Advertisement

ಫೆರಾರಿಗೂ ಮೀರಿದ ಫ‌ಕೀರ!

11:27 AM Oct 02, 2017 | |

ಗಾಂಧೀಜಿ ನಮ್ಮಗಳ ಕಣ್ಣಿಗೆ ಫ‌ಕೀರನಂತೆ ಕಂಡರೂ, ಅವರ ಹೆಸರಿನ ಬೆಲೆ ಫೆರಾರಿ ಕಾರಿಗಿಂತ ಅಸಂಖ್ಯ ಪಟ್ಟು ಏರುತ್ತಲೇ ಇದೆ. ಈ ಮಹಾತ್ಮನ ಹೆಸರಿನಲ್ಲಿಯೇ ಅಸಂಖ್ಯ ವಸ್ತುಗಳು ಬಿಕರಿಗೊಳ್ಳುತ್ತವೆ. ಅವರು ಬಳಸಿದ ಪರಿಕರಗಳು ಕೋಟಿ ಕೋಟಿ ರುಪಾಯಿಗಳಿಗೆ ಹರಾಜಾಗುತ್ತವೆ. “ದೇಶದ ಈ ನಂ.1 ನಂಬಲಾರ್ಹ ವ್ಯಕ್ತಿತ್ವ’ವೇ ಒಂದು ಗಾಂಧಿ ಬಜಾರು…

Advertisement

ಎಂ.ಕೆ. ಗಾಂಧಿ, ರೈತ, ಸಬರಮತಿ ಆಶ್ರಮ  -ಬೆಂಗಳೂರಿನ ಇಂಪೀರಿಯರ್‌ ಡೈರಿಯಲ್ಲಿ ಮಹಾತ್ಮ ಗಾಂಧೀಜಿ ಹೈನುಗಾರಿಕೆ ತರಬೇತಿ ಪಡೆಯಲು ಬಂದಾಗ ನಮೂದಿಸಿದ ವಿಳಾಸವಿದು. ಕೇವಲ ಇಂಪೀರಿಯರ್‌ ಡೈರಿ ಅಲ್ಲ, ನಂದಿಬೆಟ್ಟ, ಕುಮಾರಕೃಪಾ ಗೆಸ್ಟ್ ಹೌಸ್‌, ಇಂಡಿಯನ್‌ ಇನ್ಸ್‌ ಟಿಟ್ಯೂಟ್ ಆಫ್ ಸೈನ್ಸ್‌… ಅವರು ಇಲ್ಲಿ ಎಲ್ಲೆಲ್ಲಿ ತಂಗಿದ್ದರೋ ಅಲ್ಲೆಲ್ಲವೂ ತಮ್ಮ ವಿಳಾಸ ಬರೆಯುವಾಗ ರೈತ ಅಂತಲೂ, ತನ್ನ ವಾಸ್ತವ್ಯ ಸಬರಮತಿ ಆಶ್ರಮ ಅಂತಲೂ ನಮೂದಿಸಿದ್ದರು.

ಸಬರಮತಿ ನದಿ ತೀರದಲ್ಲಿರುವ ಆ ಆಶ್ರಮಕ್ಕೆ ಹೋಗಿ ನೋಡಿದರೆ, ಅಲ್ಲಿಯೂ ಗಾಂಧಿ ಮಾಡಿಟ್ಟ ಆಸ್ತಿಯಾಗಲೀ, ಐಶ್ವರ್ಯವಾಗಲೀ ಕಣ್ಣಿಗೆ ಬೀಳುವುದಿಲ್ಲ. ಸ್ಮಶಾನದ ಜಾಗದ ಮೇಲೆ ಎದ್ದುನಿಂತ ಆಶ್ರಮದಲ್ಲಿ ಸಾವಿರಾರು ಐತಿಹಾಸಿಕ ಪತ್ರಗಳು, ಆಳೆತ್ತರದ ಕಲಾಕೃತಿಗಳು, ಅಪರೂಪದ ಫೋಟೋಗಳು, ಹತ್ತಾರು ಚರಕಗಳು, ಮಸುಕು ಕನ್ನಡಕಗಳು, ಕಸ್ತೂರ ಬಾ ಬಳಸುತ್ತಿದ್ದ ಅಡುಗೆ ಪಾತ್ರೆಗಳೆಂಬ ಅತ್ಯಮೂಲ್ಯ ನೆನಪುಗಳ ಹೊರತಾಗಿ, ಗಾಂಧೀಜಿ ತಮಗಾಗಿ ಮಾಡಿಟ್ಟಿದ್ದು, ಕೂಡಿಟ್ಟ ಸಂಪತ್ತಿನ ಸಾಕ್ಷ್ಯಗಳು ಅಲ್ಲೇನೂ ಸಿಗುವುದಿಲ್ಲ.

ಅಲ್ಲಿಂದ 260 ಮೈಲು ದೂರದ ಪೋರಬಂದರ್‌ಗೆ ಹೋದರೆ, ಅವರು ಹುಟ್ಟಿದ ‘ಕೃತಿ ಮಂದಿರ’ ಅದೊಂದು ಕತ್ತಲು ಕವಿದ ಗವಿಮನೆ. ಆ ಖಾಲಿ ಗೋಡೆಗಳ ಮನೆಯಲ್ಲಿ, ಗಾಂಧಿಯಷ್ಟೇ ಎತ್ತರಕ್ಕೆ (5.3 ಅಡಿ) ನಿರ್ಮಿಸಿದ ಬಾಗಿಲುಗಳಡಿ ತಲೆಬಾಗುತ್ತಾ ನಡೆಯುವಾಗ, ಮೂಗಿಗೆ ಗಬ್ಬುವಾಸನೆಯೊಂದು ಅಡರುತ್ತದೆ. ಅದು ಪೋರಬಂದರ್‌ ತೀರದಲ್ಲಿ ಹರಡಿಟ್ಟ ಒಣಮೀನಿನ ವಾಸನೆ. ಸುರೇಶ್‌ ರೈನಾ, ಕಿರಣ್ ಬೇಡಿಯಂಥವರು ಈ ಬಗ್ಗೆ ವಿಸಿಟರ್‌ ಡೈರಿಯಲ್ಲಿ ಆಕ್ಷೇಪ ಬರೆದಿದ್ದರೂ, ಅದಕ್ಕೊಂದು ಶಾಶ್ವತ ಪರಿಹಾರ ಇಲ್ಲಿಯ ತನಕ ಸಿಕ್ಕಿಯೇ ಇಲ್ಲ.

ಭೂಮಿ ಮೇಲೆ ಸರಿಸುಮಾರು 78 ವರುಷ ಬದುಕಿದ ವ್ಯಕ್ತಿ, ಅದರಲ್ಲಿ ಸುಮಾರು 60-65 ವರುಷವನ್ನು ದೇಶಕ್ಕಾಗಿಯೇ ಕೊಟ್ಟ ಗಾಂಧೀಜಿ, ಅರೆಬೆತ್ತಲೆ ಫ‌ಕೀರನಂತೆ ಕಾಣಿಸುತ್ತಾರೆ. ಯೋಗ್ಯ ಮನೆಯಿಲ್ಲದೆ, ಆಶ್ರಮವಾಸಿಯಾಗಿ, ಬರಿಗಾಲಿನ ಪಥಿಕನಂತೆ, ಖಾಲಿ ಕೈಗಳ ಸಂತನಂತೆ ಆ ಮಹಾತ್ಮ ನೆನಪು ಬಿಟ್ಟುಹೋದರಲ್ಲ ಎಂಬ ತೀರ್ಮಾನಕ್ಕೆ ಬರುವ ಹೊತ್ತಿಗೆ, ಗಾಂಧಿಯೆಂಬ ಕೋಟ್ಯಾಧಿಪತಿಯೂ ಎದುರಿಗೆ ನಿಲ್ಲುತ್ತಾರೆ.

Advertisement

ಗಾಂಧಿ ಎಂಬ ಬ್ರ್ಯಾಂಡ್‌!
ಭಾರತದ ಅತಿನಂಬಲರ್ಹ ವ್ಯಕ್ತಿತ್ವ ಕುರಿತು ‘ದಿ ಬ್ರ್ಯಾಂಡ್‌ ಟ್ರಸ್ಟ್‌’ 2014ರಲ್ಲಿ ಒಂದು ವರದಿಯನ್ನು ಹೊರಹಾಕಿತ್ತು. ಜಾಹೀರಾತು ಪ್ರಚಾರ, ಉತ್ಪನ್ನಗಳ ಖರೀದಿ ಹಿನ್ನೆಲೆಯಲ್ಲಿ ಅಧ್ಯಯನಿಸಿ, ತಯಾರಿಸಿದ್ದ ವರದಿಯಲ್ಲಿ ಗಾಂಧೀಜಿ ನಂ.1 ಬ್ರಾಂಡ್‌ ಆಗಿದ್ದರು. 2ನೇ, 3ನೇ ಸ್ಥಾನ ಕ್ರಮವಾಗಿ ಅಮಿತಾಭ್‌ ಬಚ್ಚನ್‌ಗೆ, ಸಚಿನ್‌ ತೆಂಡೂಲ್ಕರ್‌ಗೆ ಹೋಗಿತ್ತು.

ಭೌತಿಕವಾಗಿ ಗಾಂಧೀಜಿ ಈ ನೆಲದಲ್ಲಿ ಇಲ್ಲವಾದರೂ, ಅವರ ಹೆಸರಿನಲ್ಲಿ, ಅವರು ಪ್ರತಿಪಾದಿಸಿದ ತತ್ವಗಳಡಿಯಲ್ಲಿ, ಅವರು ನಂಬಿದ್ದ ಉತ್ಪನ್ನಗಳ ಮೇಲೆ ನಮಗೊಂದು ವಿಶ್ವಾಸವಿದೆ. ‘ಗ್ರಾಹಕ ನಮ್ಮ ಸರಕಿನ ಬೆಲೆ ನೋಡಿ, ಬೇಕಾದರೆ ಹಿಂದಕ್ಕೆ ಹೋಗಲಿ, ಆದರೆ ನಮ್ಮ ವಸ್ತುವಿನ ಗುಣಮಟ್ಟ ನೋಡಿ ಹಿಂದಕ್ಕೆ ಹೋಗಬಾರದು’ ಎಂದು ಹೆಗ್ಗೊಡಿನ ‘ಚರಕ’ದ ಸದಸ್ಯೆಯೊಬ್ಬರು ಹೇಳಿದ ಮಾತೊಂದು ಇಲ್ಲಿ ಒಪ್ಪುವಂಥದ್ದು.

ಅವರ ರಕ್ತವನ್ನೂ ಬಿಡಲಿಲ್ಲ..!
ಅಮೆರಿಕದಲ್ಲಿ ಅಬ್ರಾಹಂ ಲಿಂಕನ್‌, ಮರ್ಲಿನ್‌ ಮನ್ರೊ,  ಇಂಗ್ಲೆಂಡಿನಲ್ಲಿ ರಾಣಿ ವಿಕ್ಟೋರಿಯಾ, ಚಾಪ್ಲಿನ್‌, ರಾಜಕುಮಾರಿ ಡಯಾನಾರ ವಸ್ತುಗಳನ್ನು ಹರಾಜಿಗೆ ಹಾಕಿ, ಬಿಲಿಯನ್‌ ಡಾಲರ್‌ ಗಟ್ಟಲೆ ಗಳಿಸುವುದನ್ನು ಕೇಳಿದ್ದೇವೆ. ನಾವು ಭಾರತದಲ್ಲಿ ಇಂಥದ್ದೊಂದು ಪರಂಪರೆಯನ್ನು ಕಂಡಿದ್ದೇ ಗಾಂಧೀಜಿಯ ಜನಪ್ರಿಯತೆ ಮೂಲಕ. ಅವರ ಚಿತ್ರವುಳ್ಳ ಅಂಚೆ ಚೀಟಿಗೆ 4 ಕೋಟಿ ರೂ. ಕೊಟ್ಟು ಹರಾಜಿನಲ್ಲಿ ಖರೀದಿಸಿದೆವು.

ಲಂಡನ್ನಿನಲ್ಲಿ ಅವರ ಪೆನ್ಸಿಲ್ ಸ್ಕೆಚ್‌ ಅನ್ನು 70 ಲಕ್ಷ ರೂ.ಗೆ ಗೆದ್ದೆವು. ಗಾಂಧೀಜಿ ಬಳಸಿದ್ದ ಕನ್ನಡಕ, ಚಪ್ಪಲಿ, ತಟ್ಟೆ, ಬೌಲ್, ಪಾಕೆಟ್ ವಾಚುಗಳನ್ನು ನ್ಯೂಯಾರ್ಕಿನಲ್ಲಿ 11 ಕೋಟಿ ರೂ.ಗೆ ಖರೀದಿಸಿದ್ದು, ಅದು ವಿಜಯ್ ಮಲ್ಯಗೆ ಜೀವಮಾನದ ಸಾಧನೆಯೇ ಆಗಿಹೋಗಿದ್ದೆಲ್ಲ ಹಳೇಕತೆ. 1948ರಲ್ಲಿ ಗಾಂಧೀಜಿ ಮಡಿದಾಗ, ದೆಹಲಿಯ ನೆಲದಲ್ಲಿ ಬಿದ್ದ ರಕ್ತ, ಆ ನೆತ್ತರು ಅಂಟಿದ ಹುಲ್ಲು, ಲಂಡನ್ನಿನ ಹರಾಜಿನಲ್ಲಿ 8 ಲಕ್ಷಕ್ಕೆ ಬಿಕರಿ ಆಯಿತು.

ಗೋಡ್ಸೆಯ ಗುಂಡೇಟಿಗೆ ಗಾಂಧೀಜಿ ಹತರಾಗಿ ನೆಲಕ್ಕೆ ಕುಸಿದಾಗ, ಕೆಲ ಹೊತ್ತಿನ ನಂತರ ಪಿ.ಪಿ. ನಂಬಿಯಾರ್‌ ಎನ್ನುವ ಪ್ರತ್ಯಕ್ಷದರ್ಶಿಯೊಬ್ಬರು, ಅಲ್ಲಿನ ರಕ್ತವನ್ನು, ಹುಲ್ಲನ್ನು ಕಲೆಹಾಕಿದ್ದರಂತೆ. ಅವರು ಗಾಂಧಿಯ ನೆನಪಿನಲ್ಲಿ ಬರೆದ ಪತ್ರವೂ ಲಕ್ಷಾಂತರ ರೂ.ಗೆ ಹರಾಜಾಯಿತು. ಗಾಂಧೀಜಿಯ ಮೌಲ್ಯ ಹೀಗೆಲ್ಲ ತೆರೆದುಕೊಂಡಿದ್ದು, ಅದೇ ಬ್ರಿಟಿಷರ ಲಂಡನ್ನಿನಲ್ಲಿಯೇ!

ಹುದಲಿ ಉಪ್ಪಿಕಾಯಿಯ ರುಚಿಯ ಹಿಂದೆ…
ಬೆಳಗಾವಿಯಿಂದ 30 ಕಿ.ಮೀ. ದೂರದಲ್ಲಿರುವ ಹುದಲಿ, ಖಾದಿ ಉದ್ಯಮದಿಂದಲೇ ಹುಬ್ಬೇರಿಸಿದ ಊರು. 1937ರಲ್ಲಿ ಗಾಂಧೀಜಿ ಇಲ್ಲಿಗೆ ಬಂದು ಒಂದು ವಾರ ತಂಗಿದ್ದರು. ಹುದಲಿಯ ಈ ಗ್ರಾಮೋದ್ಯೋಗ ಸಂಸ್ಥೆಯು ‘ಜವಾನ್‌’ ಹೆಸರಿನಲ್ಲಿ ರುಚಿ ರುಚಿಯಾದ ಉಪ್ಪಿನಕಾಯಿ ತಯಾರಿಸುತ್ತದೆ. ಇದಕ್ಕಾಗಿ ಮೂವರು ಟೆಕ್ಕಿಗಳಾದ ಅಮಿತ್‌ ವಡವಿ, ಆದರ್ಶ ಮುತ್ತಣ್ಣ ಹಾಗೂ ಪ್ರಣವ್‌ ರಾಯ್ ತಮ್ಮ ಕೆಲಸವನ್ನು ಬಿಟ್ಟು ಸಂಪೂರ್ಣವಾಗಿ, ಉಪ್ಪಿನಕಾಯಿ ಉದ್ದಿಮೆಯಲ್ಲಿ ತೊಡಗಿದ್ದಾರೆ.

ಶಶಿ ತರೂರ್‌, ನಟ ಫ‌ರ್ಹಾನ್‌ ಅಖ್ತರ್‌ ಕೂಡ ಈ ಉಪ್ಪಿನಕಾಯಿಯ ರುಚಿಯನ್ನು ಚಪ್ಪರಿಸಿದ್ದಾರೆ. ಮಾವು, ನಿಂಬೆ, ಮಾಂಗಣಿ ಬೇರಿನ ಉಪ್ಪಿನಕಾಯಿ ಇಲ್ಲಿ ಜನಪ್ರಿಯ. ದೇಶದ ಉಪ್ಪಿನಕಾಯಿ ಉದ್ಯಮದಲ್ಲಿ ಅತಿದೊಡ್ಡ ಆನ್‌ ಲೈನ್‌ ಮಾರುಕಟ್ಟೆ ಹೊಂದಿರುವ ‘ಜವಾನ್‌’ ಸ್ವಾದದ ಹಿಂದೆಯೂ ಗಾಂಧಿ ಎಂಬ ಬ್ರ್ಯಾಂಡೇ ಕೆಲಸ ಮಾಡುತ್ತಿದೆ.

‘ಚರಕ’ದ ನಾನಾ ಚಮತ್ಕಾರ
ಶಿವಮೊಗ್ಗದ ಸಾಗರ ತಾಲೂಕಿನಿಂದ 10 ಕಿ.ಮೀ. ದೂರದಲ್ಲಿರುವ ಹೆಗ್ಗೊಡಿನ ‘ಚರಕ’ ಕೈಮಗ್ಗದ ಉತ್ಪನ್ನಗಳಿಗೆ ಮನೆಮಾತಾದ ಸಂಸ್ಥೆ. ‘ಯಂತ್ರಗಳನ್ನು ಕಳಚೋಣ ಬನ್ನಿ’ ಎನ್ನುತ್ತಾ, ಮೂಲೆಯ ಹಳ್ಳಿಯಲ್ಲಿ ನೆಲೆನಿಂತು, ಮಹಿಳೆಯರಿಗೆ ಸ್ವಾವಲಂಬನೆಯ ಪಾಠ ಹೇಳಿಕೊಟ್ಟ ಪ್ರಸನ್ನ ಅವರು ಅಪ್ಪಟ ಗಾಂಧಿವಾದಿ. ಅವರು ಬದನವಾಳುನಲ್ಲಿ ಸತ್ಯಾಗ್ರಹಕ್ಕೆ ಕುಳಿತಾಗ, ಮುಂಬೈನಿಂದ ಬಂದು ಹೋರಾಟಕ್ಕೆ ಜತೆಯಾದ ನಟ ಇರ್ಫಾನ್‌ ಖಾನ್‌ ನ ಕಾಳಜಿಯ ಹಿಂದೆಯೂ ಗಾಂಧಿ ವ್ಯಕ್ತಿತ್ವದ ಸೆಳೆತವೇ ಕಾಣಿಸುತ್ತದೆ.

ರಾಜ್ಯದಲ್ಲಿ 700 ಮಂದಿಗೆ ಕೆಲಸ ಕೊಟ್ಟು, ವಾರ್ಷಿಕ 4 ಕೋಟಿ ರೂ. ವಹಿವಾಟು ನಡೆಸುವ ಚರಕ ಸಂಸ್ಥೆ ಈಗ ನಾನಾ ವಿಧದಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ. ‘ಮಲೆನಾಡಿನ ಈ ಪುಟ್ಟ ಹಳ್ಳಿಯಲ್ಲಿ ಚರಕ ತಿಂಗಳಿಗೆ 2.5 ಲಕ್ಷ ವಹಿವಾಟು ನಡೆಸುತ್ತದೆ. ಪುರುಷರ ಕೋಟ್‌ನಿಂದ ಹಿಡಿದು, ಮಹಿಳೆಯರ ಚೂಡಿದಾರ್‌, ಶಾರ್ಟ್ ಟಾಪ್‌ ವರೆಗೆ, ಅಲ್ಲದೇ ಮಕ್ಕಳ ಬಗೆಬಗೆ ಉಡುಪುಗಳಲ್ಲೂ ಚರಕ ಉತ್ಪನ್ನಗಳು ಭರವಸೆ ರೂಪಿಸಿವೆ’ ಎನ್ನುತ್ತಾರೆ ಚರಕ ಸಂಸ್ಥೆಯ ಕಾರ್ಯದರ್ಶಿ ರಮೇಶ್‌ ಹೆಗ್ಗೊಡು.

ಗಾಂಧಿ ಆವರಿಸಿಕೊಂಡ ಈ ಹಳ್ಳಿಗಳನ್ನೆಲ್ಲ ದಾಟಿ ಬೆಂಗಳೂರಿಗೆ ಬಂದರೂ, ದಿನವಿಡೀ ಝಗಮಗಿಸುವ ಮಹಾತ್ಮ ಗಾಂಧಿ ರಸ್ತೆ ಕೂಡ ಒಂದು ಬ್ರ್ಯಾಂಡೇ ಆಗಿ, ಆಕರ್ಷಿಸುತ್ತದೆ. ಅಂದಹಾಗೆ, ಈ ರಸ್ತೆಗೆ ‘ಎಂ.ಜಿ. ರಸ್ತೆ’ ಎಂಬ ಹೆಸರನ್ನಿಟ್ಟಿದ್ದು, 1948ರ ಫೆಬ್ರವರಿಯಲ್ಲಿ. ಅಂದರೆ, ಗಾಂಧೀಜಿ ಮಡಿದ ಮರು ತಿಂಗಳಿನಲ್ಲಿ! ಬೆಂಗಳೂರಿಗೆ ಯಾರೇ ಬಂದರೂ, ಒಮ್ಮೆ ಇಲ್ಲಿಗೆ ಭೇಟಿ ಕೊಡಲೇಬೇಕೆನ್ನುವ ಸೆಳೆತ ಹುಟ್ಟುಹಾಕಿರುವ ಎಂ.ಜಿ. ರಸ್ತೆಯಲ್ಲಿ ನಡೆಯುವ ಕೋಟ್ಯಾಂತರ ವಹಿವಾಟಿನ ಹಿಂದೆಯೂ ಗಾಂಧಿಯ ನೆರಳು ಜೀವಂತವಿದೆ.

ತಿಂಗಳ ಗಳಿಕೆ ಕೋಟಿ ರೂ. ದಾಟಲು, ಇಲ್ಲಿನ ಜಾಹೀರಾತು ಫ‌ಲಕಗಳ ದುಡಿಮೆಯೇ ಸಾಕೇನೋ. ಗಾಂಧೀಜಿ ಇದನ್ನೆಲ್ಲ ಮೇಲಿನಿಂದಲೇ ನೋಡುತ್ತಾ, ಹೆಮ್ಮೆ ಪಡುತ್ತಿದ್ದಾರೋ, ಸಂಕಟ ಪಡುತ್ತಿದ್ದಾರೋ ಗೊತ್ತಿಲ್ಲ. ಆದರೆ, ಜಗತ್ತು ಅವರ ಹೆಸರಿನಲ್ಲಿ ದುಡ್ಡೆಣಿಸುತ್ತಾ, ಗಾಂಧಿ ಎಂಬ ಇಮೇಜ್ ಅನ್ನು ಗಟ್ಟಿಯಾಗಿಸುತ್ತಲೇ ಇದೆ. ಮಹಾತ್ಮನ ಈ ಇಮೇಜ್ ಗೆ ಯಾವ ಗೋಡ್ಸೆಯೂ ಗುಂಡಿಕ್ಕಲಾರ.

ಫ‌ಕೀರನ ಆನ್‌ಲೈನ್‌ ಅವತಾರ!
ಕೇಳಿ; ಗಾಂಧೀ ಎಂಬ ಬ್ರ್ಯಾಂಡೆಡ್‌ ಮುಖ ಖಾದಿಗಷ್ಟೇ ಸೀಮಿತವಾಗಿಲ್ಲ. ಗಾಂಧಿಯ ಹೆಸರಿನಲ್ಲಿ ಬಗೆ ಬಗೆಯಲ್ಲಿ ವಸ್ತುಗಳು ಆನ್‌ ಲೈನ್‌ ಮಾರುಕಟ್ಟೆಯಲ್ಲಿವೆ. ಅಮೇಜಾನ್‌.ಇನ್‌ನಲ್ಲಿ ‘ಮಹಾತ್ಮ ಗಾಂಧೀಜಿ’ ಎಂದು ಟೈಪಿಸಿದರೆ, 11,612 ಫ‌ಲಿತಾಂಶಗಳು, ಫ್ಲಿಪ್‌ ಕಾರ್ಟ್‌ನಲ್ಲಿ 6096, ಇಬೇನಲ್ಲಿ 1,267 ಫ‌ಲಿತಾಂಶಗಳು ತೆರೆದುಕೊಳ್ಳುತ್ತವೆ.

ಅಲ್ಲಿ ಗಾಂಧಿಯ ಗಾಗಲ್ ನಿಂದ ಹಿಡಿದು ಅವರ ಆತ್ಮಕತೆ, ಜೀವನಚರಿತ್ರೆ ಕೃತಿಗಳು, ಚರಕ, ಗಾಂಧಿರೂಪಿ ಗೊಂಬೆ, ಚಹಾ ಕಪ್‌, ಮಹಾತ್ಮ ಧರಿಸುತ್ತಿದ್ದ ಚಪ್ಪಲಿ ಮಾದರಿ, ವಾಲ್ ಪೇಪರ್‌, 3 ಮಂಗಗಳು, ಮರದಲ್ಲಿ ಮಾಡಿದ ಗಾಂಧಿ ಪ್ರತಿಮೆಗಳು, ಮೊಬೈಲ್ ಕವರ್‌, ಟಿಷರ್ಟು, ಗಾಂಧಿ ಧೋತಿ… ಇವೆಲ್ಲವೂ ಗ್ರಾಹಕರಿಗೆ ಆಕರ್ಷಣೆಯ ವಸ್ತುಗಳು.

5 ಪೈಸೆ, 10 ಪೈಸೆ, 20 ಪೈಸೆಗಳಲ್ಲಿದ್ದ ಗಾಂಧಿ ಮುಖವನ್ನು ನಾವೆಲ್ಲ ಮರೆತಿರುವಾಗ, ಆ ಪೈಸೆಗಳನ್ನೆಲ್ಲ ಈ ಆನ್‌ಲೈನ್‌ ವ್ಯಾಪಾರಿ ಸಂಸ್ಥೆಗಳು ಮಾರಾಟಕ್ಕಿಟ್ಟಿವೆ. ಅಮೇಜಾನ್‌ ನಲ್ಲಿ, 20 ಪೈಸೆಯ 500 ನಾಣ್ಯಗಳಿಗೆ 1,365 ರೂ. ಕೊಟ್ಟು ಖರೀದಿಸುವ ಗಾಂಧಿ ಪ್ರೇಮಿಗಳೂ ಸಿಗುತ್ತಾರೆ.

ನೋಟಿನ ಮೇಲಿನ ಗಾಂಧಿ ಚಿತ್ರದ ಕತೆ…
ಭಾರತದ ನೋಟುಗಳ ಮೇಲೆ ಮುದ್ರಿತವಾದ ಗಾಂಧೀಜಿಯ ಪೋಸು ಯಾವತ್ತೂ ಬದಲಾಗುವುದಿಲ್ಲ. ಈ ಫೋಟೋವನ್ನು ಕ್ಲಿಕ್ಕಿಸಿದ್ದು, ಕಲ್ಕತ್ತಾದ ವೈಸ್‌ ರಾಯ್ ಹೌಸ್‌ ಎದುರು, 1946ರಲ್ಲಿ. ಬ್ರಿಟಿಷ್‌ ಸೆಕ್ರೇಟರಿ ಲಾರ್ಡ್ ಪೆಥಿಕ್‌ ಲಾರೆನ್ಸ್‌ ಜತೆ ಗಾಂಧಿ ನಗುತ್ತಿರುವ ದೃಶ್ಯವನ್ನು ಸೆರೆಹಿಡಿದ ಫೋಟೋಗ್ರಾಫ‌ರ್‌ ಹೆಸರನ್ನು ಆಂಗ್ಲರು ಕೊನೆಗೂ ಬಹಿರಂಗ ಪಡಿಸಲೇ ಇಲ್ಲ.  

1. ಮಹಾತ್ಮ ಗಾಂಧೀಜಿ ಅವರ ಜನಪ್ರಿಯತೆಯನ್ನು ದುರ್ಬಳಕೆ ಮಾಡಿಕೊಂಡ ‘ಅಮೇಜಾನ್‌.ಇನ್‌’ ಇತ್ತೀಚೆಗೆ, ಪಾದರಕ್ಷೆಗಳಲ್ಲಿ ಗಾಂಧಿಯ ಚಿತ್ರವನ್ನು ಚಿತ್ರಿಸಿತ್ತು. ಒಂದು ಜತೆ ಚಪ್ಪಲಿಯ ದರ ಬರೋಬ್ಬರಿ 1,200 ರೂ.!

2. ಮದ್ಯಪಾನ ವಿರೋಧಿಸಿದ್ದ ಗಾಂಧೀಜಿಯನ್ನು 2015ರಲ್ಲಿ ಅಮೆರಿಕದ ‘ನ್ಯೂ ಇಂಗ್ಲೆಂಡ್‌ ಬ್ರಿವಿಂಗ್‌’ ಸಂಸ್ಥೆ ಅವಮಾನಿಸಿತ್ತು. ತನ್ನ ಕಂಪನಿಯ ಬಿಯರ್‌ ಬಾಟಲಿಗಳ ಮೇಲೆ 5 ವರ್ಷಗಳಿಂದ ರೊಬೊಟಿಕ್‌ ಇಮೇಜ್ ಉಳ್ಳ ಗಾಂಧಿಯ ಚಿತ್ರವನ್ನು ಮುದ್ರಿಸಿ ವಿವಾದಕ್ಕೆ ಗುರಿಯಾಗಿತ್ತು.

3. 2009ರಲ್ಲಿ ಟೆಲಿಕಾಂ ಇಟಾಲಿಯಾ ಸಂಸ್ಥೆ ಗಾಂಧಿಯ ಚಿತ್ರವುಳ್ಳ ಮಾಂಟ್ ಬ್ಲ್ಯಾಂಕ್‌ ಫೌಂಟೇನ್‌ ಪೆನ್‌ ಅನ್ನು ಉತ್ಪಾದಿಸಿತ್ತು. ರಾಷ್ಟ್ರಪಿತನ ಜನಪ್ರಿಯತೆಯನ್ನು ವಾಣಿಜ್ಯಿಕವಾಗಿ ಬಳಸಿಕೊಂಡಿದ್ದಕ್ಕೆ, ಗಾಂಧೀಜಿಯವರ ಮೊಮ್ಮಗ ತುಷಾರ್‌ ಗಾಂಧಿ ಈ ಸಂಬಂಧ ದಾವೆ ಹೂಡಿ, ಪರಿಹಾರ ಪಡೆದಿದ್ದರು.

* ಭಾರತದ ಅತಿನಂಬಲರ್ಹ ವ್ಯಕ್ತಿತ್ವ ಕುರಿತು ‘ದಿ ಬ್ರ್ಯಾಂಡ್‌ ಟ್ರಸ್ಟ್‌’ 2014ರಲ್ಲಿ ಒಂದು ವರದಿ ಹೊರಹಾಕಿತ್ತು. ಜಾಹೀರಾತು ಪ್ರಚಾರ, ಉತ್ಪನ್ನಗಳ ಖರೀದಿ ಹಿನ್ನೆಲೆಯಲ್ಲಿ ಅಧ್ಯಯನಿಸಿ, ತಯಾರಿಸಿದ್ದ ವರದಿಯಲ್ಲಿ ಗಾಂಧೀಜಿ ನಂ.1 ಬ್ರಾಂಡ್‌ ಆಗಿದ್ದರು.

ಗಾಂಧಿಯ ನೆರಳುಳ್ಳ ಚಲನಚಿತ್ರಗಳು ಸಂಪಾದಿಸಿದ್ದು…
-ಗಾಂಧಿ (1992- ಇಂಗ್ಲಿಷ್‌) 839 ಕೋಟಿ ರೂ. + ಆಸ್ಕರ್‌
-ಹೇ ರಾಮ್ (2000- ತಮಿಳು) 12 ಕೋಟಿ ರೂ. + ರಾಷ್ಟ್ರೀಯ ಪ್ರಶಸ್ತಿ
-ಲಗೇ ರಹೋ ಮುನ್ನಾಭಾಯಿ 196 ಕೋಟಿ ರೂ. (2006- ಹಿಂದಿ) + ರಾಷ್ಟ್ರೀಯ ಪ್ರಶಸ್ತಿ
-ಗಾಂಧಿ ಮೈ ಫಾದರ್‌ 92 ಕೋಟಿ ರೂ. (2007- ಹಿಂದಿ)    
-ಕೂರ್ಮಾವತಾರ (2011- ಕನ್ನಡ) ರಾಷ್ಟ್ರೀಯ ಪ್ರಶಸ್ತಿ

ಗಾಂಧಿ ಹೆಸರಿನಲ್ಲಿ…
-51 ದೇಶದಲ್ಲಿರುವ ರಸ್ತೆಗಳು
-62 ವಿದೇಶದಲ್ಲಿನ ರಸ್ತೆಗಳು
-68 ಒಟ್ಟು ಮಾರುಕಟ್ಟೆಗಳು

* ಕೀರ್ತಿ ಕೋಲ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next