ಬೆಂಗಳೂರು: ಎರಡನೇ ಬಾರಿ ಕೆಲಸಕ್ಕೆ ಸೇರಿಸಿಕೊಳ್ಳದ ಕಂಪನಿಗೆ ಹುಸಿ ಬಾಂಬ್ ಕರೆ ಮಾಡಿದ ಮಾಜಿ ಮಹಿಳಾ ಉದ್ಯೋಗಿಯನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿ, ಠಾಣಾ ಜಾಮೀನು ನೀಡಿ ಬಿಡುಗಡೆ ಮಾಡಿದ್ದಾರೆ.
ಬೆಳಗಾವಿ ಮೂಲದ ಶೃತಿ ಶೆಟ್ಟಿ (26) ಎಂಬಾಕೆಯನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿತೆ ಶೃತಿ ಶೆಟ್ಟಿ ಬಿಬಿಎಂ ಪದವಿ ಪಡೆದು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. 2017ರಲ್ಲಿ ಎಂಬಿಎ ವ್ಯಾಸಂಗಕ್ಕಾಗಿ ಕೆಲಸ ತೊರೆದು ಬೆಳಗಾವಿಗೆ ಹೋಗಿದ್ದಳು. ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಬಳಿಕ ಬೆಳಗಾವಿ, ಬೆಂಗಳೂರಿನ ವಿವಿಧೆಡೆ ಕೆಲಸಕ್ಕೆ ಶೋಧಿಸಿದ್ದಾಳೆ. ಆದರೆ, ಎಲ್ಲಿಯೂ ಸಿಕ್ಕಿರಲಿಲ್ಲ. ಬಳಿಕ ಈ ಹಿಂದೆ ಕೆಲಸ ಮಾಡುತ್ತಿದ್ದ ಟಿಸಿಎಸ್ ಸಂಸ್ಥೆಯಲ್ಲೂ ಅರ್ಜಿ ಹಾಕಿದ್ದಳು. ಆದರೆ, ಕಂಪನಿ ಎರಡನೇ ಬಾರಿ ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿತ್ತು. ಅದರಿಂದ ಬೇಸತ್ತ ಆಕೆ, ಮಂಗಳವಾರ ನಸುಕಿನ 3 ಗಂಟೆ ಸುಮಾರಿಗೆ ಕಂಪನಿಗೆ ಕರೆ ಮಾಡಿ ಸಂಸ್ಥೆಯ ಬಿ ಬ್ಲಾಕ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದಾಳೆ. ಅಲ್ಲದೆ, ಕೆಲ ಕ್ಷಣಗಳಲ್ಲೇ ಬಾಂಬ್ ಸ್ಫೋಟಗೊಳ್ಳಲಿದೆ. ಕೂಡಲೇ ಎಲ್ಲಾ ಸಿಬ್ಬಂದಿಯನ್ನು ಹೊರಗೆ ಕರೆದುಕೊಂಡು ಬನ್ನಿ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಳು ಎಂದು ಪೊಲೀಸರು ಹೇಳಿದರು.
ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಕಂಪನಿಯ ಎಲ್ಲೆಡೆ ಶೋಧಿಸಿದರೂ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿರಲಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಕರೆ ಎಂಬುದು ತಿಳಿದು ಬಂದಿತ್ತು. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಬೆಳಗಾವಿಯಿಂದ ಕರೆ ಬಂದಿರುವುದು ಖಾತ್ರಿಯಾಗಿ ಆಕೆಗೆ ಕರೆ ಮಾಡಿ ವಿಚಾರಣೆಗಾಗಿ ಠಾಣೆಗೆ ಬರುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪೋಷಕರ ಜತೆ ಠಾಣೆಗೆ ಬಂದ ಶೃತಿಯನ್ನು ವಿಚಾರಣೆ ನಡೆಸಿ ಠಾಣಾ ಜಾಮೀನು ನೀಡಿ ಬಿಡುಗಡೆ ಮಾಡಲಾಗಿ ಎಂದು ಪೊಲೀಸರು ಹೇಳಿದರು.
ತಾಯಿ ನಂಬರ್‌ನಿಂದ ಕರೆ: ಒಂದೆರಡು ವರ್ಷಗಳಿಂದ ಯಾವುದೇ ಕೆಲಸ ಸಿಗದಕ್ಕೆ ಮಾನಸಿಕ ಖನ್ನತೆಗೊಳಗಾಗಿದ್ದ ಶೃತಿ, ತಾಯಿ ಮೊಬೈಲ್‌ನಿಂದ ಬಾಂಬ್ ಬೆದರಿಕೆ ಕರೆ ಮಾಡಿದ್ದಳು. ಇನ್ನು ವಿಚಾರಣೆಯಲ್ಲಿ “ಎಂಬಿಎ ಪದವಿ ಪೂರ್ಣಗೊಂಡ ಬಳಿಕ ಎಲ್ಲಿಯೂ ಕೆಲಸ ಸಿಗಲಿಲ್ಲ. ಈ ಹಿಂದೆ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲೂ ಕೆಲಸ ಕೊಡಲಿಲ್ಲ ಎಂಬ ಕಾರಣಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ್ದಾಳೆ. ಬೇರೆ ಯಾವುದೇ ಉದ್ದೇಶ ಇಲ್ಲ’ ಹೇಳಿಕೆ ನೀಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದರು.