Advertisement

ಮೈತ್ರಿ ಸರ್ಕಾರದ ಪತನ ಖಚಿತ: ಸಿ.ಟಿ.ರವಿ

10:59 PM Jul 16, 2019 | Team Udayavani |

ಯಲಹಂಕ: ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಪ್ರಕರಣ ಕುರಿತು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ವೇಳೆ ವಾದ, ಪ್ರತಿವಾದ ಏನೇ ಇರಲಿ, ಯಾವುದೇ ತೀರ್ಪು ನೀಡಲಿ ಸರ್ಕಾರ ಪತನವಾಗುವುದು ಖಚಿತ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

Advertisement

ಇಲ್ಲಿಗೆ ಸಮೀಪದ ರಮಡಾ ರೆಸಾರ್ಟ್‌ನಲ್ಲಿ ಬಿಜೆಪಿ ಶಾಸಕರು ವಾಸ್ತವ್ಯ ಹೂಡಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಪ್ರತಿವಾದಿಗಳು ಸರ್ಕಾರವನ್ನು ಕಾಪಾಡುವುದಿಲ್ಲ. ಜನರ ವಿಶ್ವಾಸ ಕಳೆದುಕೊಂಡಿರುವ ಈ ಸರ್ಕಾರ ಗುರುವಾರ ಸಂಜೆ ವೇಳೆಗೆ ಇತಿಹಾಸ ಸೇರಲಿದೆ. ಕಾಂಗ್ರೆಸ್‌ ಪ್ರತಿಪಕ್ಷದಲ್ಲಿ ಕೂರಲು ಈಗಾಗಲೇ ಮಾನಸಿಕವಾಗಿ ಸಜ್ಜಾಗುತ್ತಿದೆ. ಇದೊಂದು ರೀತಿಯಲ್ಲಿ ಊರು ಕೊಳ್ಳೆ ಹೊಡೆದ ಮೇಲೆ, ದಿಡ್ಡಿ ಬಾಗಿಲು ಹಾಕಿಕೊಂಡಂತೆ ಎಂದು ತಿಳಿಸಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಮಾತನಾಡಿ, 16 ಮಂದಿ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಶಾಸಕರು ರಾಜೀನಾಮೆ ಸಲ್ಲಿಸಿದಾಗ ಸ್ವೀಕರ್‌ ಹೇಗೆ ಅಂಗೀಕರಿಸಬೇಕು ಹಾಗೂ ಅದನ್ನು ಹೇಗೆ ನಿರ್ಧರಿಸಬೇಕು ಎನ್ನುವುದರ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಮೂರು ಗಂಟೆ ನಡೆದ ವಾದ- ಪ್ರತಿವಾದ ಗಮನಿಸಿದ್ದೇವೆ. ಐತಿಹಾಸಿಕ ತೀರ್ಪು ಪ್ರಕಟವಾಗುವ ನಿರೀಕ್ಷೆ ಇದೆ. ಇದು ದೇಶದ ಎಲ್ಲಾ ವಿಧಾನಸಭೆಗಳಿಗೂ ಮಾದರಿಯಾಗುತ್ತದೆ ಎಂದು ಹೇಳಿದರು.

ಶಾಸಕ ಪಿ.ರಾಜೀವ್‌ ಮಾತನಾಡಿ, ಇಡೀ ರಾಜ್ಯದ ಜನತೆ ಸುಪ್ರೀಂಕೋರ್ಟ್‌ ನಡೆಸುತ್ತಿರುವ ವಿಚಾರಣೆಯತ್ತ ಗಮನ ಹರಿಸಿದೆ. ಶಾಸಕರ ಮೂಲಭೂತ ಹಕ್ಕನ್ನು ಪ್ರತಿಬಂಧಿಸುವ ಹಕ್ಕು ಯಾರಿಗೂ ಇಲ್ಲ. ಶಾಸಕರ ರಾಜೀನಾಮೆ ಹಿಂದೆ ಸ್ವ ಇಚ್ಛೆ, ನೈಜತೆ ಇದೆಯೋ?, ಇಲ್ಲವೋ? ಎಂಬುದನ್ನು ಸ್ವೀಕರ್‌ ಪರಿಶೀಲಿಸುವ ಅಧಿಕಾರ ಹೊಂದಿದ್ದಾರೆ. ಬೇರೆ ಆಯಾಮದಲ್ಲಿ ಸ್ಪೀಕರ್‌ ನಿರ್ಧಾರ ಕೈಗೊಳ್ಳಲು ಬರುವುದಿಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next