Advertisement

ನೆಲಕಚ್ಚಿದ ಬೆಲೆ ಖುಷಿಯಲ್ಲಿ ಗ್ರಾಹಕರು ಸಂಕಷ್ಟದಲ್ಲಿ ರೈತರು

01:38 PM Jan 08, 2018 | |

ಸಿಂದಗಿ: ದೇಶದ ಬೆನ್ನೆಲುಬು ರೈತ, ಅನ್ನದಾತ ರೈತ, ರೈತ ದೇವರು, ಜೈ ಜವಾನ್‌ ಜೈ ಕಿಸಾನ್‌ ಎಂದೆಲ್ಲ ಹೇಳುತ್ತೇವೆ. ಒಂದು ಸಲ ರೈತನ ಜೀವನದ ಕಡೆಗೆ ತಿರುಗಿ ನೋಡಿದರೆ ಎಂದೂ ರೈತನಾಗಬಾರದು ಎಂದಿನಿಸುವಷ್ಟು ಕಷ್ಟಕರ ಜೀವನ. ರೈತ ಅಭಿವೃದ್ಧಿಯಾದರೇ ದೇಶದ ಅಭಿವೃದ್ಧಿ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು ಅರಿಯಬೇಕು.

Advertisement

ರೈತ ಏನೇ ಬೆಳೆದರು ಮಾರುಕಟ್ಟೆಯಲ್ಲಿ ಬೆಲೆ ಸಿಗುವುದಿಲ್ಲ ಎಂಬುದು ಸಾರ್ವಕಾಲಿಕ ಸತ್ಯ. ಮಾರಾಟ, ಮರಣ ಯಾರಿಗೂ ತಿಳಿಯುವುದಿಲ್ಲ ಎಂದು ಸಮಾಧಾನ ಮಾಡಿಕೊಂಡು ರೈತ ಹೊರಟಿದ್ದಾನೆ. ಸಾಲ ಸೊಲ ಮಾಡಿ ಕೃಷಿ ಜೀವನ ನಡೆಸುತ್ತಿದ್ದಾನೆ. ಹೆಂಡತಿ ಮಕ್ಕಳ ಭವಿಷ್ಯ ಲೆಕ್ಕಿಸದೇ ಅವರನ್ನು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾನೆ.

ಮಳೆ ನಂಬಿ ಮತ್ತು ಕಾಲುವೆ ನೀರನ್ನು ನಂಬಿ ಕೃಷಿ ಜೀವನ ನಡೆಸುತ್ತಿರುವ ರೈತ ತೊಗರಿ ಬೆಳೆದರೆ ಅದಕ್ಕೆ ಮಾರುಕಟ್ಟೆಯಲ್ಲಿ ಬೆಲೆಯಿಲ್ಲ, ಕಬ್ಬು ಬೆಳೆದರೆ ಕಬ್ಬಿನಲ್ಲಿ ಸಕ್ಕರೆ ಅಂಶ ಕಡಿಮೆಯಿದೆ ಎಂದು ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡುತ್ತಿಲ್ಲ. ಇವೆರಡು ಬೇಡ ಎಂದು ತೋಟಗಾರಿಕೆ ಬೆಳೆಯಿಂದ ಆದಾಯ ಬರುತ್ತದೆ ಎಂದು ನಿಂಬೆ ಮಾಡಿದರೆ ಕಳೆದ 2-3 ವರ್ಷಗಳಿಂದ ನಿಂಬೆಗೆ ಸೂಕ್ತ ಧಾರಣಿಯಿಲ್ಲ. ದಾಳಿಂಬೆ ಹಚ್ಚಿದರೆ ಕಾಯಿ ಕೊರೆಯುವ ರೋಗದ ಭಯ, ಹೀಗೆ ರೈತ ಭಯದಿಂದ ಕೃಷಿ ಜೀವನ ನಡೆಸುತ್ತಿದ್ದಾನೆ.

ದೀರ್ಘಾವಧಿ ಬೆಳೆ ನಿಂಬೆ, ದಾಳಿಂಬೆ ಬೆಳೆದರೂ 2-3 ವರ್ಷಗಳಿಂದ ಬೆಲೆ ಇಲ್ಲ. ಆರ್ಥಿಕತೆ ಹೆಚ್ಚಿಸಿಕೊಳ್ಳಲು ಅಲ್ಪಾವಧಿ ತೋಟಗಾರಿಕೆ ಬೆಳೆ ಕಾಯಿಪಲ್ಲೆ ಮಾಡಿದರೂ ರೈತನ ಕೈ ತುಂಬುತ್ತಿಲ್ಲ. ಕನಿಷ್ಠ 5-10 ರೂ.ಗೆ ಮಾರಾಟವಾಗಬೇಕಾದ ಮೆಂತೆ ಪಲ್ಲೆ, ಕೊತ್ತಂಬರಿ, ಕೆರಬೇವು, ರಾಜಗೀರಿ ಪಲ್ಲೆ, ಹುಣಸಿ ಪಲ್ಲೆ, ಮೂಲಂಗಿ, ಸೊಬ್ಬಸಿಗೆ, ತಪ್ಪಲ ಉಳ್ಳಾಗಡ್ಡಿ ಮುಂತಾದ ಕಾಯಿಪಲ್ಲೆಗಳು 5 ರೂ.ಗೆ 3 ಸುಡು, 10 ರೂ.ಗೆ 8 ಸೂಡು, 10 ರೂ.ಗೆ ದೀಡ ಕೆಜಿ ಟೊಮೇಟೋ ಮಾರಾಟವಾದರೆ ನಮ್ಮ ಗತಿಯೇನು ಎಂಬುವುದು ಮುಗ್ದ ರೈತರ ಪ್ರಶ್ನೆಯಾಗಿದೆ. 

20-30 ರೂ. ಕೊಟ್ಟ ಗುಟ್ಕಾ, ಮಾವಾ ತಿಂತಾರ 20 ರೂ. ಕೊಟ್ಟ ದಾಳಿಂಬರ ತೊಳಂಗಿಲ್ಲ, ಅರ್ಧ ಕೆಜಿಯಷ್ಟಿರುವ ದಾಳಿಂಬರ 20 ರೂ. ತೊಗೋರಿ ಎಂದ್ರ 20 ರೂ.ಗೆ 3 ಕೊಡ್ತಿಯೇನ, 4 ಕೋಡ್ತಿಯೇನ್‌ ಅಂತಾರ. 2 ಎಕರೆ ದಾಳಿಂಬರ ಮಾಡಿನಿ ಅದಕ್ಕ ಧಾರಣಿನೆ ಇಲ್ಲ. ಭಾಗಪ್ಪ ಪೂಜಾರಿ, ದಾಳಿಂಬೆ ಬೆಳೆಗಾರ, ಕನ್ನೋಳ್ಳಿ

Advertisement

ನಮಗ ಹೊಲಾಯಿಲ್ಲ. ರಟ್ಟಿಮ್ಯಾಲೆ ನಮ್ಮ ಜೀವನ. ರೈತರಿಂದ ಕೊಂಡು ಕೊಂಡ ಕಾಯಿಪಲ್ಲೆ ಸಂಜಿತಕಾ ಕುಂತ ಮಾರಿದ್ರೂ 50 ರೂ. ಉಳಿಯಲ್ಲ. ಮಾರುಕಟ್ಟೆಯಲ್ಲಿ ಕಾಯಿಪಲ್ಲೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಕಾಯಿಪಲ್ಲೆ ಮಾರಾಕ ಕುತ್ತಿನಿ. ಬರತಾರ ಒಂದ ರೂ., ಎರಡು ರೂ.ಗೆ ಒಂದ ಸೂಡ ಕೆಳತಾರ. 
ಸಾಯಿರಾಬಾನು ಬಾಗವಾನ, ಕಾಯಿಪಲ್ಲೆ ಮಾರಾಟಗಾರ್ತಿ

ಒಂದ ಎಕರೆ ಕೊತಂಬರಿ ಮಾಡಿನಿ. 10 ರೂ.ಗೆ ಒಂದ ಸೂಡ ಮಾರೋದು ಇವತ್ತ 2 ರೂ.ಗೆ ಒಂದ ಸೂಡ ಮಾರಾಕತ್ತದ. ತಂದ ಕೂಲಿಯಾಗುವುದಿಲ್ಲ. ಬರುವಾಗ ಟಂಟಂಗೆ ಮತ್ತು ಇಲ್ಲಿ ಜಕಾತಿಗೆ 10 ರೂ. ಕೊಡಬೇಕು. ಏನು ಉಳಿಯುವುದಿಲ್ಲ. ಕಾಯಿಪಲ್ಲೆ ಧಾರಣಿ ಇಳಿದಾಗ ನಮಗೂ ಏನಾದರು ಸರಕಾರ ಪರಿಹಾರ ನೀಡಬೇಕು.
 ಯಮನಪ್ಪ ಕುಂಬಾರ, ಕಾಯಿಪಲ್ಲೆ ಬೆಳೆದ ರೈತ, ಚಿಕ್ಕಸಿಂದಗಿ

ರೈತರು ತೋಟಗಾರಿಕೆ ಬೆಳೆ ಬೆಳೆದು ತಮ್ಮ ಆರ್ಥಿಕ ಜೀವನ ಸುಧಾರಿಸಿಕೊಳ್ಳಬೇಕು. ಬಹು ವಾರ್ಷಿಕ ಬೆಳೆ ಬೆಳೆಯುವ ಜೊತೆಗೆ ಅಲ್ಪಾವಧಿ ಬೆಳೆ ಬೆಳೆಯಬೇಕು. ಕೃಷಿಯಲ್ಲಿ ಹನಿ ನಿರಾವರಿ ಬಳಸಿಕೊಳ್ಳುವ ಮೂಲಕ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಪಟ್ಟಣದಲ್ಲಿನ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸಬೇಕು.
 ಬಿ.ಆರ್‌. ಲಕ್ಕೊಂಡ, ಸಹಾಯಕ ತೋಟಗಾರಿಕೆ ನಿದೇರ್ಶಕರು, ಸಿಂದಗಿ

ರಮೇಶ ಪೂಜಾರ

Advertisement

Udayavani is now on Telegram. Click here to join our channel and stay updated with the latest news.

Next