Advertisement
ಇಂಥ ಅಚ್ಚರಿಯ ರಾಜಕಾರಣ ಬೆಳಗಾವಿಯಲ್ಲಿ ಮಾತ್ರ ಕಾಣಲು ಸಾಧ್ಯ. ಇಲ್ಲಿ ಕುಟುಂಬ ರಾಜ ಕಾರಣ, ವಂಶ ಪಾರಂಪರ್ಯ ಆಡಳಿತ ಮತ್ತು ಪಾಳೆ ಗಾರಿಕೆ ಸಂಸ್ಕೃತಿ ಇದೆ. ಹೀಗಾಗಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಹೊಸ ಮುಖಗಳನ್ನು ಕಣಕ್ಕಿಳಿಸಿ ಪ್ರಯತ್ನ ಮಾಡುವ ಸಾಹಸಕ್ಕೆ ಹೋಗೇ ಇಲ್ಲ. ಜೆಡಿಎಸ್ ಮಾಡಿದರೂ ಅದಕ್ಕೆ ಫಲ ಸಿಕ್ಕಿಲ್ಲ.
Related Articles
Advertisement
ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ, ಲಕ್ಷ್ಮಣ ಸವದಿ, ದುರ್ಯೋಧನ ಐಹೊಳೆ, ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ, ಈಗ ಗಣೇಶ ಹುಕ್ಕೇರಿ, ರಮೇಶ್‌ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಸತತ ಜಯ ದಾಖಲಿಸುತ್ತಲೇ ಬಂದಿದ್ದು ತಮ್ಮ ಕ್ಷೇತ್ರಗಳಲ್ಲಿ ಬೇರೆಯವರು ಟಿಕೆಟ್‌ಗೆ ಪ್ರಯತ್ನ ನಡೆಸದಂತೆ ಮಾಡಿದ್ದಾರೆ. ದಾಖಲೆಯ ಎಂಟು ಬಾರಿ ಶಾಸಕ ರಾಗಿ ಗಮನಸೆಳೆದಿದ್ದ ಉಮೇಶ ಕತ್ತಿ ಅನುಪಸ್ಥಿತಿ ಈ ಚುನಾವಣೆಯಲ್ಲಿ ಎದ್ದು ಕಾಣಲಿದೆ. ಆದರೆ ಅವರಿಂದ ತೆರವಾದ ಜಾಗಕ್ಕೆ ಬಿಜೆಪಿ ಕತ್ತಿ ಕುಟುಂಬಕ್ಕೇ ಮಣೆ ಹಾಕಲು ಉದ್ದೇಶಿಸಿದೆ. ಹೀಗಾಗಿ ಹುಕ್ಕೇರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಬೇರೆಯವರು ಪ್ರಯತ್ನ ಮಾಡದಂತಾಗಿದೆ.
ಚಿಕ್ಕೋಡಿಯ ಹಿರಿಯ ಅನುಭವಿ ಪ್ರಕಾಶ ಹುಕ್ಕೇರಿ ರಾಜಕಾರಣದಲ್ಲಿ ಬಹಳ ಪಳಗಿದವರು. ಐದು ಬಾರಿ ಶಾಸಕರಾಗಿದ್ದಲ್ಲದೆ ಅನಂತರ ಆದನ್ನು ಮಗನಿಗೆ ಬಿಟ್ಟುಕೊಟ್ಟು ಕಾಂಗ್ರೆಸ್‌ನಿಂದ ಸಂಸದ ರಾದ ಹೆಮ್ಮೆ. ಈಗ ವಿಧಾನ ಪರಿಷತ್ ಸದಸ್ಯರು. ಹೀಗಾಗಿ ಚಿಕ್ಕೋಡಿ ತಾಲೂಕಿನಲ್ಲಿ ಅಪ್ಪ ಮತ್ತು ಮಗನದ್ದೇ ದರ್ಬಾರ್. ಇವರಿಂದಾಗಿ ಕಾಂಗ್ರೆಸ್‌ನಲ್ಲಿ ಬೇರಾರೂ ಟಿಕೆಟ್ ಕೇಳದ ಸ್ಥಿತಿ ಇದೆ.
ಸವದಿ ಸಾಹುಕಾರ ರಾಜಕೀಯ: ಅಥಣಿ ಕ್ಷೇತ್ರದಿಂದ ಸತತ ಮೂರು ಬಾರಿ ಜಯ ಸಾಧಿಸಿ ಹ್ಯಾಟ್ರಿಕ್ ದಾಖಲೆ ಮಾಡಿರುವ ಬಿಜೆಪಿಯ ಲಕ್ಷ್ಮಣ ಸವದಿ ಕಳೆದ ಚುನಾವಣೆಯಲ್ಲಿ ಸೋತರೂ ವಿಧಾನ ಪರಿಷತ್ ಸದಸ್ಯರಾಗಿದ್ದಲ್ಲದೆ ಉಪಮುಖ್ಯಮಂತ್ರಿಯೂ ಆದರು. ಈಗ ಮತ್ತೆ ವಿಧಾನಸಭೆ ಚುನಾವಣೆಗೆ ನಿಲ್ಲುವ ತಯಾರಿಯಲ್ಲಿದ್ದಾರೆ. ನಿಪ್ಪಾಣಿಯಲ್ಲಿ ಅಣ್ಣಾಸಾಹೇಬ ಜೊಲ್ಲೆ ಸಂಸದರಾಗಿದ್ದರೆ, ಅವರ ಪತ್ನಿ ಶಶಿಕಲಾ ಶಾಸಕರಾಗಿ, ಸಚಿವರಾಗಿದ್ದಾರೆ. ಈಗ ಮಗನನ್ನು ಚಿಕ್ಕೋಡಿಯಿಂದ ಕಣಕ್ಕಿಳಿಸುವ ತಯಾರಿಯಲ್ಲಿದ್ದಾರೆ. ಬೆಳಗಾವಿ ಗ್ರಾಮೀಣದಲ್ಲಿ ಕಾಂಗ್ರೆಸ್‌ನ ಲಕ್ಷ್ಮೀ ಹೆಬ್ಟಾಳ್ಕರ್ ಶಾಸಕರಾಗಿದ್ದರೆ ಅವರ ಸಹೋದರ ಚನ್ನರಾಜ ಎಂಎಲ್‌ಸಿ.
ಜಿಲ್ಲೆಯಲ್ಲಿ ಈ ಪ್ರಭಾವಿ ನಾಯುಕರ ವೈಯಕ್ತಿಕ ವರ್ಚಸ್ಸಿನ ಪರಿಣಾಮ ಪ್ರಮುಖ ಪಕ್ಷಗಳೇ ಇವರಿಗೆ ದುಂಬಾಲು ಬೀಳುವ ಸ್ಥಿತಿ ಇದೆ. ಈ ಹಿರಿಯ ಅನುಭವಿಗಳಿಗೆ ಪಕ್ಷಗಳು ಬೇಕಾಗಿಲ್ಲ ಬದಲಾಗಿ ಪಕ್ಷಗಳಿಗೆ ಇವರು ಅನಿವಾರ್ಯ. ರಾಷ್ಟ್ರೀಯ ಪಕ್ಷಗಳು ಸಹ ಹೊಸ ಮುಖ ಪರೀಕ್ಷಿಸುವ ಪ್ರಯತ್ನ ಮಾಡುತ್ತಿಲ್ಲ.
ಜಾರಕಿಹೊಳಿ ಸೋದರರ ದರ್ಬಾರ್ಇನ್ನು ಗೋಕಾಕ ಮತ್ತು ಅರಭಾವಿ ತಾಲೂಕಿನಲ್ಲಿ ನಾಲ್ಕೈದು ಚುನಾವಣೆಗಳಿಂದ ದವಲತ್ತು ಮುಂದುವರಿಸಿರುವ ರಮೇಶ್ ಹಾಗೂ ಬಾಲಚಂದ್ರ ಜಾರಕಿಹೊಳಿ ಬೇರೆಯವರಿಗೆ ಅವಕಾಶ ಸಿಗದಂತೆ ಮಾಡಿದ್ದಾರೆ. ಕುಟುಂಬ ರಾಜಕಾರಣ ಇವರಲ್ಲಿ ಬಲವಾಗಿ ಬೇರು ಬಿಟ್ಟಿದೆ. ರಮೇಶ ಸತತ ಆರು ಬಾರಿ ಗೆದ್ದು ದಾಖಲೆ ಮಾಡಿದರೆ, ಬಾಲಚಂದ್ರ ಜಾರಕಿಹೊಳಿ ಐದು ಬಾರಿ ವಿಧಾನಸಭೆ ಪ್ರವೇಶ ಮಾಡಿದ್ದಾರೆ. ಇವರ ಸಹೋದರ ಸತೀಶ ಜಾರಕಿಹೊಳಿ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದಲ್ಲದೆ ಅನಂತರ ಸತತ ಮೂರು ಬಾರಿ ಶಾಸಕರಾಗಿ, ಸಚಿವರಾದವರು. ಇನ್ನೊಬ್ಬ ಸಹೋದರ ಲಖನ್ ವಿಧಾನಪರಿಷತ್ ಸದಸ್ಯರು. – ಕೇಶವ ಆದಿ