ವಿಧಾನ ಪರಿಷತ್ತು: ಹೊಸದಾಗಿ ಮಂತ್ರಿಯಾಗಿ ಕ್ಷೇತ್ರಕ್ಕೆ ಹೋದ್ರೆ, ಭೇಟಿಗೆ ಬರುವ ಅಭಿಮಾನಿಗಳಿಗೆ ಕೈಕುಲುಕಲು ಭಯ ಆಗುತ್ತಿದೆ. ಒಂದು ವೇಳೆ ಹಸ್ತಲಾಘವ ಮಾಡದಿದ್ದರೆ, “ಮಂತ್ರಿ ಆದ್ಮೇಲೆ ನಮ್ಮ ನಾಯಕನಿಗೆ ಎಷ್ಟು ಸೊಕ್ಕು ಬಂತು ನೋಡಿ’ ಅಂದುಕೊಳ್ತಾರೆ. ಆದರೆ, ನನ್ನ ಸಂಕಟ ಅವರಿಗೆ ಗೊತ್ತಾಗ್ತಿಲ್ಲ…!
ಜಾಗತಿಕ ಮಟ್ಟದಲ್ಲಿ ತೀವ್ರವಾಗಿ ವ್ಯಾಪಿಸುತ್ತಿರುವ ಕೊರೊನಾ ವೈರಸ್ ಬಗ್ಗೆ ಸ್ವತಃ ಕೃಷಿ ಸಚಿವ ಬಿ.ಸಿ. ಪಾಟೀಲ್ ಆತಂಕ ವ್ಯಕ್ತಪಡಿಸಿದ ರೀತಿ ಇದು. ಸಚಿವರ ಈ ಆತಂಕವೇ ಬುಧವಾರ ಮೇಲ್ಮನೆಯಲ್ಲಿ ಸ್ವಾರಸ್ಯಕರ ಚರ್ಚೆಗೂ ವೇದಿಕೆಯಾಯಿತು.
ಕಳೆದ ಭಾನುವಾರ ನಾನು ನನ್ನ ಕ್ಷೇತ್ರಕ್ಕೆ ಹೋಗಿದ್ದೆ. ಸಚಿವನಾಗಿ ಬಂದಿದ್ದೇನೆಂದು ಕಾರ್ಯಕರ್ತರು, ಅಭಿಮಾನಿಗಳೆಲ್ಲಾ ಬಂದು ಹಸ್ತಲಾಘವ ಮಾಡಲು ಮುಗಿಬೀಳುತ್ತಿದ್ದರು. ಪ್ರತಿಯಾಗಿ ನಾನೂ ಕೈಕೊಡುವಾಗ ಕೊರೊನಾ ವೈರಸ್ ನೆನಪಾಗಿ ಭಯ ಆಗುತ್ತಿತ್ತು. ತಕ್ಷಣ ಹಿಂತೆಗೆದುಕೊಳ್ಳುತ್ತಿದ್ದೆ. ಇದೇ ಸ್ಥಿತಿಯನ್ನು ವಿಧಾನಸೌಧದಲ್ಲಿ ಅಭಿಮಾನಿಗಳ ಭೇಟಿ ವೇಳೆಯೂ ಎದುರಿಸಿದ್ದೇನೆ. ಕೈಕೊಡದಿದ್ದರೆ ನನಗೆ ಸೊಕ್ಕು ಬಂದಿದೆ ಅಂತ ಅಂದುಕೊಳ್ಳುತ್ತಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಕೈಕೊಟ್ಟವರಾ ಕೈಬಿಟ್ಟವರಾ?: ಕೈಕುಲುಕದಿರು ವುದರಿಂದ “ಸೊಕ್ಕು ಬಂತು’ ಅಂದುಕೊಳ್ಳ ದಿರಲೆಂದು “ನಾನು ಕೈ ಪಕ್ಷ ಬಿಟ್ಟಿದ್ದೇನೆ. ಆದ್ದ ರಿಂದ ಕೈ ಕೊಡುವುದಿಲಪ್ಪ’ ಎಂದು ಹೇಳುತ್ತಿರುವುದಾಗಿ ಪ್ರತಿ ಪಕ್ಷದ ಕಾಲೆಳೆದರು. ಆಗ, ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ, “ನೀವು ಕೈ ಪಕ್ಷ ಬಿಟ್ಟವರಲ್ಲ, ಕೈಕೊಟ್ಟವರು’ ಎಂದು ತಿರುಗೇಟು ನೀಡಿದರು.
ತಕ್ಷಣ ಎದ್ದುನಿಂತ ತೇಜಸ್ವಿನಿಗೌಡ, “ಕೈಕೊಟ್ಟವರಲ್ಲ; ನೀವು ಕೈಬಿಟ್ಟವರು ಅವರು (ಬಿ.ಸಿ. ಪಾಟೀಲ್)’ ಎಂದು ಟಾಂಗ್ ಕೊಟ್ಟರು. ಮಧ್ಯಪ್ರವೇಶಿಸಿದ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ, “ಎಷ್ಟಾದರೂ ನಮ್ಮ ಎತ್ತು. ಎಲ್ಲಿ ಮೇಯ್ದರೆ ಏನು” ಎಂದು ಚಟಾಕಿ ಹಾರಿಸಿದರು. ಆಗ ಸದನದಲ್ಲಿ ನಗೆ ಬುಗ್ಗೆ ಚಿಮ್ಮಿತು.
ಹೆಂಡ್ತಿ ಕಾಲ್ ಮಾಡಿ ಕೇಳ್ತಿದಾಳೆ…: “ಬೆಂಗಳೂರಿನಲ್ಲೂ ಕೊರೊನಾ ವೈರಸ್ ಬಂದಿದೆ ಅಂತಲ್ಲಾರೀ ಹುಷಾರು’ ಎಂದು ಊರಲ್ಲಿರುವ ನನ್ನ ಹೆಂಡ್ತಿ ಫೋನ್ ಮಾಡಿ ಹೇಳುತ್ತಿದ್ದಾಳೆ. ನನಗೆ ಮಾತ್ರವಲ್ಲ; ಸಾಮಾನ್ಯರಿಗೂ ಇಂತಹ ಹಲವು ಗೊಂದಲ ಮತ್ತು ಆತಂಕಗಳು ಮನೆಮಾಡಿವೆ ಎಂದು ಇದಕ್ಕೂ ಮುನ್ನ ಬಿಜೆಪಿ ಸದಸ್ಯ ಅರುಣ್ ಶಹಾಪುರ ದನಿಗೂಡಿಸಿದರು.
“ದುಬೈನಲ್ಲಿ ಕನ್ನಡ ಸಂಘದವರು ಕನ್ನಡದ ಸಮ್ಮೇಳನಕ್ಕೆ ಆಹ್ವಾನ ನೀಡಿದ್ದಾರೆ. ಆದರೆ, ನಿನ್ನೆ ಸೋಂಕು ಪತ್ತೆಯಾದ ಟೆಕ್ಕಿ ಬಂದಿದ್ದು ಕೂಡ ದುಬೈದಿಂದಲೇ. ಹಾಗಾಗಿ, ಅಲ್ಲಿಗೆ ಹೋಗ್ಬೇಕೋ ಬೇಡವೋ ಎಂಬ ಗೊಂದಲ ಕಾಡುತ್ತಿದೆ’ ಎಂದು ಬಸವರಾಜ ಹೊರಟ್ಟಿ ಕೂಡ ಆತಂಕ ಹೊರಹಾಕಿದರು.
ಆಗ, ಸದಸ್ಯ ಧರ್ಮಸೇನ ನನಗೆ ಸೀನಲಿಕ್ಕೂ ಭಯ ಆಗುತ್ತಿದೆ ಎಂದರು. ಮತ್ತೂಂದು ತುದಿಯಲ್ಲಿದ್ದ ಸದಸ್ಯೆ ಜಯಮ್ಮ, ಮೊಬೈಲ್ ಮುಟ್ಟಿದರೂ ಈ ವೈರಸ್ ಬರುತ್ತಾ ಸರ್ ಎಂದು ಕೇಳುವ ಮೂಲಕ ಗಮನಸೆಳೆದರು. ಇದೆಲ್ಲದಕ್ಕೂ ಸಚಿವ ಡಾ.ಸುಧಾಕರ್ ಉತ್ತರ ನೀಡುವ ಮೂಲಕ ಗೊಂದಲ ಬಗೆಹರಿಸುವ ಪ್ರಯತ್ನ ಮಾಡಿದರು.