ಬೆಳಗಾವಿ: 2000 ಹಾಗೂ 500 ರೂ. ನೋಟಿಗೆ ಹೋಲುವ ತದ್ರೂಪಿ ನೋಟುಗಳ ಕಂತೆ, ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಲೋಕೋಪಯೋಗಿ ಇಲಾಖೆಯ ಪಾಳು ಬಿದ್ದ ವಸತಿ ಗೃಹ ಸಮುಚ್ಚಯದಲ್ಲಿ ಪತ್ತೆಯಾಗಿವೆ!
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಡಾ| ಡಿ.ಸಿ. ರಾಜಪ್ಪ, ಚುನಾವಣೆ ವೇಳೆ ಮತದಾರರಿಗೆ ಹಣ ಹಂಚಲು ಅಕ್ರಮವಾಗಿ ಹಣ ಸಂಗ್ರಹಿಸಿರುವ ಬಗ್ಗೆ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಈ ನೋಟುಗಳು ಪತ್ತೆಯಾಗಿವೆ. ವಿಜಯಪುರ ಮೂಲದ ಹಾಗೂ ಸದ್ಯ ಬೆಳಗಾವಿ ಸದಾಶಿವ ನಗರದ ಕಂಗ್ರಾಳಕರ ಕಾಲೋನಿಯ ನಿವಾಸಿ ಅಜೀತ ಚನ್ನಪ್ಪ ನಿಡೋಣಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಪತ್ತೆಯಾದ ಎಲ್ಲ ನೋಟುಗಳ ಮೇಲೆ ಮಕ್ಕಳ ಮನರಂಜನಾ ಬ್ಯಾಂಕ್ ಎಂದು ಮುದ್ರಣಗೊಳಿಸಲಾಗಿದೆ. ಜತೆಗೆ ಎಲ್ಲ ನೋಟುಗಳ ಮೇಲೆ “0000′ ಎಂದು ಮುದ್ರಿಸಲಾಗಿದೆ. ಯಾವುದರ ಮೇಲೂ ಮುಖ ಬೆಲೆ ಮುದ್ರಣಗೊಂಡಿಲ್ಲ ಎಂದು ತಿಳಿಸಿದರು.
ಈ ನೋಟಿನ ಮೌಲ್ಯದ ಬದಲು ನಾಲ್ಕು ಸೊನ್ನೆಗಳು ಹಾಗೂ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಬದಲಿಗೆ ಚಿಲ್ಡ್ರನ್ಸ್ ಬ್ಯಾಂಕ್ ಎಂದು ಮುದ್ರಿಸಲಾಗಿದೆ. ಮೌಲ್ಯ ಮುದ್ರಣಗೊಂಡಿದ್ದರೆ, ಅದು 7 ಕೋಟಿ ರೂ. ನಷ್ಟು ಆಗಿರುತ್ತಿತ್ತು ಎಂದು ಅಂದಾಜಿಸಲಾಗಿದೆ. ಅಸಲಿ ನೋಟುಗಳೊಂದಿಗೆ ಇಟ್ಟು ದ್ವಿಗುಣವಾಗಿ ತೋರಿಸುವ ಅಥವಾ ಚುನಾವಣೆ ಸಂದರ್ಭದಲ್ಲಿ ಜನರಲ್ಲಿ ಗೊಂದಲ ಸೃಷ್ಟಿಸುವ ಉದ್ದೇಶಕ್ಕೂ ಬಳಸುವ ಸಾಧ್ಯತೆ ಇರಬಹುದು ಎಂದು ಹೇಳಿದರು.
ತಪಾಸಣೆ ನಡೆಸಿದಾಗ 2000 ರೂ. ಮೌಲ್ಯದ 24 ನಕಲಿ ನೋಟು ಹಾಗೂ ನಿಷೇಧಿತ 1000 ರೂ. ಮುಖಬೆಲೆಯ 15 ನೋಟುಗಳು ಸಿಕ್ಕಿವೆ. 500 ರೂ. ಮುಖಬೆಲೆ ಹೋಲುವ 153 ಬಂಡಲ್‌ನಲ್ಲಿ 25,300 ನೋಟುಗಳು, 2000 ರೂ. 2000 ರೂ. ಮುಖ ಬೆಲೆ ಹೋಲುವ 292 ಬಂಡಲ್‌ನಲ್ಲಿ 29,200 ನೋಟುಗಳು, 1000 ಮುಖ ಬೆಲೆ ಹೋಲುವ 15 ಬಂಡಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ನೋಟುಗಳನ್ನು ಗೋಕಾಕ್‌ನಲ್ಲಿ ಮುದ್ರಿಸಲಾಗಿದ್ದು, ಗೋಕಾಕ ತಾಲೂಕಿನ ನಿರ್ಮಾಪಕ ಪ್ರಶಾಂತ ನಿರ್ಮಿಸುತ್ತಿರುವ 15 ಸೆಕೆಂಡ್ಸ್ ಚಲನಚಿತ್ರದ ದೃಶ್ಯವೊಂದಕ್ಕೆ ಬಳಸುವ ಉದ್ದೇಶದಿಂದ ಮುದ್ರಿಸಲಾಗಿದೆ ಎಂದು ಬಂಧಿತ ಆರೋಪಿ ಬಾಯಿಬಿಟ್ಟಿದ್ದಾನೆ. ಪ್ರಶಾಂತ ಅವರನ್ನೂ ವಿಚಾರಣೆಗೆ ಒಳಪಡಿಸಿಸಲಾಗುವುದು ಎಂದಿದ್ದಾರೆ ಪೊಲೀಸರು.