Advertisement

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

11:41 AM Mar 28, 2024 | Team Udayavani |

ಪಿಲಿಕುಳ: ದಿನದಿಂದ ದಿನಕ್ಕೆ ಬಿಸಿಲ ಬೇಗೆ ಏರುತ್ತಿದ್ದು, ನಗರದಲ್ಲಿ ವಿಪರೀತ ಸೆಖೆಯಿಂದ ಜನ ಸುಸ್ತಾಗಿದ್ದಾರೆ. ಬಿರು ಬಿಸಿಲಿಗೆ
ನಗರದಲ್ಲಿ ಸುತ್ತಾಡುವುದೇ ಕಷ್ಟ-ಕಷ್ಟ ಎಂಬಂತಾಗಿದೆ. ಪ್ರಾಣಿಗಳಿಗೂ ಇದೇ  ಸಮಸ್ಯೆ. ಅದರಲ್ಲಿಯೂ ಪಿಲಿಕುಳದಲ್ಲಿರುವ ಪ್ರಾಣಿಗಳಿಗೆ ಸೆಕೆ ಹೊರತಾಗಿಲ್ಲ. ಅಲ್ಲಿ ಅವುಗಳನ್ನು ತಂಪಾಗಿರಿಸುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನಗಳು ಈ ಬಾರಿಯೂ ನಡೆದಿದೆ.

Advertisement

ಪ್ರಾಣಿಗಳನ್ನು ತಂಪಾದ ವಾತಾವರಣದಲ್ಲಿ ಇರಿಸುವ ನಿಟ್ಟಿನಲ್ಲಿ ಕೆಲವೆಡೆ ಹೆಚ್ಚುವರಿ ಫ್ಯಾನ್‌ ಹಾಗೂ ಪ್ರಾಣಿಗಳಿಗೆ ನಿಗದಿತವಾಗಿ ನೀರು ಚಿಮ್ಮಿಸುವ ಕಾರ್ಯವೂ ನಡೆಯುತ್ತಿದೆ.

ಪಿಲಿಕುಳ ಮೃಗಾಲಯದ ಪರಿಸರದಲ್ಲಿ ಹೇರಳವಾಗಿ ಗಿಡ-ಮರಗಳಿದ್ದರೂ ಬಿಸಿಲಿನ ತಾಪ ಕಡಿಮೆ ಇಲ್ಲ. ಹಾಗಾಗಿ ಹೆಚ್ಚಿನ ಪ್ರಮಾಣದ ಕುಡಿಯುವ ನೀರು ಪ್ರಾಣಿಗಳಿಗೆ ಅಗತ್ಯವಿದೆ. ಸುಮಾರು 150 ಎಕ್ರೆಯಲ್ಲಿ ಹರಡಿಕೊಂಡ ಉದ್ಯಾನವನದಲ್ಲಿ 98 ಪ್ರಭೇದಗಳ ಸಾವಿರಕ್ಕೂ ಅಧಿಕ ಪ್ರಾಣಿ- ಪಕ್ಷಿಗಳಿವೆ. ವಿಶೇಷವಾಗಿ ಹುಲಿ, ಸಿಂಹ, ಚಿರತೆ, ನೀರಾನೆ, ಕರಡಿ ಸಹಿತ ದೊಡ್ಡ ಪ್ರಾಣಿಗಳು ಸೆಖೆಯಿಂದ ಸಾಮಾನ್ಯವಾಗಿ ಸಮಸ್ಯೆ ಎದುರಿಸುತ್ತದೆ.

ಹೀಗಾಗಿ ಅವುಗಳಿಗೆ ವಿಶೇಷ ನೆಲೆಯಲ್ಲಿ ನೀರು ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ. ಕುಡಿಯಲು ನೀರು ಸಮರ್ಪಕವಾಗಿ ಸಿಗುವ ಜತೆಗೆ, ಪ್ರಾಣಿಗಳು ಸುತ್ತಾಡುವ ಪ್ರದೇಶದಲ್ಲಿ ನೀರು ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ. ಅದರಲ್ಲಿಯೂ
ಪ್ರಾಣಿಗಳನ್ನು ಇರಿಸಲಾಗಿರುವ ಗೂಡಿನ ಹೊರಭಾಗದಲ್ಲಿ ಫ್ಯಾನ್‌ ಸೌಕರ್ಯವನ್ನು ಮಾಡಿಸಲಾಗಿದೆ.

Advertisement

ನೀರ ಹನಿಗಳ ಸಂಭ್ರಮ!
ಸೆಖೆ ಹೆಚ್ಚಿರುವ ಸಮಯದಲ್ಲಿ ಪೈಪುಗಳ ಮೂಲಕ ಪ್ರಾಣಿಗಳ ಮೈಮೇಲೆ ನೀರು ಚಿಮ್ಮಿಸಲಾಗುತ್ತಿದೆ. ದಿನದಲ್ಲಿ ಸುಮಾರು ಎರಡು-ಮೂರು ಬಾರಿ ಇದನ್ನು ನಿಯಮಿತವಾಗಿ ಮಾಡಲಾಗುತ್ತಿದೆ. ವಿಶೇಷವೆಂದರೆ, ಉದ್ಯಾನವನದಲ್ಲಿ ಪ್ರಾಣಿಗಳು ಓಡಾಡುವ ಸ್ಥಳದ ಮೇಲ್ಭಾಗದಲ್ಲಿ ನೀರಿಗಾಗಿ “ಸ್ಪಿಂಕ್ಲರ್‌’ಗಳನ್ನು ಅಳವಡಿಸಲಾಗಿದ್ದು, ಮೇಲಿಂದ ನೀರು ಬೀಳುವ ಸಂದರ್ಭ ಪ್ರಾಣಿಗಳು ಅದಕ್ಕೂ ಮೈಯೊಡ್ಡಿ ನಿಲ್ಲುತ್ತವೆ. ಹಕ್ಕಿಗಳಿಗೂ ಕೂಡ ನೀರು ಚಿಮ್ಮಿಸುವ ಪ್ರಕ್ರಿಯೆ ನಡೆಯುತ್ತದೆ. ಜತೆಗೆ ಜಿಂಕೆ, ಕಡವೆಗಳು
ಓಡಾಡುವ ಜಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಸೆಕೆ ನಿಯಂತ್ರಣಕ್ಕೆ ಕ್ರಮ
ಬಾರೀ ಸೆಕೆಯಿಂದ ಪ್ರಾಣಿ-ಪಕ್ಷಿಗಳ ಸೆಕೆ ನಿಯಂತ್ರಣಕ್ಕೆ ಪಿಲಿಕುಳದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗಿದೆ. ಫ್ಯಾನ್‌, ನೀರು ಚಿಮ್ಮಿಸುವ ಮೂಲಕ ವಾತಾವರಣವನ್ನು ತಂಪಾಗಿಸುವ ಪ್ರಯತ್ನಿಸಲಾಗುತ್ತಿದೆ. ಜತೆಗೆ, ಅಲ್ಲಲ್ಲಿ ನೀರಿನ ಕೊಳ, ಟ್ಯಾಂಕ್‌ ಗಳನ್ನೂ ಅಳವಡಿಸಲಾಗಿದೆ.
*ಎಚ್‌. ಜಯಪ್ರಕಾಶ್‌
ಭಂಡಾರಿ, ನಿರ್ದೇಶಕರು, ಪಿಲಿಕುಳ ಜೈವಿಕ ಉದ್ಯಾನವನ

ಗೂಡಿನ ಮೇಲ್ಛಾವಣಿಗೆ ಬಿಳಿ ಬಣ್ಣ
ಕೆಲವೊಂದು ಪ್ರಾಣಿಗಳ ಗೂಡಿನ ಮೇಲ್ಛಾವಣಿಯ ಮೇಲೆ ಬಿಳಿ ಬಣ್ಣದ ಪೈಂಟ್‌ಗಳನ್ನು ಬಳಿಯಲಾಗಿದೆ. ಯಾಕೆಂದರೆ, ಬಿಳಿ ಬಣ್ಣವು ಬಿಸಿಲನ್ನು ಹೀರಿ ತಂಪು ನೀಡುತ್ತದೆ. ಜತೆಗೆ ಕೆಲವೊಂದೆಡೆ ಮೇಲ್ಛಾವಣಿಗೆ ಸೋಗೆಗಳನ್ನೂ ಹಾಕಲಾಗಿದೆ. ಹಾವುಗಳಿರುವ ಪ್ರದೇಶದಲ್ಲೂ ಹೆಚ್ಚುವರಿ ನೀರಿನ ವ್ಯವಸ್ಥೆಗಳನ್ನು ಮಾಡಲಾಗಿದೆ. ಉರಗಗಳು ಇರುವ ಸ್ಥಳದಲ್ಲಿ ಮೇಲಿನಿಂದ ನೀರನ್ನು ಸ್ಪಿಂಕ್ಲರ್‌ ಮೂಲಕ ಚಿಮಿಕಿಸಲಾಗುತ್ತಿದೆ.

*ದಿನೇಶ್‌ ಇರಾ

ಚಿತ್ರ: ಸತೀಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next