Advertisement

ಬಿದ್ದಿದೆ ಹಣದ ಗಂಟು, ಸಮಸ್ಯೆಗಳಿನ್ನೂ ಕಗ್ಗಂಟು

11:22 AM Apr 16, 2019 | Team Udayavani |
ಧಾರವಾಡ: ಈ ಕ್ಷೇತ್ರದಲ್ಲಿ ಹಳ್ಳಿಗರು ಉಂಟು, ನಗರವಾಸಿಗಳು ಉಂಟು, ಹುಬ್ಬಳ್ಳಿಗರು ಉಂಟು, ಧಾರವಾಡಿಗರು ಉಂಟು. ಈ ಕ್ಷೇತ್ರಕ್ಕೆ ಎರಡು ನಗರಗಳ ನಂಟು, ರಾಜ್ಯ-ಕೇಂದ್ರದಿಂದ ಕ್ಷೇತ್ರಕ್ಕೆ ಬಂದು ಬಿದ್ದಿದೆ ಹಣದ ಗಂಟು, ಆದರೆ ಸಮಸ್ಯೆಗಳು ನಿರ್ವಹಿಸಲಾಗದೆ ಕಗ್ಗಂಟು, ಹುಬ್ಬಳ್ಳಿ-ಧಾರವಾಡ ಎರಡೂ ನಗರಗಳು ಸಮ್ಮಿಲನವಾಗಿರುವ ಹು-ಧಾ ಪ್ರಶ್ಚಿಮ ಕ್ಷೇತ್ರದ ಸದ್ಯದ ಸ್ಥಿತಿ ಹೀಗುಂಟು! ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ ಹು-ಧಾ ಪಶ್ಚಿಮ ಕ್ಷೇತ್ರ. 2008ರಿಂದ ಸತತವಾಗಿ ಬೆಲ್ಲದ ಕುಟುಂಬವೇ ಕ್ಷೇತ್ರವನ್ನು ಆಳುತ್ತಿದ್ದು, ಅರವಿಂದ ಬೆಲ್ಲದ ಅವರು ಸದ್ಯಕ್ಕೆ ಶಾಸಕರಾಗಿದ್ದಾರೆ.
ಕೇವಲ ಆರು ಹಳ್ಳಿಗಳನ್ನು ಬಿಟ್ಟರೆ ಇನ್ನುಳಿದಂತೆ ಕ್ಷೇತ್ರದ ಎಲ್ಲ ಭಾಗವೂ ನಗರ ವ್ಯಾಪ್ತಿಯಲ್ಲಿಯೇ ಇದ್ದು, ಮೂಲಸೌಕರ್ಯಗಳದ್ದೇ ಇಲ್ಲಿ ತೊಂದರೆ.
ಸ್ಮಾರ್ಟ್‌ಸಿಟಿ ಯೋಜನೆ ವ್ಯಾಪ್ತಿಯಲ್ಲಿ ಸಿಕ್ಕಾಪಟ್ಟೆ ಸ್ಮಾರ್ಟ್‌ ಆಗುತ್ತದೆ ಎನ್ನುವ ಪರಿಕಲ್ಪನೆಯಲ್ಲಿದ್ದ ಈ ಕ್ಷೇತ್ರದ ಜನರಿಗೆ
ಗಬ್ಬೆದ್ದು ನಾರುವ ಗಟಾರು ವಾಸನೆಯಿಂದ ಇನ್ನೂ ಮುಕ್ತಿ ಸಿಕ್ಕಿಲ್ಲ. ಹೀಗಾಗಿಯೇ ಈ ಕ್ಷೇತ್ರದಲ್ಲಿನ ಎಷ್ಟೋ ಜನರು ತಮ್ಮ ಮನೆಗಳನ್ನು ಮುಂದುವರಿದ ನಗರಗಳಿಗೆ ಶಿಫ್ಟ್‌ ಕೂಡ ಮಾಡಿದ್ದು ಉಂಟು.
ಕ್ಷೇತ್ರದಲ್ಲಿ ಸದ್ಯದ ಮೂಡ್‌: ಬಿಜೆಪಿ ಶಾಸಕರೇ ಅಧಿಕಾರದಲ್ಲಿದ್ದು, ಕ್ಷೇತ್ರದ ತುಂಬಾ ಮೋದಿ ಹವಾ ಇರುವುದು
ಸುಳ್ಳಲ್ಲ. ನಗರ ಪ್ರದೇಶವಾಗಿದ್ದರಿಂದ ಸಹಜವಾಗಿಯೇ ಇಲ್ಲಿನ ಜನರು ಬಿಜೆಪಿ ಮತ್ತು ಮೋದಿ ಮತ್ತೂಮ್ಮೆ ಎನ್ನುತ್ತಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ 40 ಸಾವಿರ ಮತಗಳ ಅಂತರದಿಂದ ಇಲ್ಲಿ ಬಿಜೆಪಿ ಗೆದ್ದಿತ್ತು. ಬಿಜೆಪಿ 96,462 ಮತ ಗಳಿಸಿದ್ದರೆ, ಕಾಂಗ್ರೆಸ್‌ 40,487 ಮತ ಪಡೆದಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದರಿಂದ ಇಷ್ಟೊಂದು ಮತಗಳ ಮುನ್ನಡೆ ಬಿಜೆಪಿಗೆ ಸಿಕ್ಕಿತ್ತು ಎನ್ನಲಾಗುತ್ತಿದೆ.
ಆದರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ತನ್ನದೇ ಅಸ್ತ್ರಗಳನ್ನು ಬಳಸಿಕೊಂಡು ಮತ ಕೇಳುತ್ತಿದೆ. ರಾಜ್ಯ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಅಭಿವೃದ್ಧಿ ಕೆಲಸಗಳಿಗೆ ಹಣ ನೀಡಿದ್ದು ಸೇರಿದಂತೆ ಪ್ರಬಲ ಲಿಂಗಾಯತ ಕೋಮಿನ ವಿನಯ್‌ ಕುಲಕರ್ಣಿ ಅವರಿಗೆ ಇದೊಮ್ಮೆ ಮತ ನೀಡಿ ಎನ್ನುವ ಸಂದೇಶ ಹೊತ್ತು ಇಲ್ಲಿನ ಕೈ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಕೈ-ಕಮಲ ಇಬ್ಬರದ್ದು ಹವಾ ಇದೆ. ಇನ್ನು ಸ್ಥಳೀಯವಾಗಿ ವಿನಯ್‌ ಅವರಿಗೆ ಧಾರವಾಡದಲ್ಲಿನ ವಾರ್ಡ್‌ಗಳ ಮೇಲೆ ಸಾಕಷ್ಟು ಹಿಡಿತವಿದೆ. ಹುಬ್ಬಳ್ಳಿ ವಾರ್ಡ್‌ಗಳಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಿದ್ದು ಅಲ್ಲಿಯೂ ಹೆಚ್ಚಿನ ಮತ ಗಳಿಸುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಇದೆ. ಆದರೆ ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ಈ ಕ್ಷೇತ್ರದ ಜನರಿಗೆ ಒಂದಿಷ್ಟು ಅಭಿಮಾನ ಇರುವುದು ಸತ್ಯ.
 ಬಿಜೆಪಿಯಿಂದ ಮನೆ ಮನ್ವಂತರ: ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರ ಇಚ್ಛಾಶಕ್ತಿಯಿಂದಾಗಿ ಇಡೀ ರಾಜ್ಯದಲ್ಲಿಯೇ
ಆಗದಂತಹ ಅದ್ಭುತ ಕೆಲಸವೊಂದು ಈ ಕ್ಷೇತ್ರದಲ್ಲಿ ಆಗಿದೆ. ಕೊಳಚೆ ಪ್ರದೇಶಗಳಲ್ಲಿದ್ದ ಬಡ ಜನರಿಗೆ ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಿಕೊಟ್ಟು ಅವರಿಗೆ ಬದುಕುವುದಕ್ಕೆ ನೆರಳು ನೀಡಿದ ಕೊಡುಗೆ ಬಿಜೆಪಿ ಮತ್ತು ಅರವಿಂದ ಬೆಲ್ಲದ ಅವರಿಗಿದೆ. ಇಲ್ಲಿನ ಸೋಮೇಶ್ವರದಲ್ಲಿ 1500ಕ್ಕೂ ಅಧಿಕ ಮನೆಗಳನ್ನು ಕಟ್ಟಿ ಈಗಾಗಲೇ ಅವುಗಳನ್ನು ಬಡವರಿಗೆ ಹಂಚಿಕೆ ಮಾಡಿ ಬೆಲ್ಲದ ಸೈ ಎನಿಸಿಕೊಂಡಿದ್ದಾರೆ. ಆದರೆ ಈ ಕೆಲಸ ಹುಬ್ಬಳ್ಳಿಯಲ್ಲಿ ಆಗಿಲ್ಲ ಯಾಕೆ? ಎನ್ನುವ ಮಾತುಗಳು ಕ್ಷೇತ್ರದ ಜನರಿಂದ ಕೇಳಿ ಬರುತ್ತಿವೆ. ಕ್ಷೇತ್ರದಲ್ಲಿ 20 ಸಾವಿರದಷ್ಟು ಕೃಷಿಕರಿದ್ದಾರೆ. ರೈತರ ಮಗ ಎಂದು ಹೇಳಿಕೊಳ್ಳುತ್ತಿರುವ ಜೊತೆಗೆ ಅಲ್ಪಸಂಖ್ಯಾತರ ಬೆಂಬಲ ಪಡೆದಿರುವ ವಿನಯ್‌ ಮತ್ತು ಮೋದಿ ಅಲೆಯನ್ನೇ ನೆಚ್ಚಿಕೊಂಡಿರುವ ಜೋಶಿ ಅವರ ಮಧ್ಯೆ ಯಾರಿಗೆ ಹೆಚ್ಚು ಮತಗಳು ಬರುತ್ತವೆಯೋ ಕಾದು ನೋಡಬೇಕು.
ಮೂಲಸೌಕರ್ಯ ಕೊರತೆ; ಸ್ಮಾರ್ಟ್‌ಸಿಟಿ ಆಗಿಲ್ಲವೆಂಬ ವ್ಯಥೆ ಉತ್ತಮ ರಸ್ತೆ, ನೀರು, ಡಾಂಬರೀಕರಣ, ಒಳಚರಂಡಿ, ಕೊಳಚೆ ಪ್ರದೇಶಗಳ ಅಭಿವೃದ್ಧಿಯೇ ಸಮಸ್ಯೆಗಳಾಗಿ ಕುಳಿತಿವೆ. ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವ ನಗರದ ಬಡಾವಣೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಕೇಂದ್ರದಿಂದ ಸ್ಮಾರ್ಟ್‌ಸಿಟಿ ಯೋಜನೆಯಡಿ ಹುಬ್ಬಳ್ಳಿಯ ನಾಲ್ಕು ಚದುರ ಕಿಮೀನಷ್ಟು ಪ್ರದೇಶ ಸ್ಮಾರ್ಟ್‌ ಆಗಿ ಹೊರಹೊಮ್ಮಬೇಕಿತ್ತು. ಆದರೆ ಸ್ಮಾರ್ಟ್‌ಸಿಟಿ ಆಗದೇ ಇರುವುದು ಕ್ಷೇತ್ರದ ಮತದಾರರಿಗೆ ಕೊಂಚ ಬೇಜಾರಿದೆ. ಏರ್‌ ಪೋರ್ಟ್‌ ನಿಂದ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ವರೆಗೂ ಸಿಗ್ನಲ್‌ ಫ್ರೀ ರಸ್ತೆ ಇನ್ನೂ ಆಗಿಲ್ಲ ಎನ್ನುವ ನೋವು ಹುಬ್ಬಳ್ಳಿಯ ಮತದಾರರಲ್ಲಿದೆ.
ನಮ್ಮ ಸಂಸದರು ಇಲ್ಲಿಗೆ ಒಮ್ಮೆಯೂ ಭೇಟಿ ಕೊಟ್ಟಿಲ್ಲ. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಅದನ್ನ ಮಾಡ್ತೇನಿ ಇದನ್ನ
ಮಾಡ್ತೇನಿ ಅಂತಿದ್ರು, ಏನೂ ಮಾಡಿಲ್ಲ. ಮೋದಿ ಅವರ ಮುಖ ನೋಡ್ತಿದ್ದೀವಿ ಅಷ್ಟೇ.
  ಪವನ ಕುಲಕರ್ಣಿ, ಶಿವಾನಂದ ನಗರ, ಧಾರವಾಡ
ವಿನಯ್‌ ಕುಲಕರ್ಣಿ ಅವರು ಮಣ್ಣಿನ ಮಗ. ಅವರು ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ಇಲ್ಲಿಗೆ ಸಾಕಷ್ಟು ಹಣ ತಂದು ಕೆಲಸ ಮಾಡಿದ್ದಾರೆ. ಹಳ್ಳಿಗಳು ಮಾತ್ರವಲ್ಲ, ನಗರಕ್ಕೂ ಅವರು ಕೊಡುಗೆ ನೀಡಿದ್ದಾರೆ.
  ಶಿವನಗೌಡ ಅರಳಿಕಟ್ಟಿ, ವಕೀಲ, ನವನಗರ
Advertisement

Udayavani is now on Telegram. Click here to join our channel and stay updated with the latest news.

Next