Advertisement

ವರನಟನ ಸ್ಮರಿಸಿದ ಅಭಿಮಾನಿಗಳು

10:18 AM Apr 13, 2021 | Team Udayavani |

ವರನಟ ಡಾ. ರಾಜಕುಮಾರ್‌ ಅವರ 15ನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಡಾ. ರಾಜಕುಮಾರ್‌ ಸಮಾಧಿ ಬಳಿ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು. ಈ ವೇಳೆ ಡಾ. ರಾಜಕುಮಾರ್‌ ಹಿರಿಯ ಪುತ್ರ ಹಾಗೂ ನಟ ಶಿವರಾಜಕುಮಾರ್‌ ದಂಪತಿ ಸೇರಿದಂತೆ ರಾಜ್‌ ಕುಟುಂಬ ವರ್ಗದವರು ಹಾಜರಿದ್ದು ಡಾ. ರಾಜಕುಮಾರ್‌ ಹಾಗೂ ಪಾರ್ವತಮ್ಮ ರಾಜಕುಮಾರ್‌ ಅವರ ಪುಣ್ಯಭೂಮಿಗೆ ಪುಷ್ಪ ನಮನ ಸಲ್ಲಿಸಿ, ಪೂಜೆ ನೆರವೇರಿಸಿದರು.

Advertisement

ಇದೇ ವೇಳೆ ಡಾ. ರಾಜಕುಮಾರ್‌ ಅವರ ಕುರಿತಾಗಿ ರಚಿಸಲಾದ “ವಿಶ್ವ ಮಾನವ ಡಾ. ರಾಜಕುಮಾರ್‌’ ಪುಸ್ತಕವನ್ನು ನಟ ಶಿವರಾಜಕುಮಾರ್‌ ಬಿಡುಗಡೆ ಮಾಡಿದರು. ಡಾ.ರಾಜಕುಮಾರ್‌ ಅಭಿಮಾನಿಗಳೇ ಸೇರಿ ರಚಿಸಿರುವ ಈ ಕೃತಿಯಲ್ಲಿ ಡಾ. ರಾಜ ಕುಮಾರ್‌ ಅವರ ವ್ಯಕ್ತಿತ್ವ, ಅವರ ಬದುಕಿನ ಅಪರೂಪದ ಘಟನೆಗಳನ್ನು ದಾಖಲಿಸಲಾಗಿದೆ.

ಇನ್ನು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಅಭಿಮಾನಿಗಳು ಕೂಡ ಬೆಳಿಗ್ಗೆಯಿಂದಲೇ ಸಮಾಧಿ ಬಳಿ ಪೂಜೆ ಸಲ್ಲಿಸಿ, ತಮ್ಮ ನೆಚ್ಚಿನ ನಟನನ್ನು ಸ್ಮರಿಸಿದರು. ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದು, ವರನಟನ ಸ್ಮರಣೆ ಮಾಡಿದರು.

ಡಾ. ರಾಜಕುಮಾರ್‌ ಪುಣ್ಯಸ್ಮರಣೆ ಅಂಗವಾಗಿ ಅಭಿಮಾನಿಗಳು ಅನ್ನದಾನ, ಉಚಿತ ಆರೋಗ್ಯ ತಪಾಸಣೆ ಶಿಬಿರ, ಬಡರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಸೇರಿದಂತೆ ಹಲವು ಸಮಾಜಮುಖೀ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಕಳೆದ ವರ್ಷದಂತೆ, ಈ ಬಾರಿಯೂ ಕೊರೋನಾ ಆತಂಕ ಇನ್ನೂ ಹೆಚ್ಚಾಗುತ್ತಿರುವುದರಿಂದ, ಆದಷ್ಟು ಸರಳವಾಗಿ ಡಾ. ರಾಜಕುಮಾರ್‌ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.

ಅಣ್ಣಾವ್ರನ್ನು ನೆನೆದ ಗಣ್ಯರು

Advertisement

ಡಾ. ರಾಜಕುಮಾರ್‌ 15ನೇ ಪುಣ್ಯತಿಥಿ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅಣ್ಣಾವ್ರನ್ನು ಸ್ಮರಿಸಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಸಿಎಂ, “ಅಪ್ರತಿಮ ಕಲಾವಿದ, ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ರತ್ನ ಡಾ. ರಾಜ್‌ ಕುಮಾರ್‌ ಅವರ ಪುಣ್ಯತಿಥಿಯಂದು ಅವರಿಗೆ ಅಭಿಮಾನ ಪೂರ್ವಕ ನಮನಗಳು. ಕೋಟ್ಯಂತರ ಅಭಿಮಾನಿಗಳ ಪಾಲಿನ ನೆಚ್ಚಿನ “ಅಣ್ಣಾವ್ರು’, ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ’ ಎಂದು ಟ್ವಿಟ್ಟರ್‌ ನಲ್ಲಿ ನಮನ ಸಲ್ಲಿಸಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೂಡ, “ಕರ್ನಾಟಕ ರತ್ನ, ಪದ್ಮಭೂಷಣ, ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪಡೆದ ಕರ್ನಾಟಕದ ಅತ್ಯಂತ ಜನಪ್ರಿಯ ಚಲನಚಿತ್ರ ನಟ, ಗಾಯಕ, ಅಭಿಮಾನಿಗಳಿಗೆ ದೇವರ ಸ್ಥಾನ ಕೊಟ್ಟ ನಟಸಾರ್ವಭೌಮ ಡಾ. ರಾಜಕುಮಾರ್‌ ಅವರ ಪುಣ್ಯತಿಥಿಯಂದು ನನ್ನ ನಮನಗಳು’ ಎಂದು ಟ್ವೀಟ್‌ ಮಾಡಿದ್ದಾರೆ. ಉಳಿದಂತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ರಾಜಕೀಯ ರಂಗದ ಅನೇಕ ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಡಾ. ರಾಜಕುಮಾರ್‌ ಅವರನ್ನು ಸ್ಮರಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next