ಹುಬ್ಬಳ್ಳಿ: ರೈತರು ತಮ್ಮ ಸ್ವಂತ ಜಮೀನಿನಲ್ಲಿ ಒಟ್ಟು ವಿಸ್ತೀರ್ಣದಲ್ಲಿ ಶೇ.10 ಜಾಗದಲ್ಲಿ ಫಾರ್ಮ್ ಹೌಸ್ ನಿರ್ಮಾಣಕ್ಕೆ ಭೂ ಪರಿವರ್ತನೆ ಅಗತ್ಯವಿಲ್ಲವೆಂದು ರಾಜ್ಯ ಸರ್ಕಾರ ನಾಲ್ಕು ವರ್ಷಗಳ ಹಿಂದೆಯೇ ಸ್ಪಷ್ಟ ಸುತ್ತೋಲೆ ಹೊರಡಿಸಿದೆ. ಹೀಗಿದ್ದರೂ ರಾಜ್ಯದೆಲ್ಲೆಡೆ ಫಾರ್ಮ್ ಹೌಸ್ ನಿರ್ಮಾಣಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ, ತಹಶೀಲ್ದಾರ್ ಒಪ್ಪಿಗೆ ನೀಡುತ್ತಿಲ್ಲ. ಹೀಗಾಗಿ ರೈತರು ಪರದಾಡುವಂತಾಗಿದೆ.
ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಬೇಕಾದರೆ ಭೂ ಪರಿವರ್ತನೆ (ಎನ್‌ಎ) ಅತ್ಯಗತ್ಯ. ಆದರೆ ರೈತರು ತಮ್ಮದೇ ಜಮೀನಿನಲ್ಲಿ ಸ್ವಂತ ವಾಸವಿರಲು ಇಲ್ಲವೆ ಕೃಷಿ ಸಲಕರಣೆ ಇನ್ನಿತರೆ ಸಾಮಗ್ರಿ ಸಂಗ್ರಹಕ್ಕೆ, ಕಟ್ಟಡ ನಿರ್ಮಾಣಕ್ಕೆ ಭೂ ಪರಿವರ್ತನೆ ಮಾಡಿಸಲು ಸಾಧ್ಯವಾಗದೆ ಪರಿತಪಿಸುವಂತಾಗಿತ್ತು. ಭೂ ಪರಿವರ್ತನೆ ಇಲ್ಲದೆಯೇ ರೈತ ಕುಟುಂಬದ ವಾಸಕ್ಕೆ ಸ್ವಂತ ಜಮೀನಿನಲ್ಲಿ ವಾಸ ಇಲ್ಲವೇ ಕೃಷಿ ಉದ್ದೇಶಕ್ಕೆ ಸ್ವಂತ ಬಳಕೆ ಕಟ್ಟಡ ನಿರ್ಮಾ ಣಕ್ಕೆ ಪರವಾನಗಿ ನೀಡಬೇಕೆಂಬ ಬೇಡಿಕೆ- ಒತ್ತಾಯ ಅನೇಕ ವರ್ಷಗಳಿಂದ ಇತ್ತು. ಇದಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ 2018ರಲ್ಲಿಯೇ ಸುತ್ತೋಲೆ ಹೊರಡಿಸಿದರೂ ಇದುವರೆಗೂ ಅದರ ಸಮರ್ಪಕ ಅನುಷ್ಠಾನವಾಗದೆ, ರೈತರು ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ, ತಹಶೀಲ್ದಾರ್ ಕಚೇರಿಗಳನ್ನು ಅಲೆಯುವಂತಾಗಿದೆ.
ಸುತ್ತೋಲೆಯಲ್ಲಿ ಏನಿದೆ?: ರೈತರು ತಮ್ಮ ಸ್ವಂತ ಜಮೀನಿನ ಒಟ್ಟು ವಿಸ್ತೀರ್ಣದ ಗರಿಷ್ಠ ಶೇ.10 ಜಾಗದಲ್ಲಿ ಫಾರ್ಮ್ ಹೌಸ್‌ನ್ನು ಭೂ ಪರಿವರ್ತನೆ ಇಲ್ಲದೆಯೇ ಕಟ್ಟಿಕೊಳ್ಳಬಹುದಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95(1) ರಂತೆ ಕೃಷಿಕರು ತಮ್ಮ ಸ್ವಂತ ಜಮೀನಿನ ಶೇ.10 ಮೀರದ ಜಾಗದಲ್ಲಿ ರೈತ ಕುಟುಂಬದ ವಾಸ ಇಲ್ಲವೇ ಕೃಷಿ ಸಲಕರಣೆಗಳ ಇರಿಸಲು ಫಾರ್ಮ್ ಹೌಸ್ ನಿರ್ಮಾಣ ಮಾಡಿಕೊಳ್ಳಬಹುದಾಗಿದೆ ಎಂದು ರಾಜ್ಯ ಸರ್ಕಾರ 2018, ಜ.29ರಂದು ಸುತ್ತೋಲೆ ಹೊರಡಿಸಿದೆ (ಸಂಖ್ಯೆ: ಕಂಇ 11 ಎಲ್ ಜಿಪಿ 2018). ಕೆಲವೊಂದು ಷರತ್ತುಗಳನ್ನೂ ಸುತ್ತೋಲೆಯಲ್ಲಿ ವಿಧಿಸಲಾಗಿದೆ. ನಿರ್ಮಾಣ ಗೊಂಡ ಫಾರ್ಮ್ ಹೌಸ್ ರೈತ ಕುಟುಂಬದ ಸ್ವಂತ ವಾಸಕ್ಕೆ ಇಲ್ಲವೇ ಕೃಷಿ ಉಪಕರಣಗಳ ಸಂಗ್ರ ಹಕ್ಕೆ ಬಳಕೆ ಆಗಬೇಕು. ಯಾವುದೇ ಕಾರಣಕ್ಕೂ ವಾಣಿಜ್ಯ ಉದ್ದೇಶ, ಬಾಡಿಗೆ ಇನ್ನಿತರೆ ರೂಪದಲ್ಲಿ ನೀಡುವುದಕ್ಕೆ ಬಳಕೆ ಆಗುವಂತಿರಬಾರದು ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ನಿರ್ಮಾಣ ಕುರಿತಾಗಿ ಕಂದಾಯ ನಿರೀಕ್ಷಕರಿಗೆ ಲಿಖೀತ ಮನವಿ ನೀಡಬೇಕಾಗಿದೆ. ಭೂ ಮಾಲೀಕರು ತಮ್ಮ ಜಮೀನಿನ ಶೇ.10 ಜಾಗದಲ್ಲಿ ಫಾರ್ಮ್ ಹೌಸ್, ಬಾವಿ, ತೊಟ್ಟಿ ನಿರ್ಮಾಣಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ವಿವರಗಳನ್ನು ಕಲಂ 11ರಲ್ಲಿ ಸುಲಭವಾಗಿ ನಮೂದಿಸಲು ಅನುಕೂಲವಾಗು ವಂತೆ ಕಂದಾಯ ಇಲಾಖೆ ಭೂಮಿ ತಂತ್ರಾಂಶದಲ್ಲಿ ಕಂದಾಯ ನಿರೀಕ್ಷಕರ ಲಾಗಿನ್‌ನಲ್ಲಿ ಹೊಸ ಸೇವೆಯಾಗಿ ಸೇರಿಸಲಾಗಿದೆ. ಉತ್ತಮ ಸಾಗುವಳಿ ಅಥವಾ ವ್ಯವಸಾಯ ಉಪಯೋಗಕ್ಕಾಗಿದ್ದು, ತನ್ನದೇ ಸ್ವಂತ ಆಸ್ತಿ ಹೊಂದಿರದ ಕಾರಣ ಮತ್ತು ಪರಿವರ್ತ ನೆಯಾಗಿರದ ಕಾರಣ, ಫಾರ್ಮ್ಹೌಸ್ ನಿರ್ಮಾ ಣಕ್ಕೆ ಗ್ರಾಪಂ ಅಥವಾ ಮುನ್ಸಿಪಾಲಿಟಿ ಯವರು ಪ್ರತ್ಯೇಕವಾದ ಆಸ್ತಿ ಸಂಖ್ಯೆಯನ್ನು ರಚಿಸತಕ್ಕದ್ದಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಒಂದು ವೇಳೆ ಶೇ.10 ಜಮೀನಿನಲ್ಲಿ ಪ್ರಸ್ತಾಪಿತ ಇಲ್ಲವೆ ನಿರ್ಮಾಣಗೊಂಡ ಫಾರ್ಮ್ಹೌಸ್ ಆಸ್ತಿಯನ್ನು ಯಾವುದೇ ವ್ಯವಹಾರ ಅಥವಾ ಮಾರಾಟ ಮಾಡಬೇಕಾದ ಸಂದರ್ಭದಲ್ಲಿ ಇಲ್ಲವೇ ಆಸ್ತಿ ಸಂಖ್ಯೆ ನೀಡಬೇಕಾದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ನಿಯಮ 95ರಡಿ ಭೂ ಪರಿವರ್ತನೆ ಕಡ್ಡಾಯವಾಗಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ವಾಸ್ತವವಾಗಿ ಆಗುತ್ತಿರುವುದೇನು? ರಾಜ್ಯ ಸರ್ಕಾರದ ಸುತ್ತೋಲೆ ಬಹುತೇಕ ರೈತರಿಗೆ ತಿಳಿಯದಾಗಿದೆ. ಆ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ, ಇಲ್ಲವೆ ಮಾಹಿತಿ ನೀಡುವ ಕಾರ್ಯ ಕಂದಾಯ ಇಲಾಖೆಯಿಂದ ಆಗುತ್ತಿಲ್ಲ. ಮತ್ತೂಂದು ಕಡೆ ಮಾಹಿತಿ ಇದ್ದ ಕೆಲ ರೈತರು ಸುತ್ತೋಲೆ ಅನ್ವಯ ಫಾರ್ಮ್ ಹೌಸ್ ನಿರ್ಮಾಣ ಮಾಡಿ ಪರವಾನಗಿಗೆ ಮುಂದಾದರೆ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷ ಕರು ಸ್ಥಳ ಪರಿಶೀಲಿಸಿ ತಹಶೀಲ್ದಾರ್ ವರದಿ ನೀಡಿ ನಾಲ್ಕೈದು ತಿಂಗಳಾದರೂ ತಹಶೀಲ್ದಾರ್ ರಿಂದ ಅರ್ಜಿಯ ಸ್ವೀಕೃತಿ ಇಲ್ಲವೆ ತಿರಸ್ಕಾರ ಯಾವ ಮಾಹಿತಿಯೂ ಇಲ್ಲದೆ ರೈತರು ತಹಶೀಲ್ದಾರ್ ಕಚೇರಿಗೆ ಅಲೆದಾಡುವಂತಾಗಿದೆ. ಹಲವು ಕಂದಾಯ ಅಧಿಕಾರಿಗಳು ಭೂ ಪರಿವರ್ತನೆ ಬೇಕು ಎಂದೇ ಹೇಳುತ್ತಿದ್ದಾರೆ ಎನ್ನಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರು ಫಾರ್ಮ್ಹೌಸ್ ನಿರ್ಮಾಣಕ್ಕೆ ಕಚೇರಿ ಅಲೆದಾಟ ಮುಂದುವರಿಸಿದ್ದಾರೆ.
ಕೃಷಿ ಭೂಮಿಯ ಶೇ.10 ಜಾಗದಲ್ಲಿ ನನ್ನ ಪತ್ನಿ ಹೆಸರಲ್ಲಿ ಫಾರ್ಮ್ಹೌಸ್ ನಿರ್ಮಿಸಿದ್ದು, ಕಂದಾಯ ನಿರೀಕ್ಷಕರು ವರದಿ ನೀಡಿ ನಾಲ್ಕು ತಿಂಗಳಾಗಿದ್ದರೂ ತಹಶೀಲ್ದಾರ್ ಅದರ ಮೇಲೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಲೆದಾಡಿ ಸಾಕಾಗಿ ಕಚೇರಿ ಎದುರು ಸತ್ಯಾಗ್ರಹದ ಹೇಳಿಕೆ ನೀಡಿದ ನಂತರ ಕೇವಲ ಮಾ.18ರಂದು ನನ್ನ ಅರ್ಜಿ ಮೇಲೆ ತಹಶೀಲ್ದಾರ್ ಕ್ರಮ ಕೈಗೊಂಡಿದ್ದಾರೆ.
ಅಮರೇಗೌಡ ಗೋನವಾರ