ಸತೀಶ್ ದೇಪುರ
ಮೈಸೂರು: ಕೊರೊನಾ 2ನೇ ಅಲೆ ಎಲ್ಲೆಡೆ ವ್ಯಾಪಿಸಿರುವ ಬೆನ್ನಲ್ಲೆ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಸೋಂಕಿಗೆ ಹೆದರಿ ಕ್ಲಿನಿಕ್‌ಗೆ ಬರುವ ರೋಗಿಗಳಿಂದ ದುಪ್ಪಟ್ಟು ಹಣ ವಸೂಲಿ ಮಾಡುವ ದಂಧೆ ವ್ಯಾಪಕವಾಗಿ ಹರಡಿದೆ.
ನಕಲಿ ಪದವಿ ಪಡೆದು, ಹಣ ಮಾಡುವಾಸೆಗೆ ಬಿದ್ದಿರುವ ನಕಲಿ ವೈದ್ಯರು ಗ್ರಾಮೀಣ ಭಾಗ ಗಳನ್ನು ಆಯ್ದುಕೊಂಡು ಸುಲಭ ಸಂಪಾದನೆಗೆ ಇಳಿದಿರುವ ಇವರ ಜಾಲ ಜಿಲ್ಲೆಯಲ್ಲಿ ಆಳವಾಗಿ ಬೇರೂರಿದೆ. ಗ್ರಾಮಾಂತರ ಭಾಗಗಳಲ್ಲಿ ಜನರ ಅಸಹಾಯಕತೆ ಹಾಗೂ ಅರಿವಿನ ಕೊರತೆಯನ್ನೇ ಬಂಡವಾಳ ಮಾಡಿಕೊಂಡ ನಕಲಿ ವೈದ್ಯರು ಹಾಗೂ ಕೆಲ ಆಯುರ್ವೇದ ವೈದ್ಯರು ಜ್ವರ, ಶೀತ ಸೇರಿದಂತೆ ಮತ್ತಿತರ ಕಾಯಿಲೆಗೆ ತುತ್ತಾಗಿ ಬರುವ ಜನರಿಗೆ ಕೆಲ ಔಷಧ, ಗ್ಲೂಕೋಸ್ ನೀಡಿ ದುಪ್ಪಟ್ಟು ಹಣ ವಸೂಲಿ ಮಾಡುವ ದಂಧೆ ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ. ಈ ನಡುವೆ ಜನರಲ್ಲಿರುವ ಕೊರೊನಾ ಆತಂಕವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ನಕಲಿ ವೈದ್ಯರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ, ಹೋಬಳಿ ಕೇಂದ್ರಗಳಲ್ಲಿ ಸಣ್ಣದೊಂದು ಕ್ಲಿನಿಕ್ ತೆರೆದು, ರೋಗಿಗಳಿಗೆ ಚಿಕಿತ್ಸೆ ನೀಡುವುದು ಹೆಚ್ಚಾಗಿದೆ.
ತಾವು ನೀಡುವ ಇಂಜೆಕ್ಷನ್, ಮಾತ್ರೆ ಹಾಗೂ ಗ್ಲೋಕೋಸ್‌ಗೆ ರೋಗಿಗಳಿಂದ ದುಪ್ಪಟ್ಟು ಹಣ ಪಡೆದು ವಂಚಿಸಲಾಗುತ್ತಿದೆ. ಇತ್ತ ಚಿಕಿತ್ಸೆ ಪಡೆದ ಹಲವರು ಆರೋಗ್ಯದಲ್ಲಿ ಏರುಪೇರಾಗಿ ತಾಲೂಕು ಹಾಗೂ ನಗರದ ಆಸ್ಪತ್ರೆಗಳತ್ತ ಓಡುವಂತಾಗಿದೆ. ಎರಡು ಪ್ರಕರಣ ಬೆಳಕಿಗೆ: ಇತ್ತೀಚೆಗೆ ನಂಜನಗೂಡು ತಾಲೂಕು ಹುರಾ ಗ್ರಾಮದಲ್ಲಿ ಆಯುರ್ವೇದಿಕ್ ವೈದ್ಯನೆಂದು ಹೇಳಿಕೊಂಡು ಅಲೋಪತಿ ಚಿಕಿತ್ಸೆ ನೀಡುತ್ತಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿ, ಕ್ಲಿನಿಕ್ ಮುಚ್ಚಿಸಿದ್ದರೆ, ಸರಗೂರು ತಾಲೂಕಿನಲ್ಲಿ ಆಯುರ್ವೇದಿಕ್ ವೈದ್ಯ ಅಲೋಪತಿ ಚಿಕಿತ್ಸೆ ನೀಡುತ್ತಿದ್ದು ಬೆಳಕಿಗೆ ಬಂದು ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಪಿರಿಯಾಪಟ್ಟಣ, ಕೆ.ಆರ್.ನಗರ ಹಾಗೂ ಹುಣಸೂರು ತಾಲೂಕುಗಳಲ್ಲಿಯೂ ಈ ಪ್ರಕರಣಗಳು ಬೆಳಕಿಗೆ ಬಂದಿದ್ದವು.
ಆಯುರ್ವೇದ ವೈದ್ಯರಿಂದಲೂ ಚಿಕಿತ್ಸೆ: ಕೋವಿಡ್ ರೋಗಿಗಳಿಗೆ ತಜ್ಞ ಖಾಸಗಿ ಅಥವಾ ಸರ್ಕಾರಿ ವೈದ್ಯರೇ ಚಿಕಿತ್ಸೆ ನೀಡಬೇಕು ಎಂಬ ನಿಯಮವಿದ್ದರೂ, ಜಿಲ್ಲೆಯ ಎಲ್ಲ ಭಾಗಗಳಲ್ಲೂ ಆಯುರ್ವೇದ ವೈದ್ಯರೇ ಕೊರೊನಾ ಸೋಂಕಿತರು ಹಾಗೂ ಶಂಕಿತರಿಗೆ ಅಲೋಪತಿ ಚಿಕಿತ್ಸೆ ನೀಡುತ್ತಿರುವುದು ಸಾಮಾನ್ಯ ವಾಗಿದೆ. ಹೀಗಿದ್ದರೂ ಜಿಲ್ಲಾಡಳಿತವಾಗಲಿ, ಆರೋಗ್ಯ ಇಲಾಖೆಯಾಗಲಿ ಗಂಭೀರವಾಗಿ ಪರಿಗಣಿಸದೇ ಇರುವುದು ಜನರನ್ನು ಮತ್ತಷ್ಟು ಸಾವಿನ ದವಡೆಗೆ ದೂಡಿದಂತಾಗಿದೆ.