ಬಾಗಲಕೋಟೆ: ಕಳೆದ 5 ವರ್ಷಗಳ ನನ್ನ ಅವಧಿಯಲ್ಲಿ ನೀರಾವರಿ, ವಿದ್ಯುತ್, ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಜನತೆ ಅಭಿವೃದ್ಧಿ ಪರವಾಗಿದ್ದಾರೆ. ಅವರ ಆಶೋತ್ತರಗಳಿಗೆ ಸ್ಪಂದಿಸಿ ಪ್ರಾಮಾಣಿಕ ಜನಸೇವೆ ಮಾಡಿದ ತೃಪ್ತಿ ನನಗಿದೆ ಎಂದು
ಸಚಿವ ಮುರುಗೇಶ ನಿರಾಣಿ ಹೇಳಿದರು.
ಬೀಳಗಿ ಮತಕ್ಷೇತ್ರದ ಬಾದಾಮಿ ತಾಲೂಕು ವ್ಯಾಪ್ತಿಯ ಇನಾಂಹುಲ್ಲಿಕೇರಿ ಗ್ರಾಪಂ ವ್ಯಾಪ್ತಿಯ ಯಂಕಂಚಿ, ಮಣಿನಾಗರ, ಗುಬ್ಬೇರಕೊಪ್ಪ, ಹುಲ್ಲಿಕೇರಿ, ಮತ್ತಿಕಟ್ಟಿ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಬಾದಾಮಿ ತಾಲೂಕಿನಲ್ಲಿ ನೀರು ಹರಿಸಿ, ಹಸಿರು ಕಂಗೊಳಿಸುವಂತೆ ಮಾಡುವುದು ನನ್ನ ಧ್ಯೇಯವಾಗಿತ್ತು.
ನಮ್ಮ ಜನತೆ ಬದುಕು ಸುಸ್ಥಿರವಾಗಬೇಕು. ಉತ್ತಮ ದರ್ಜೆ ಮೂಲಭೂತ ಸೌಕರ್ಯ ದೊರೆಯಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಈ ಭಾಗಕ್ಕೆ ಹೆರಕಲ್, ಕೆರೂರು, ಅನವಾಲ, ಕಾಡರಕೊಪ್ಪ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಮುಂದಿನ ಕೆಲವು ವರ್ಷಗಳಲ್ಲಿ ಬಾದಾಮಿ ತಾಲೂಕಿನ ಚಿತ್ರಣ ಬದಲಾಗಲಿದೆ ಎಂದ ಅವರು, ಸುಳ್ಳು ಆಶ್ವಾಸನೆ ನೀಡುವ ಕಾಂಗ್ರೆಸ್ ನಾಯಕರ ಬಣ್ಣದ ಮಾತಿಗೆ ಮರುಳಾಗದೇ ವಿಕಾಸ ಮಂತ್ರ ಪಠಿಸುವ ಬಿಜೆಪಿಗೆ ಮತ್ತೂಮ್ಮೆ ಜನಾಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ಇದೇ ವೇಳೆ ಮುರುಗೇಶ ನಿರಾಣಿಯವರ ಅಭಿವೃದ್ದಿ ಕಾರ್ಯ ಮೆಚ್ಚಿ ಯಂಕಂಚಿ, ಮಣಿನಾಗರ, ಗುಬ್ಬೇರಕೊಪ್ಪ, ಇನಾಂ ಹುಲ್ಲಿಕೇರಿ ಹಾಗೂ ಮತ್ತಿಕಟ್ಟಿ ಗ್ರಾಮದ ಯಲ್ಲಪ್ಪ ಮಾದರ, ಕೊಪಲಪ್ಪ ಮಾದರ, ಶಿವಪ್ಪ ಮಾದರ, ಗಂಗಾಧರ ಬುಡನ್ನವರ, ಸುರೇಶ ಮ್ಯಾಗೇರಿ, ಬಸಪ್ಪ ಕೊಳಗನ್ನವರ, ದ್ಯಾಮನ್ನ ಆಶೇದಾರ, ಅಶೋಕ ಸಾಗರ, ಸರೋಜಾ ಸಾಗರ, ಬಾಲಪ್ಪ ಮಾದರ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರಿದರು.
ಈ ವೇಳೆ ಮುಖಂಡರಾದ ಸಂಗಯ್ಯ ಸರಗಣಾಚಾರಿ, ಹೂವಪ್ಪ ರಾಠೊಡ, ಮಲ್ಲಿಕಾರ್ಜುನ ಅಂಗಡಿ, ಯಮುನಾ ಯಂಕಂಚಿ, ಹಣಮಂತಗೌಡ ಗೌಡರ, ಫಕೀರಪ್ಪ ಈರಗೋಳ, ಮಲ್ಲು ಕೆಂಪಾರ್, ಡಾ| ಅರವಿಂದಪ್ಪ ಕೊವಳ್ಳಿ ಸೇರಿದಂತೆ ಇತರರಿದ್ದರು.