ಬೀಳಗಿ: ಪಟ್ಟಣದ ಶ್ರೀ ಸಿದ್ಧೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಹಾಗೂ ಪ್ರತಿಭಾ ಪುರಸ್ಕಾರ, ಪಠ್ಯ ಪುಸ್ತಕ ವಿತರಣೆ ಕಾರ್ಯಕ್ರಮ ಜರುಗಿತು.
ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿ.ಜಿ. ರೇವಡಿಗಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ದೊಡ್ಡ ಕನಸು ಇಟ್ಟುಕೊಂಡು ಓದಬೇಕು. ಅವಶ್ಯಕತೆ ಅರಿತುಕೊಂಡು ಮುನ್ನುಗ್ಗಬೇಕು ಎಂದರು.
ಕೋಶಾಧ್ಯಕ್ಷ ವೀರೇಂದ್ರ ಶೀಲವಂತ ಮಾತನಾಡಿ, ಮಾನವ ನಿಸರ್ಗದ ಜೊತೆಗೆ ಒಳ್ಳೆಯ ಒಡನಾಟ ಇಟ್ಟುಕೊಳ್ಳಬೇಕು. ಪರಿಸರ ಪ್ರೀತಿಸಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಎಂದು ಹೇಳಿ, ಶೈಕ್ಷಣಿಕ ಬದುಕು ಸುಖಮಯವಾಗಲೆಂದು ಶುಭ ಹಾರೈಸಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಎಂ. ಸಾವಕಾರ ಮಾತನಾಡಿ, ಶಿಕ್ಷಣ ಇಂದು ಪ್ರತಿಯೊಬ್ಬರಿಗೂ ಸಂಜೀವಿನಿಯಾಗಿದೆ. ವಿದ್ಯಾರ್ಥಿ ಗಳು ಉನ್ನತ ಶಿಕ್ಷಣ ಪಡೆದುಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು. ಶಿಕ್ಷಕ ವೃತ್ತಿ ಶ್ರೇಷ್ಠವಾಗಿದ್ದು, ವಿದ್ಯಾರ್ಥಿಗಳಿಗೆ ವಿದ್ಯೆಯ ಜತೆಗೆ ಮಾನವೀಯ ಮೌಲ್ಯ ಕಲಿಸಿಕೊಡಬೇಕು ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ಸೃಷ್ಟಿ ಮೂಲಿಮನಿ, ದ್ವಿತೀಯ ಸ್ಥಾನ ಪಡೆದ ಸಾನಿಯಾ ಗುಡಾಕ, ತೃತೀಯ ಸ್ಥಾನ ಪಡೆದ ರಕ್ಷಕ ಸಿಂಧೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಯಿತು.
ಸಿದ್ಧೇಶ್ವರ ರೈತ ಉತ್ಪಾದಕರ ಸಹಕಾರಿ ಸಂಘ ಆಶ್ರಯದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ವಿದ್ಯಾ ಸಂಸ್ಥೆ ಆವರಣದಲ್ಲಿ ಸಸಿ ನೆಡಲಾಯಿತು. ನಿರ್ದೇಶಕ ಸೋಮಶೇಖರ ಶಹಾಪೂರ, ಪ್ರಾಚಾರ್ಯರಾದ ಈ. ರವೀಂದ್ರ ನಾಯಕ, ಪ್ರಾಥಮಿಕ ವಿಭಾಗದಮುಖ್ಯಗುರು ಎ. ಬಿ. ಹಿರೇಮಠ, ಉಪಪ್ರಾಚಾರ್ಯ ವಿ. ಎಸ್. ತಳಕೇರಿ ಉಪಸ್ಥಿತರಿದ್ದರು.