Advertisement

ನಕಲಿ ಪಾಸ್‌ಪೋರ್ಟ್‌: ಫ‌ುಟ್‌ಬಾಲ್‌ ಕೋಚ್‌ ಬಂಧನ

06:05 AM Jan 18, 2019 | Team Udayavani |

ಬೆಂಗಳೂರು: ನಕಲಿ ಪಾಸ್‌ಪೋರ್ಟ್‌ ಬಳಸಿ ವಿದೇಶಗಳಿಗೆ ಪ್ರಯಾಣಿಸುತ್ತಿದ್ದ ನೇಪಾಳ ಮೂಲದ ಫ‌ುಟ್‌ಬಾಲ್‌ ಕೋಚ್‌ ಜೈಲು ಸೇರಿದ್ದಾರೆ. ನಕಲಿ ಪಾಸ್‌ಪೋರ್ಟ್‌ ಬಳಸಿದ ಆರೋಪದಲ್ಲಿ ಫ‌ುಟ್‌ಬಾಲ್‌ ಕೋಚ್‌ ಲಕ್ಷ್ಮಣ್‌ ಭಟ್ಟಾರೈ ಅಲಿಯಾಸ್‌ ಮಸಬರ್‌ (32) ಎಂಬಾತನನ್ನು ಬಂಧಿಸಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

ಆರೋಪಿ ಲಕ್ಷ್ಮಣ್‌, 2015ರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಪಾಸ್‌ಪೋರ್ಟ್‌ ಪಡೆದುಕೊಂಡಿದ್ದು, ಹಲವು ಬಾರಿ ವಿದೇಶಗಳಿಗೆ ಪ್ರಯಾಣ ಮಾಡಿದ್ದಾನೆ. ಜ.15ರಂದು ನೇಪಾಳದಿಂದ ಬಂದ ಲಕ್ಷ್ಮಣ್‌ನನ್ನು ವಲಸೆ ಅಧಿಕಾರಿಗಳು ಅನುಮಾನದ ಮೇರೆಗೆ ವಶಕ್ಕೆ ಪಡೆದು ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ಪಾಸ್‌ಪೋರ್ಟ್‌ ಹೊಂದಿರುವುದು ಕಂಡುಬಂದಿದೆ. ಹೀಗಾಗಿ, ಆತನನ್ನು ಠಾಣೆಗೆ ಒಪ್ಪಿಸಿ ದೂರುನೀಡಿದರು. ಲಕ್ಷಣ್‌ ವಿರುದ್ಧ ಪಾಸ್‌ಪೋರ್ಟ್‌ ಕಾಯಿದೆ ಹಾಗೂ ವಂಚನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ವಲಸೆ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 2015ರಲ್ಲಿ ನೇಪಾಳ ಪೌರತ್ವ ಕಾರ್ಡ್‌ ಬಳಸಿ ಪ್ರಯಾಣಿಸಿದ್ದು ಗೊತ್ತಾಗಿದೆ. ಅಲ್ಲದೆ ಆತ ಬೆಂಗಳೂರಿನ ವಿಳಾಸದ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ ಬಳಸಿ 2017ರಲ್ಲಿ ಪಾಸ್‌ಪೋರ್ಟ್‌ ಪಡೆದಿದ್ದಾನೆ. ಆದರೆ, ಆತನ ಬಳಿ ಭಾರತದ ಪೌರತ್ವದ ಬಗ್ಗೆ ಯಾವುದೇ ದಾಖಲೆಗಳಿರಲಿಲ್ಲ. ಹೀಗಾಗಿ ಯುರೋಪ್‌ ದೇಶಗಳಿಗೆ ತೆರಳುವ ಉದ್ದೇಶದಿಂದ ಪಾಸ್‌ಪೋರ್ಟ್‌ ಮಾಡಿಸಿಕೊಂಡಿರುವುದಾಗಿ ತಿಳಿಸಿದ್ದಾನೆ. ಆತ ನಕಲಿ ಪಾಸ್‌ಪೋರ್ಟ್‌ ಬಳಸಿ ಫ್ರಾನ್ಸ್‌, ನೆದರ್‌ಲೆಂಡ್‌ಗೆ ಹೋಗಿಬಂದಿರುವುದು ತಿಳಿದುಬಂದಿದೆ ಎಂದು ಅಧಿಕಾರಿ ಹೇಳಿದರು.

2006ರಲ್ಲಿ ಬಿಸಿಎಐ ವಿಧ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ಲಕ್ಷ್ಮಣ್‌ ವಿಧ್ಯಾಭ್ಯಾಸ ಪೂರ್ಣಗೊಳಿಸಿರಲಿಲ್ಲ. ಫ‌ುಟ್‌ಬಾಲ್‌ ಆಟಗಾರರಾಗಿ ಬೆಂಗಳೂರಿನಲ್ಲಿರುವ ಎಲ್ಲಾ ಕ್ಲಬ್‌ಗಳ ಪರವಾಗಿಯೂ ಆಟವಾಡಿದ್ದಾನೆ. 2015ರಲ್ಲಿ ಆಡವಾಡುವ ವೇಳೆ ಗಾಯಗೊಂಡ ಬಳಿಕ ಕೋಚ್‌ ವೃತ್ತಿ ಆಯ್ಕೆ ಮಾಡಿಕೊಂಡಿದ್ದ ಎಂದು ಅಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next