Advertisement

ನಕಲಿ ನಾಗಮಣಿ ಬೆಲೆ 2 ಕೋಟಿ!

12:22 PM Mar 26, 2019 | Lakshmi GovindaRaju |

ಬೆಂಗಳೂರು: ನಕಲಿ “ನಾಗಮಣಿ’ ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ಮಹಾಲಕ್ಷ್ಮೀ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ. ಹಿರಿಯೂರು ಮೂಲದ ಪ್ಯಾರುಭಾಯ್‌ (57) ಬಂಧಿತ. ಆರೋಪಿಯಿಂದ ನಕಲಿ ನಾಗಮಣಿ, ಪುರಾತನ ಕಾಲದ ತಾಮ್ರದ ತಟ್ಟೆ, ಚೊಂಬು ಜಪ್ತಿ ಮಾಡಿಕೊಳ್ಳಲಾಗಿದೆ.

Advertisement

ಆರೋಪಿ ಪ್ಯಾರುಭಾಯ್‌, ಶತಮಾನಗಳಷ್ಟು ಹಳೆಯ ತಾಮ್ರದ ತಟ್ಟೆ ಹಾಗೂ ಚೊಂಬು ಹೇಗೆ ದೊರೆಯಿತು ಎಂಬುದರ ಬಗ್ಗೆ ಖಚಿತ ಮಾಹಿತಿ ನೀಡುತ್ತಿಲ್ಲ. ಸ್ವಾಮೀಜಿಯೊಬ್ಬರು ಕೊಟ್ಟಿದ್ದರು ಎಂದು ಹೇಳುವ ಜತೆಗೆ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾನೆ. ಈ ಕುರಿತು ತನಿಖೆ ಮುಂದುವರಿಸಲಾಗಿದೆ.

ತಾಮ್ರದ ತಟ್ಟೆ ಹಾಗೂ ಚೊಂಬಿನ ಮೇಲೆ ಹಳಗನ್ನಡ ಭಾಷೆಯಲ್ಲಿ ಸರ್ಪದ ಬಗ್ಗೆ ಬರೆಯಲಾಗಿದೆ.ಹೀಗಾಗಿ, ಅದು ಯಾವ ಕಾಲದ್ದು, ಹಿನ್ನೆಲೆ ಏನೆಂಬ ಕುರಿತು ಪುರಾತತ್ವ ತಜ್ಞರ ಬಳಿ ಅಭಿಪ್ರಾಯ ಪಡೆಯಲು ನಿರ್ಧರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಇಸ್ಕಾನ್‌ ಬಳಿ ಮಾರಾಟ ಯತ್ನ: ಹಿರಿಯೂರಿನಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿರುವ ಆರೋಪಿ ಪ್ಯಾರುಭಾಯ್‌, ಕಾರಿನಲ್ಲಿ ಬೆಂಗಳೂರಿಗೆ ಆಗಮಿಸಿದ್ದ. ಮಾ.24ರಂದು ರಾತ್ರಿ ಇಸ್ಕಾನ್‌ ದೇವಾಲಯದ ಮುಂಭಾಗದ ರಸ್ತೆಯಲ್ಲಿ ನಿಂತು, ನಕಲಿ ನಾಗಮಣಿಯನ್ನೇ ತೋರಿಸಿ, “ಇದನ್ನು ಮನೆಯಲ್ಲಿಟ್ಟುಕೊಂಡರೆ ಅದೃಷ್ಟ ಖುಲಾಯಿಸುತ್ತದೆ.

ಅಂದುಕೊಂಡ ಕೆಲಸ ಆಗುತ್ತದೆ. ಇದರ ಮೌಲ್ಯ 2 ಕೋಟಿ ರೂ.’ ಎಂದು ಹೇಳಿ ಮಾರಾಟ ಮಾಡಲು ಯತ್ನಿಸುತ್ತಿದ್ದ. ಈ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿದ ಇನ್ಸ್‌ಪೆಕ್ಟರ್‌ ಪ್ರಶಾಂತ್‌, ಪಿಎಸ್‌ಐ ವೆಂಕಟರಮಣಪ್ಪ ನೇತೃತ್ವದ ತಂಡ ಆರೋಪಿ ಬಂಧನಕ್ಕೆ ಕಾರ್ಯಯೋಜನೆ ರೂಪಿಸಿತ್ತು.

Advertisement

ಅದರಂತೆ, ಗ್ರಾಹಕರಂತೆ ಆರೋಪಿಯ ಬಳಿ ತೆರಳಿ, ನಾಗಮಣಿಯ ಬಗ್ಗೆ ಕೇಳಿದಾಗ ಅವರಿಗೂ ಕಟ್ಟು ಕಥೆ ಹೇಳಿ, ಕೊಂಡುಕೊಳ್ಳಲು ಒತ್ತಾಯಿಸಿದ್ದ. ಕಾರ್ಯಾಚರಣೆ ನಡೆಸಿದ ವಿಶೇಷ ತಂಡ, ಆರೋಪಿಯನ್ನು ಬಂಧಿಸಿ, ಆತನ ಬಳಿಯಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿ ವಿವರಿಸಿದರು.

ಎರಡು ತಲೆ ಹಾವು ಮಾರಾಟ: ಮತ್ತೂಂದು ಪ್ರಕರಣದಲ್ಲಿ ಎರಡು ತಲೆ ಹಾವು ಎಂದು ನಂಬಿಸಿ ಮಣ್ಣುಮುಕ್ಕ ಹಾವು (ರೆಡ್‌ ಸ್ಯಾಂಡ್‌ ಬೋ) ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಮಹಾಲಕ್ಷ್ಮೀ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಮೂಲದ ಶಿವಣ್ಣ, ಕೃಷ್ಣಪ್ಪ ಬಂಧಿತರು. ಆರೋಪಿಗಳು ಮಣ್ಣುಮುಕ್ಕ ಹಾವನ್ನು ಹಿಡಿದುಕೊಂಡು, “ಈ ಎರಡುತಲೆ ಹಾವು ಮನೆಯಲ್ಲಿಟ್ಟುಕೊಂಡರೆ ಒಳ್ಳೆಯದಾಗುತ್ತದೆ’ ಎಂದು ಸುಳ್ಳು ಹೇಳಿ ಆರ್‌ಎಂಸಿ ಯಾರ್ಡ್‌ನಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ. ಈ ಕುರಿತ ಮಾಹಿತಿ ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಸಂರಕ್ಷಿಸಲಾದ ಹಾವನ್ನು ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next