Advertisement

Farangipete Devaki Krishna Ravalnath Temple: ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು

05:14 PM Nov 04, 2024 | Team Udayavani |

ಬಂಟ್ವಾಳ: ದೇವಸ್ಥಾನದ ಬಾಗಿಲಿನ ಚಿಲಕ ಮುರಿದು ಒಳ ಪ್ರವೇಶ ಮಾಡಿದ ಕಳ್ಳರ ತಂಡ, ನೂರಾರು ವರ್ಷಗಳ ಇತಿಹಾಸವಿದ್ದ ದೇವರಿಗೆ ಸಂಬಂಧಿಸಿದ ಲಕ್ಷಾಂತರ ರೂ. ಮೌಲ್ಯ ಬೆಲೆಬಾಳುವ ಚಿನ್ನ ಹಾಗೂ ಬೆಳ್ಳಿಯ ವಸ್ತುಗಳನ್ನು ದೋಚಿಕೊಂಡು ಹೋಗಿದ್ದು, ಎಲ್ಲಾ ದೃಶ್ಯಾವಳಿಗಳು ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.

Advertisement

ಬಂಟ್ವಾಳ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆ ಸಮೀಪದ ಸುಜೀರು ಎಂಬಲ್ಲಿರುವ ಶ್ರೀ ದೇವಕಿಕೃಷ್ಣ ರವಳನಾಥ ಮಂದಿರದಲ್ಲಿ ಸೋಮವಾರ (ನ.04) ಮುಂಜಾನೆ 2.30 ಲಕ್ಷದ ಮೌಲ್ಯದ ನಗ ನಗದುಗಳನ್ನು ಕಳ್ಳರು ಎಗರಿಸಿದ್ದಾರೆ.

ದೇವಳಕ್ಕೆ ಸಂಬಂಧಿಸಿದಂತೆ ಅನಾದಿ ಕಾಲದ ನೂರಾರು ವರ್ಷಗಳ ಹಳೆಯದಾದ ಹಿರಿಯರು ಮಾಡಿಸಿದಂತ ಸುಮಾರು ಒಂದುವರೆ ಕೆ.ಜಿ‌ ತೂಕದ ಬೆಳ್ಳಿಯ ದೇವರ ಪೀಠ ಹಾಗೂ ಬಂಗಾರದ ದೇವರ ಮೂಗುತಿ ದೇವರ ಕೊಡೆ ಸೇರಿದಂತೆ ಒಟ್ಟು 2 ಕೆ.ಜಿ.ಯಷ್ಟು ಬೆಳ್ಳಿ ಹಾಗೂ 3 ಪವನ್ ಚಿನ್ನ ಕಳವಾಗಿದೆ. ಇದರ ಜೊತೆಗೆ ಕಾಣಿಕೆ ಹುಂಡಿಯಲ್ಲಿರುವ ನಗದನ್ನು ಕೊಂಡುಹೋಗಿದ್ದಾರೆ.

ಆದಿತ್ಯವಾರ ಮಂದಿರದಲ್ಲಿ ವಿಶೇಷವಾದ ಪೂಜಾ ಕಾರ್ಯಕ್ರಮವಿದ್ದ ಕಾರಣ ಕಾಣಿಕೆ ಹುಂಡಿಯಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಹಣವಿರಬಹುದು ಎಂದು ಹೇಳಲಾಗುತ್ತಿದೆ.

Advertisement

ಸಿ.ಸಿ.ಕ್ಯಾಮರಾದಲ್ಲಿ ಸೆರೆ

ಸುಮಾರು 5 ಜನರ ತಂಡ ಈ ಕಳ್ಳತನದಲ್ಲಿ ಭಾಗಿಯಾಗಿರುವುದು ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ. ವಾಹನದ ಮೂಲಕ ಬಂದ ಕಳ್ಳರ ತಂಡ ಸುಮಾರು 3.30 ರ ಸಮಯದಲ್ಲಿ ದೇವಸ್ಥಾನದ ಹಿಂಬದಿಯ ಬಾಗಿಲಿನ ಚಿಲಕ ಮುರಿದು ಒಳಪ್ರವೇಶ ಮಾಡಿದ್ದಾರೆ. ಬಳಿಕ ದೇವಸ್ಥಾನದ ಸುತ್ತಲೂ ತಿರುಗಾಡಿ ಮಾಹಿತಿ ಪಡೆದುಕೊಂಡು, ಗರ್ಭಗುಡಿಯ ಒಳಗೆ ಪ್ರವೇಶ ಮಾಡಿದ್ದಾರೆ. ಅಲ್ಲಿ ಬೆಳ್ಳಿಯ ದೇವರ ಪೀಠ ಹಾಗೂ ಬಂಗಾರದ ವಸ್ತುಗಳನ್ನು ಗೋಣಿಯಲ್ಲಿ ತುಂಬಿಸಿಕೊಂಡು ದೇವಳದ ಗೋಪುರಕ್ಕೆ ಬಂದು, ಕಳ್ಳತನ ಮಾಡಿದ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಒಂದೇ ಚೀಲದಲ್ಲಿ ಭದ್ರಗೊಳಿಸಿ ವಾಪಸು ಹೋಗುವ ದೃಶ್ಯ ಕಂಡು ಬಂದಿದೆ.

ಕಳ್ಳರ ಕೈಯಲ್ಲಿ ಮಾರಕಾಸ್ತ್ರಗಳು ಕೂಡಾ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳ್ಳತನ ಮಾಡಿದ ಬಳಿಕ ಸುಮಾರು 4 ಗಂಟೆ ಅಂದಾಜಿಗೆ ದೇವಸ್ಥಾನದಿಂದ ಹೊರಗೆ ಹೋಗಿದ್ದಾರೆ.

ಕಳ್ಳರ ಸುಳಿವು ನೀಡಿದ ನಾಯಿ

ದೇವಸ್ಥಾನದ ಕಂಪೌಂಡ್ ನ ಒಳಗಡೆಯೇ ಅರ್ಚಕರ ಮನೆಯಿದೆ.  ಕಳ್ಳರು ದೇವಸ್ಥಾನದ ಒಳಗೆ ಪ್ರವೇಶ ಮಾಡುವುದನ್ನು ಇವರ ಸಾಕು ನಾಯಿ ಗಮನಿಸಿ ಜೋರಾಗಿ ಬೊಗಳಲು ಆರಂಭಿಸಿದೆ. ನಾಯಿ ಬೊಗಳಿದ್ದರಿಂದ ಅರ್ಚಕರಿಗೆ ಎಚ್ಚರವಾಗಿದೆ. ನಾಯಿ ಯಾಕೆ ಬೊಗಳುತ್ತಿದೆ ಎಂದು ಸಿ.ಸಿ.ಕ್ಯಾಮರಾವನ್ನು ನೋಡಿದಾಗ ದೇವಸ್ಥಾನದ ಒಳಗೆ ಮೂವರು ಕಂಡುಬಂದಿದ್ದಾರೆ. ಕೂಡಲೇ ಅರ್ಚಕರು ದೇವಸ್ಥಾನದ ಮ್ಯಾನೇಜರ್ ಅವರಿಗೆ ವಿಚಾರ ತಿಳಿಸಿದ್ದಾರೆ. ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಮೂವರು ದೇವಸ್ಥಾನದ ಒಳಗೆ ಇದ್ದು, ನನಗೆ ಒಬ್ಬನಿಗೆ ಹೋಗಲು ಹೆದರಿಕೆ ಆಗುತ್ತಿದ್ದು ಅವರನ್ನು ಬರುವಂತೆ ತಿಳಿಸಿದ್ದಾರೆ. ಕೂಡಲೇ ಅವರು ಇಲ್ಲಿಗೆ ಬಂದರಾದರೂ ಅದಾಗಲೇ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಪೊಲೀಸರಿಗೆ ಮಾಹಿತಿ

ಸಿ.ಸಿ.ಕ್ಯಾಮರಾ ಪರಿಶೀಲಿಸಿದಾಗ ಕಳ್ಳರು ಚಪ್ಪಲಿ ಧರಿಸದೆ ಗರ್ಭಗುಡಿಯೊಳಗೆ ಪ್ರವೇಶ ಮಾಡಿ, ಅಲ್ಲಿಂದ ಚಿನ್ನಾಭರಣಗಳನ್ನು ಕಳವು ಮಾಡುವ ದೃಶ್ಯ ಕಂಡು ಬಂತು. ಇದನ್ನು ಖಚಿತಪಡಿಸಿಕೊಂಡ ಬಳಿಕ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲಾಗಿದೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಗಳಾದ ಹರೀಶ್ ಮತ್ತು ಮೂರ್ತಿ ಭೇಟಿ ನೀಡಿದ್ದಾರೆ. ಜೊತೆಗೆ ಶ್ವಾನದಳ ಮತ್ತು ಬೆರಳಚ್ಚುತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next