ಬೆಂಗಳೂರು: ನಗರದ ಯಲಹಂಕ ವಲಯ ವ್ಯಾಪ್ತಿಯ ಕೊಡಿಗೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರ ಗಂಟಲು ದ್ರವ ಮಾದರಿ ಸಂಗ್ರಹ ಮಾಡುವ ಬದಲು ಖಾಲಿಟ್ಯೂಬ್ ತುಂಬುತ್ತಿರುವ ದೃಶ್ಯಾವಳಿಗಳು ಶನಿವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ನಾಗರಾಜ್ ಮತ್ತು ಹೇಮಂತ್ ಎಂಬವರ ಮೇಲೆ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಇನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ವಿಚಾರಕರಾದ ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ ಅವರನ್ನು ತನಿಖೆಗೆ ಒಳಪಡಿಸಲಾಗಿದ್ದು, ತನಿಖಾ ವರದಿ ಬರುವವರೆಗೆ ಸೇವೆಯಿಂದ ಅಮಾನತು ಮಾಡಲಾಗಿದೆ.
ಘಟನೆಯ ಹಿನ್ನೆಲೆ: ಕೊಡಿಗೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ನಾಗರಾಜ್ ಮತ್ತು ಹೇಮಂತ್ ಕೊರೊನಾ ಸೋಂಕಿನ ಪರೀಕ್ಷೆಗೆ ಒಳ ಪಡುವವರಿಂದ ಗಂಟಲು ದ್ರವ ಮಾದರಿ ಸಂಗ್ರಹ ಮಾಡುವ ಟ್ಯೂಬ್ ನಲ್ಲಿ ಖಾಲಿ ಕಡ್ಡಿ ಹಾಕಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟಾರ್ಗೆಟ್ ನೀಡಿದ್ದೇ ಕಳ್ಳದಾರಿಗೆ ಕಾರಣವಾಯಿತೇ ?: ಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯ ಒಂದು ಲಕ್ಷ ಜನರನ್ನು ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸಲು ಸರ್ಕಾರ ಟಾರ್ಗೆಟ್ ನೀಡಿದೆ. ಈ ರೀತಿ ದಿನೇ ದಿನೆ ಹೆಚ್ಚು ಜನರನ್ನು ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸುವಂತೆ ಒತ್ತಡ ಹಾಕುತ್ತಿರುವುದು ಸಹ ಈ ರೀತಿ ಪರೋಕ್ಷವಾಗಿ ಕಳ್ಳಾಟಕ್ಕೆ ಕಾರಣವಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಪ್ರಕರಣ ಸಂಬಧ ಆಡಳಿತಾಧಿಕಾರಿಗೆ ಪತ್ರ: ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಪ್ರೇಮಾನಂದ ಅವರು ನೆಗೆಟಿವ್ ವರದಿ ತೋರಿಸುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ, ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರಿಗೆ ಪತ್ರ ಬರೆಯಲಾಗಿದೆ ಎಂದು ಯಲಹಂಕ ವಲಯ ಜಂಟಿ ಆಯುಕ್ತ ಅಶೋಕ್ ತಿಳಿಸಿದ್ದಾರೆ.
ಮುಖ ಕಾಣುವಂತೆ ವಿಡಿಯೊ ಮಾಡಿಕೊಳ್ಳಿ ! ಕೃತ್ಯ ಎಸಗಿರುವ ಗಂಟಲು ದ್ರವ ಮಾದರಿ ಸಂಗ್ರಹ ಮಾಡುವ ಸಿಬ್ಬಂದಿ ವಿಡಿಯೊ ಮಾಡುವ ಸಂದರ್ಭದಲ್ಲಿ ನಮ್ಮ ಮುಖ ಕಾಣು ವಂತೆ ವಿಡಿಯೊ ಮಾಡಿಕೊಳ್ಳಿ, ಯಾರು ಏನು ಮಾಡಲು ಆಗುವುದಿಲ್ಲ ಎಂದು ಉಡಾಫೆಯಿಂದ ಮಾತನಾಡಿರುವುದು ಸೆರೆ ಆಗಿದೆ.
ಲೋಪಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು: ಗುಪ್ತ
ಈ ಸಂಬಂಧ ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು, ಈ ರೀತಿ ಕೊರೊನಾ ಸೋಂಕು ಪರೀಕ್ಷೆಯಲ್ಲಿ ಕರ್ತವ್ಯ ಲೋಪ ಎಸಗುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಸೋಂಕು ಪರೀಕ್ಷೆ ಸಂಖ್ಯೆ ಹೆಚ್ಚಳ ಮಾಡುವುದರ ಜೊತೆಗೆ ಹೆಚ್ಚುವರಿ ಸಿಬ್ಬಂದಿಯನ್ನೂ ಪಾಲಿಕೆ ನೇಮಕ ಮಾಡಿಕೊಳ್ಳುತ್ತಿದೆ. ಪ್ರತಿ ಪ್ರಾಥ ಮಿಕ ಆರೋಗ್ಯ ಕೇಂದ್ರದಲ್ಲಿ 8 ಹೆಚ್ಚು ವರಿ ಗಂಟಲು ದ್ರವ ಮಾದರಿ ಸಂಗ್ರಹ ತಂಡಗಳನ್ನು ನಿಯೋಜಿಸಲಾಗುತ್ತಿದೆ. ಒಬ್ಬ ವ್ಯಕ್ತಿಗೆ ಎರಡು ಪಟ್ಟು ಕೆಲಸ ನೀಡುತ್ತಿಲ್ಲ ಎಂದು ಉದಯವಾಣಿಗೆ ತಿಳಿಸಿದರು.