಂತರ ನಾಪತ್ತೆಯಾದವರ ಬಗ್ಗೆ ಮಾಹಿತಿ ಸಂಗ್ರಹಿಸಲು ಸಮಿತಿಯೊಂದನ್ನು ರಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿಕೊಂಡರು. ರೈತರ ಟ್ರ್ಯಾಕ್ಟರ್ ರಾಲಿ ಹಿಂಸಾಚಾರಕ್ಕೆ ತಿರುಗಿದ್ದ ಘಟನೆಯನ್ನು ಅಜಾದ್ ಖಂಡಿಸಿದ್ದರು. ಅಷ್ಟೇ ಅಲ್ಲ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಸತತ 5ಗಂಟೆಗಳ ಕಾಲ ಚರ್ಚೆ ನಡೆಸಬೇಕೆಂದು 16 ವಿರೋಧ ಪಕ್ಷಗಳು ಬೇಡಿಕೆ ಇಟ್ಟಿದ್ದು, ಕೇಂದ್ರ ಸರ್ಕಾರ ಇದನ್ನು 15ಗಂಟೆಗೆ ಏರಿಕೆ ಮಾಡಿರುವುದಾಗಿ ವರದಿ ತಿಳಿಸಿದೆ.
ದೆಹಲಿ-ಉತ್ತರಪ್ರದೇಶದ ಘಾಜಿಪುರ್ ಗಡಿಪ್ರದೇಶದಲ್ಲಿನ ಭಾರೀ ಪ್ರಮಾಣದ ಭದ್ರತಾ ವ್ಯವಸ್ಥೆ ಕುರಿತು ಉಲ್ಲೇಖಿಸಿದ ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ವರ್ಮಾ, ಘಾಜಿಪುರ ಗಡಿಯಲ್ಲಿ ಮಾಡಿದ ಭದ್ರತಾ ವ್ಯವಸ್ಥೆ ಪಾಕಿಸ್ತಾನ ಗಡಿಯಲ್ಲೂ ಇಲ್ಲ. ನಾನು ಕೂಡಾ ಪಾಕಿಸ್ತಾನ ಗಡಿ ಪ್ರದೇಶ ನೀಡಿದ್ದೇನೆ ಎಂದು ಹೇಳಿದರು.