ದೇವನಹಳ್ಳಿ: ಜಿಲ್ಲೆಯ ಪ್ರಮುಖ ತೋಟಗಾರಿಕೆ ಬೆಳೆಗಳಲ್ಲಿ ಆಲೂಗಡ್ಡೆಯೂ ಒಂದು. ವರ್ಷಕ್ಕೆ ಎರಡು ಬಾರಿ ರೈತರು ಆಲೂಗಡ್ಡೆ ಬೆಳೆದು ಉತ್ತಮ ಲಾಭ ಗಳಿಸುತ್ತಿದ್ದರು. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಆಲೂಗಡ್ಡೆ ಬೆಲೆ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿರುವುದು ಆಲೂಗಡ್ಡೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಜಿಲ್ಲೆಯಲ್ಲಿ ಅಕ್ಟೋಬರ್ ಅಂತ್ಯ, ನವೆಂಬರ್ ತಿಂಗಳಿನಲ್ಲಿ ಬಿತ್ತನೆ ಮಾಡಿದ ಬೇಸಿಗೆ ಆಲೂಗಡ್ಡೆ ಬೆಳೆ ಈಗ ಕೊಯ್ಲು ಆರಂಭಗೊಂಡಿದೆ. ಬೆಳೆಗಾರರು ಆಳುಗಳಿಂದ ಬೆಳೆಯನ್ನು ಕೊಯ್ಲು ಮಾಡಿಸಿ ರಾಶಿ ಹಾಕಿ ಮಾರುಕಟ್ಟೆಗೆ ಸಾಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಆಲೂಗಡ್ಡೆ ಅವಕದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪರಿಣಾಮ ದಿನದಿಂದ ದಿನಕ್ಕೆ ಬೆಲೆಯೂ ಪಾತಾಳಕ್ಕೆ ಕುಸಿಯುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ.
ದಿನದಿಂದ ದಿನಕ್ಕೆ ಬೆಲೆ ಕುಸಿತ: ಕಳೆದ ಮೂರು ವರ್ಷಗಳಿಂದ ಇದೇ ಸೀಸನ್‌ನಲ್ಲಿ ಬೆಳೆಯುತ್ತಿರುವ ರೈತರಿಗೆ ಆಲೂಗಡ್ಡೆ ಬೆಲೆಯಲ್ಲಿ ಕೈ ಕೊಡುತ್ತಿದೆ. ಒಂದು ತಿಂಗಳ ಹಿಂದೆಯಷ್ಟೇ ಸ್ಥಳೀಯ ಮಾರುಕಟ್ಟೆಯಲ್ಲಿ 50 ಕೆ.ಜಿ. ಚೀಲದ ಗುಣಮಟ್ಟದ ಆಲೂಗಡ್ಡೆ ಮೂಟೆ 1000 ರಿಂದ 1400 ರೂ. ಆಸುಪಾಸಿನಲ್ಲಿ ಮಾರಾಟವಾಗುತ್ತಿತ್ತು. ಹಿಂದಿನ ವಾರದಲ್ಲಿ ಒಂದು ಚೀಲದ ಆಲೂಗಡ್ಡೆ ಮೂಟೆ 700 ರಿಂದ 800 ರೂ.ವರೆಗೆ ಮಾರಾಟವಾಗುತ್ತಿತ್ತು. ಆದರೆ, ಮಾರುಕಟ್ಟೆಯಲ್ಲಿ 580 ರಿಂದ 650 ರೂ. ವರೆಗೆ ಮಾರಾಟವಾಗಿದೆ. ಆಲೂಗಡ್ಡೆ ಬೆಲೆ ದಿನದಿಂದ ದಿನಕ್ಕೆ ಬೆಲೆ ಕುಸಿಯುತ್ತಿರುವುದರಿಂದ ಬೆಳೆಗಾರರು ಕಣ್ಣೀರಿಡುವ ಪರಿಸ್ಥಿತಿ ನಿರ್ಮಿಸಿದೆ.
ಅವಕದ ಪ್ರಮಾಣ ಹೆಚ್ಚಳ: ಜಿಲ್ಲೆಯ ರೈತರು ಪ್ರತಿ ವರ್ಷ ಸಾವಿರಾರು ಹೆಕ್ಟೇರ್‌ನಲ್ಲಿ ಆಲೂಗಡ್ಡೆ ಬೆಳೆ ಬೆಳೆಯುತ್ತಿದ್ದಾರೆ. ಬೆಳೆ ಮಾರಾಟಕ್ಕೆ ಮಾರುಕಟ್ಟೆ ಹಾಗೂ ಬೆಂಗಳೂರಿನ ನಗರದ ಮಾರುಕಟ್ಟೆಯನ್ನು ಅವಲಂಭಿಸಿದ್ದಾರೆ. ಈ ಎರಡು ಮಾರುಕಟ್ಟೆಗೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಿಂದ ರೈತರು ಆಲೂಗಡ್ಡೆ ತಂದು ಮಾರಾಟ ಮಾಡುತ್ತಾರೆ. ವಾರದಿಂದೀಚೆಗೆ ಮಾರುಕಟ್ಟೆಗೆ ಆಲೂಗಡ್ಡೆ ಅವಕದ ಪ್ರಮಾಣ ಹೆಚ್ಚಳ ಕಂಡಿರುವುದರಿಂದ ಬೆಲೆಯಲ್ಲಿ ಭಾರೀ ಕುಸಿತಕ್ಕೆ ಕಾರಣವಾಗಿದೆ ಎನ್ನುತ್ತಾರೆ ಆಲೂಗಡ್ಡೆ ವ್ಯಾಪಾರಿಗಳು.
ಆಲೂಗಡ್ಡೆ ಬೆಳೆಗೆ ರೈತರು ದುಬಾರಿ ಖರ್ಚು ಮಾಡಿದ್ದಾರೆ. ಬಹುತೇಕ ಕಡೆ ಆಲೂಗಡ್ಡೆ ಕೊಯ್ಲಿಗೆ ಶುರು ಮಾಡಿರುವ ರೈತರು ನೇರವಾಗಿ ಮಾರುಕಟ್ಟೆಗೆ ಸಾಗಿಸಿ ಮಾರಾಟಕ್ಕೆ ಮುಂದಾಗಿದ್ದಾರೆ. ಇದರಿಂದ ಏಕಾಏಕಿ ಮಾರುಕಟ್ಟೆಯಲ್ಲಿ ಆಲೂಗಡ್ಡೆ ಅವಕದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೇಡಿಕೆಯೂ ಕಡಿಮೆಯಾಗಿದೆ. ಇದರಿಂದ ಬೆಲೆಯಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.
ಬೆಂಗಳೂರಿನಲ್ಲಿ ಮಾರಿದ್ರೆ ದುಪ್ಪಟ್ಟು ಖರ್ಚು : ಸ್ಥಳೀಯ ಮಾರುಕಟ್ಟೆಯಲ್ಲಿ ಆಲೂಗಡ್ಡೆ ಬೆಲೆ ಕುಸಿದಿದೆ. ರೈತರೇ ಬೆಂಗಳೂರಿಗೆ ಆಲೂಗಡ್ಡೆ ಮಾರಲು ಹೊರಟರೆ, ದುಪ್ಪಟ್ಟು ಖರ್ಚು ಮಾಡಬೇಕು. ಬೆಂಗಳೂರಿನಲ್ಲಿ ಮೂರ್ನಾಲ್ಕು ದಿನ ತಂಗಬೇಕು. ಇತರೆ ಆಲೂಗಡ್ಡೆ ಬೆಳೆಗಾರರ ಜೊತೆ ಪೈಪೋಟಿ ನಡೆಸಬೇಕು. ವ್ಯಾಪಾರಸ್ಥರೊಂದಿಗೆ ಚೌಕಾಸಿ ಮಾಡಿ, ಮನವೊಲಿಸಬೇಕು. ವಸತಿ, ಊಟ ಅಲ್ಲದೇ ಇತರ ಖರ್ಚುಗಳನ್ನು ಸಹ ನಿಭಾಯಿಸಬೇಕು. ಅದಕ್ಕು ಮುನ್ನ ಜಮೀನಿನಲ್ಲಿ ಕಟಾವು ಮಾಡಿದ ಆಲೂಗಡ್ಡೆಯನ್ನು ಮೂಟೆಯಲ್ಲಿ ಹಾಕಲು ಕೂಲಿ ಕಾರ್ಮಿಕರಿಗೆ ದಿನಕ್ಕೆ 500 ರೂ. ನೀಡಬೇಕು. ಸಾಗಣೆಗಾಗಿ ವಾಹನದ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಆಲೂಗಡ್ಡೆ ಬೆಳೆಗಾರರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಎಲ್ಲಾ ರೈತರು ಆಲೂಗಡ್ಡೆ ಬೆಳೆಯುತ್ತಿರುವುದರಿಂದ ಉತ್ಪಾದನೆಯಲ್ಲಿ ಗಣನೀಯವಾಗಿ ಹೆಚ್ಚಾಗಿ, ಬೆಲೆ ಕಡಿಮೆಯಾಗಿದೆ. ಸಾಲ ಮಾಡಿ ಆಲೂಗಡ್ಡೆ ಬೆಳೆಯಲಾಗಿದೆ. ಉತ್ತಮ ಇಳುವರಿ ಮತ್ತು ಉತ್ತಮ ಬೆಲೆ ಬರುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಕಳೆದ ನವೆಂಬರ್ ತಿಂಗಳ ಅಂತ್ಯದಲ್ಲಿ ಆಲೂಗಡ್ಡೆ ಬೆಳೆ ಬಿತ್ತನೆ ಮಾಡಿದೆ. ಆ ಸಮಯದಲ್ಲಿ ಒಂದು ಮೂಟೆ ಬಿತ್ತನೆ ದರ 3600 ಇತ್ತು. ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿರುವುದರಿಂದ ಸಂಕಷ್ಟ ತಂದೊಡ್ಡಿದೆ.
– ಪುರುಷೋತ್ತಮ್, ಆಲೂಗಡ್ಡೆ ಬೆಳೆಗಾರ
-ಎಸ್.ಮಹೇಶ್, ದೇವನಹಳ್ಳಿ