Advertisement

ಕೆಜಿಎಫ್ 2 ಟೀಸರ್‌ ಬಿಡುಗಡೆಗೆ ಅಭಿಮಾನಿಗಳ ಅಭಿಯಾನ

11:57 AM Apr 14, 2020 | mahesh |

ಲಾಕ್‌ಡೌನ್‌ನಿಂದಾಗಿ ಎಲ್ಲವೂ ಸ್ಥಗಿತಗೊಂಡಿದೆ. ಆದರೂ, ಸಿನಿಪ್ರಿಯರು ತಮ್ಮ ಹೀರೋಗಳ ಸಿನಿಮಾ ಮೇಲೆ ಅತೀವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸದ್ಯಕ್ಕೆ ಯಶ್‌ ಅಭಿನಯದ “ಕೆಜಿಎಫ್ 2 ‘ ಚಿತ್ರ ಅವರ ಅಭಿಮಾನಿಗಳಲ್ಲಿ ಇನ್ನಿಲ್ಲದ ಕುತೂಹಲ ಮೂಡಿಸಿದೆ. ಈಗಾಗಲೇ ಚಿತ್ರ ತನ್ನ ಬಿಡುಗಡೆಯ ಡೇಟ್‌ ಬಹಿರಂಗಪಡಿಸುವ ಮೂಲಕ ಅಭಿಮಾನಿಗಳಿಗಿದ್ದ ಕುತೂಹಲಕ್ಕೆ ತೆರೆ ಎಳೆದಿದೆಯಾದರೂ, ಚಿತ್ರದ ಟೀಸರ್‌ ಯಾವಾಗ ಬಿಡುಗಡೆ ಆಗಲಿದೆ ಎಂದು ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ.

Advertisement

ಹೌದು, ಈ ಕುರಿತಂತೆ ಯಶ್‌ ಫ್ಯಾನ್ಸ್‌, ಟ್ವಿಟ್ಟರ್‌ ಮೂಲಕ ಪ್ರಶ್ನೆ ಕೇಳುತ್ತಿದ್ದಾರೆ. ಟೀಸರ್‌ ಬಿಡುಗಡೆ ಮಾಡಬೇಕು ಎಂಬ ಅಭಿಯಾನವನ್ನು ಶುರು ಮಾಡಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ “ಕೆಜಿಎಫ್ 2 ‘, ಸದ್ಯಕ್ಕೆ ಬಿಡುಗಡೆಯ ತಯಾರಿ ನಡೆಸುತ್ತಿದೆ. ಈಗ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲಿದ್ದಾರೆ. ಈ ಸಮಯದಲ್ಲಾದರೂ ಚಿತ್ರದ ಟೀಸರ್‌ ಬಿಡುಗಡೆ ಮಾಡಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ಈ ಹಿಂದೆ ಯಶ್‌ ಅವರ ಹುಟ್ಟುಹಬ್ಬಕ್ಕೆ ಚಿತ್ರದ ಟೀಸರ್‌ ರಿಲೀಸ್‌ ಮಾಡಲಾಗುತ್ತದೆ ಎಂದು ಅಭಿಮಾನಿಗಳು ನಂಬಿದ್ದರು. ಆದರೆ, ಕೆಲವು ಕಾರಣಾಂತರಗಳಿಂದ ಟೀಸರ್‌ ರಿಲೀಸ್‌ ಆಗಲಿಲ್ಲ. ಯಶ್‌ ಅವರ ಹುಟ್ಟುಹಬ್ಬ ಆಗಿ ತಿಂಗಳುಗಳೇ ಕಳೆದಿವೆ. ಆದರೆ, ಈವರೆಗೂ ಟೀಸರ್‌ ಬಿಡುಗಡೆಯಾಗಿಲ್ಲ. ಹಾಗಾಗಿ, ಫ್ಯಾನ್ಸ್‌ ತಮ್ಮ ಟ್ವಿಟ್ಟರ್‌ ಖಾತೆಗಳ ಮೂಲಕ, ಈಗಾದರೂ ಟೀಸರ್‌ ರಿಲೀಸ್‌ ಮಾಡಬೇಕು ಎಂದು ಹೊಸ ಅಭಿಯಾನ ಶುರು ಮಾಡಿದ್ದಾರೆ.

“ಕೆಜಿಎಫ್ 2 ‘ ಚಿತ್ರದ ಬಗ್ಗೆ ಮಾಹಿತಿ ಕೊಡಬೇಕು, ಆದಷ್ಟು ಬೇಗ ಟೀಸರ್‌ ಬಿಡುಗಡೆ ಮಾಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. “ವಿ ವಾಂಟ್‌ ಕೆಜಿಎಫ್ 2 ಟೀಸರ್‌ ಅಪ್‌ಡೇಟ್‌  ಎಂದು ಹ್ಯಾಶ್‌ ಟ್ಯಾಗ್‌ ಹಾಕಿ ಟ್ರೆಂಡ್‌ ಮಾಡುತ್ತಿದ್ದಾರೆ. ಈ ಅಭಿಯಾನಕ್ಕೆ ದಿನ ಕಳೆದಂತೆ ಅಭಿಮಾನಿಗಳ ಸಂಖ್ಯೆ ಕೂಡ
ದೊಡ್ಡದಾಗುತ್ತಿದೆ. ಕೇವಲ ಕನ್ನಡದ ಫ್ಯಾನ್ಸ್‌ ಮಾತ್ರವಲ್ಲ, ಇತರೆ ಭಾಷೆಯ ಫ್ಯಾನ್ಸ್‌ ಕೂಡ ಟೀಸರ್‌ ರಿಲೀಸ್‌ಗೆ ಬೇಡಿಕೆ ಇಟ್ಟಿದ್ದಾರೆ.

ತಮ್ಮ ಟ್ವಿಟ್ಟರ್‌ನಲ್ಲಿ, ಪೀತಿಯ ಹೊಂಬಾಳೆ ಫಿಲ್ಮ್ಸ್, ಕಾರ್ತಿಕ್‌ ಗೌಡ ಮತ್ತು ನಿರ್ದೇಶಕ ಪ್ರಶಾಂತ್‌ ನೀಲ್‌ ಅವರೇ ನಾವು ಯಶ್‌ ಅವರ ಅಪ್ಪಟ ಅಭಿಮಾನಿಗಳಾಗಿದ್ದು, “ಕೆಜಿಎಫ್ 2 ‘ ಚಿತ್ರದ ಟೀಸರ್‌ಗೆ ಕಾಯುತ್ತಿದ್ದೇವೆ. ದಯವಿಟ್ಟು ಬೇಗ ಟೀಸರ್‌ ರಿಲೀಸ್‌ ಮಾಡುವ ಮೂಲಕ ಅಭಿಮಾನಿಗಳ ಆಸೆ ಈಡೇರಿಸಬೇಕು ಎಂದು ಮನವಿ ಮಾಡಿದ್ದಾರೆ. ಅಂದಹಾಗೆ, “ಕೆಜಿಎಫ್ 2 ‘ ಅಕ್ಟೋಬರ್‌ 23 ರಂದು ಅದ್ಧೂರಿ ಬಿಡುಗಡೆ ಕಾಣಲಿದೆ ಎಂದು ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ. ದಸರಾ ವೇಳೆ ಚಿತ್ರ ಬರಲಿದ್ದು, ಈಗಿನಿಂದಲೇ ಅಭಿಮಾನಿಗಳು ಸಿನಿಮಾ ನೋಡಲು ಕಾತುರಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next