ಬೆಂಗಳೂರು: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಜ್ವಲಾ ಯೋಜನೆ ಹಾಗೂ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ ಸೇರಿದಂತೆ ನಿರ್ದಿಷ್ಟ ಫಲಾನುಭವಿ ಯೋಜನೆಗಳ ವ್ಯಾಪ್ತಿಗೆ ಒಳಪಡದ ಜನರಿಗೆ ಉಚಿತ ಅಥವಾ ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ಸಿಲಿಂಡರ್ ಪೂರೈಸುವ ಸ್ಥಿತಿಯಲ್ಲಿ ಇಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಹೇಳಿದೆ.
ಈ ಕುರಿತು ಸಲ್ಲಿಸಲಾದ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ಲಿಖೀತ ವಾದ ಮಂಡಿಸಿದ ಸರ್ಕಾರದ ಹೆಚ್ಚುವರಿ ವಕೀಲ ವಿಕ್ರಂ ಹುಯಿಲಗೋಳ, ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಜ್ವಲಾ ಯೋಜನೆ ಹಾಗೂ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ ಸೇರಿದಂತೆ ನಿರ್ದಿಷ್ಟ ಯೋಜನೆಗಳ ವ್ಯಾಪ್ತಿಗೆ ಒಳಪಡದ ಜನರಿಗೆ ಉಚಿತ ಅಥವಾ ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ಸಿಲಿಂಡರ್ ಪೂರೈಸುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ ಎಂದು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ರಾಜ್ಯ ಸರ್ಕಾರದ ಈ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಮೇ 12ಕ್ಕೆ ಮುಂದೂಡಿತು.ರಾಜ್ಯದಲ್ಲಿರುವ 1.60 ಕೋಟಿ ಎಲ್‌ಪಿಜಿ ಸಂಪರ್ಕಗಳ ಪೈಕಿ 31.17 ಲಕ್ಷ ಕುಟುಂಬಗಳಿಗೆ ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ನೆರವು ನೀಡಲಾಗುತ್ತಿದೆ. ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ 1 ಲಕ್ಷ ಕುಟುಂಬಗಳಿಗೆ ಮೇ ತಿಂಗಳಿಂದ ಉಚಿತ ಸಿಲಿಂಡರ್ ಒದಗಿಸಲಾಗುವುದು ಎಂದು ಸರ್ಕಾರ ಹೇಳುತ್ತಿದೆ.
ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ ವ್ಯಾಪ್ತಿಗೆ ಬಾರದ ಹಾಗೂ ಅಡುಗೆ ಅನಿಲ ಸಂಪರ್ಕ ಹೊಂದಿದ್ದರೂ ಸದ್ಯದ ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಆದಾಯವಿಲ್ಲದ ಸಿಲಿಂಡರ್ ಪಡೆದುಕೊಳ್ಳಲು ಸಾಧ್ಯವಾಗದಿರುವ ಕುಟುಂಬಗಳ ಬಗ್ಗೆ ಸರ್ಕಾರ ಯೋಚನೆ ಮಾಡಬೇಕು. ಹಾಗಾಗಿ, ಇಂತಹ ಕುಟುಂಬಗಳಿಗೆ ಒಂದು ಬಾರಿಯ ಕ್ರಮವಾಗಿ ಒಂದು ಸಿಲಿಂಡರ್‌ಗೆ ಸಬ್ಸಿಡಿ ರೂಪದಲ್ಲಿ ನೆರವು ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.