“ಇಂಜಿನಿಯರಿಂಗ್ ಅರ್ಧಕ್ಕೆ ಬಿಟ್ಟು, ಸಿನಿಮಾರಂಗಕ್ಕೆ ಬಂದೆ. ಆರಂಭದಲ್ಲಿ ಸ್ವಲ್ಪ ವಿರೋಧವಿದ್ದರೂ, ಆನಂತರ ಅಪ್ಪ-ಅಮ್ಮ ನಿಂದಲೂ ಸಾಥ್ ಸಿಕ್ಕಿತು. ಒಳ್ಳೆಯ ಕಥೆಯೂ ಸಿದ್ಧವಾಯ್ತು. ಆದ್ರೆ ಅದೇ ಸಮಯಕ್ಕೆ ಕೋವಿಡ್ ಶುರುವಾಯ್ತು. ಇಂಥ ಸಮಯದಲ್ಲಿ ಪ್ರೊಡ್ಯೂಸರ್ ಸಿಗೋದೆ ಕಷ್ಟವಾಯ್ತು. ಕೊನೆಗೆ ಈ ಕಥೆಯನ್ನು ನಾವೇ ಸಿನಿಮಾ
ಮಾಡುವ ಬಗ್ಗೆ ನಿರ್ಧರಿಸಿ ಕೆಲಸ ಆರಂಭಿಸಿದೆವು. ಸುಮಾರು 24 ದಿನಗಳ ಕಾಲ ಚಿತ್ರದ ಚಿತ್ರೀಕರಣ ಮಾಡಲಾಗಿದ್ದು, ಅಂದುಕೊಂಡ ಸಮಯಕ್ಕೆ ಚಿತ್ರೀಕರಣ ಮುಗಿಸಿದ್ದೇವೆ’ ಹೀಗೆ ಹೇಳುತ್ತ ಮಾತಿಗಿಳಿದವರು “ಫ್ಯಾಂಟಸಿ’ ಚಿತ್ರದ ನಿರ್ದೇಶಕ ಪವನ್ ಕುಮಾರ್. ಆರ್.
ಪವನಕುಮಾರ್ ಆರ್. “ಫ್ಯಾಂಟಸಿ’ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ತಮ್ಮ ಚೊಚ್ಚಲ ಚಿತ್ರದ ಚಿತ್ರೀಕರಣವನ್ನು ಅಂದುಕೊಂಡಂತೆ ಪೂರ್ಣ ಗೊಳಿಸಿರುವ ನಿರ್ದೇಶಕ ಪವನ್‌ಕುಮಾರ್. ಆರ್ ಮತ್ತು ಚಿತ್ರತಂಡ ಚಿತ್ರೀಕರಣದ ಅನುಭವ ಮತ್ತು ವಿಶೇಷತೆಗಳನ್ನು ಹಂಚಿಕೊಂಡಿತು.
ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಪವನ್‌ಕುಮಾರ್ ಆರ್. “ಫ್ಯಾಂಟಸಿ’ ಹಿಂದಿನ ಪರಿಶ್ರಮವನ್ನು ತೆರೆದಿಟ್ಟರು. ಚೊಚ್ಚಲ ನಿರ್ದೇಶನದ ಸವಾಲುಗಳು, ಅದಕ್ಕೆ ಸಿಕ್ಕ ಸಹಕಾರ, ಚಿತ್ರ ಸಾಗಿಬಂದ ರೀತಿ ಎಲ್ಲವನ್ನು ವಿವರಿಸಿದರು. “ಕನ್ನಡದ ಮಟ್ಟಿಗೆ ಇದೊಂದು ವಿಭಿನ್ನ ಕಂಟೆಂಟ್ ಇರುವಂಥ ಸಿನಿಮಾ. ತಾಂತ್ರಿಕವಾಗಿ ಹೊಸ ರೀತಿಯಲ್ಲಿ ಮೂಡಿಬರುತ್ತಿದೆ.ಕನ್ನಡ ಪ್ರೇಕ್ಷಕರಿಗೆ”ಫ್ಯಾಂಟಸಿ’ ಸಿನಿಮಾ ಇಷ್ಟವಾಗುತ್ತದೆ’ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಚಿತ್ರದ ಬಗ್ಗೆ ಮಾತನಾಡಿದ ನಟ ಬಲರಾಜವಾಡಿ, “ಒಂಭತ್ತು ತಿಂಗಳ ನಂತರ ಮತ್ತೆ ಕ್ಯಾಮರಾ ಮುಂದೆ ಬಂದಿರುವುದಕ್ಕೆ ಖುಷಿ ಎನಿಸುತ್ತಿದೆ. ನಿರ್ದೇಶಕರ ಹೊಸ ಆಲೋಚನೆ, ಸಿನಿಮಾದ ಬಗ್ಗೆ ಅವರಿಗಿರುವ ಪ್ಯಾಷನ್, ಸೆಳೆತವನ್ನು ನಾನು “ಸಂಹಾರ’ ಸಿನಿಮಾ ಸಮಯದಲ್ಲಿಯೇ ನೋಡಿದ್ದೆ. ಈ ಸಿನಿಮಾದಲ್ಲಿ ನನಗೆ ಭಾಸ್ಕರ್ ಪೊನ್ನಪ್ಪ ಎಂಬ ಒಂದು ವಿಭಿನ್ನ ಪಾತ್ರವಿದೆ. ಪಾತ್ರ ತುಂಬ ಚೆನ್ನಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗುವಂತಿದೆ. ಪಾತ್ರ ಹೇಗಿದೆ ಅನ್ನೋದನ್ನ ಸಿನಿಮಾದಲ್ಲಿಯೇ ನೋಡಿಬೇಕು’.
ಚಿತ್ರದ ಮತ್ತೂಂದು ಪ್ರಮುಖ ಪಾತ್ರದಲ್ಲಿ ನಟಿ ಪ್ರಿಯಾಂಕಾ ಶಿವಣ್ಣ ಕಾಣಿಸಿಕೊಳ್ಳುತ್ತಿದ್ದಾರೆ.ಚಿತ್ರದ ಬಗ್ಗೆ ಮಾತನಾಡಿದ ಪ್ರಿಯಾಂಕಾ, “ಪಾತ್ರದ ಬಗ್ಗೆ ತುಂಬ ನಿರೀಕ್ಷೆ ಇಟ್ಟುಕೊಂಡಿದ್ದೇನೆ. ಕೋವಿಡ್ ಸಮಯದಲ್ಲಿ ಸಿಕ್ಕ ಸಿನಿಮಾವಿದು. ಇದು ನನ್ನ ಮೊದಲ ಸಿನಿಮಾ ಆದರೂ, ಧಾರಾವಾಹಿಯಂತೆ ಇಲ್ಲಿಯು ನೆಗೆಟಿವ್ ಪಾತ್ರ ಮುಂದುವರಿದಿದೆ’ ಎಂದು ಪಾತ್ರ ಪರಿಚಯ ಮಾಡಿಕೊಟ್ಟರು.
ಅದೇ ರೀತಿ ನಟ ಹೇಮಂತ್, ಬಾಲನಟ ಅನುರಾಗ್, ಛಾಯಾಗ್ರಹಕ ಪಿಕೆಹೆಚ್ ದಾಸ್ ತಮ್ಮ ಶೂಟಿಂಗ್ ಅನುಭವ ಹಂಚಿಕೊಂಡರು.