ಇಂದಿನ ಯುವ ಪೀಳಿಗೆಗೆ ತಾಳ್ಮೆ ಸ್ವಲ್ಪ ಕಡಿಮೆ ಎಂದೇ ಹೇಳಬಹುದು. ಇದು ಫಾಸ್ಟ್ ಫುಡ್ ಯುಗವಾದ್ದರಿಂದ ಏನೇ ಕೆಲಸ ಮಾಡಿದರೂ ತತ್‌ಕ್ಷಣ ಫಲಿತಾಂಶ ಬೇಕೇ ಬೇಕು. ಯಾವುದೇ ಕೆಲಸವನ್ನು ಮಾಡಿದರೂ ಶೀಘ್ರ ಪ್ರತಿಫಲ ದೊರೆಯದಿದ್ದಲ್ಲಿ, ಆ ಕೆಲಸವನ್ನು ಬಿಟ್ಟು ಮತ್ತೊಂದು ಕೆಲಸಕ್ಕೆ ಕೈ ಹಚ್ಚುತ್ತಾರೆ. ಇದರಿಂದಾಗಿ ಯಶಸ್ಸು ಎಂಬುದು ಮರೀಚಿಕೆಯಾಗಿಯೇ ಉಳಿದಿದೆ. ಒಂದು ನಿರ್ದಿಷ್ಟ ಕೆಲಸದಲ್ಲಿ ಒಮ್ಮೆ ಸೋಲಾದರೆ ಅಷ್ಟಕ್ಕೇ ಗುರಿಯನ್ನು ಬದಲಿಸದೆ ದೃಢ ನಂಬಿಕೆಯಿಂದ ನಿರಂತರವಾಗಿ ಪ್ರಯತ್ನವನ್ನು ಮಾಡಿ ಗೆಲುವನ್ನು ದಕ್ಕಿಸಿಕೊಳ್ಳುವಂತಹ ತಾಳ್ಮೆಯು ಬಹಳ ಮುಖ್ಯವಾಗಿ ಇರಬೇಕು.
ಒಂದೂರಿನಲ್ಲಿ ಒಬ್ಬ ರಾಜನಿದ್ದ. ಒಮ್ಮೆ ಆತ ತನ್ನ ಪರಿವಾರ ಸಮೇತನಾಗಿ ಪ್ರವಾಸ ಹೊರಟ. ಒಂದು ಹಳ್ಳಿಗೆ ರಾಜನು ತಲುಪು ತ್ತಿದ್ದಂತೆ ಆ ಹಳ್ಳಿಯ ರಸ್ತೆಯುದ್ದಕ್ಕೂ ಎರಡೂ ಬದಿಗಳಲ್ಲಿ ಸಮೃದ್ಧವಾಗಿ ಬೆಳೆದಿದ್ದ ಬಾಳೆ ಹಣ್ಣಿನ ತೋಟಗಳು ರಾಜನಿಗೆ ಕಾಣಿಸಿದವು. ತೋಟಗಳ ಮಾಲಕರೆಲ್ಲರೂ ಬಾಳೆಹಣ್ಣುಗಳನ್ನು ತಂದು ರಾಜನಿಗೆ ಕಾಣಿಕೆಯಾಗಿ ಅರ್ಪಿಸಿ ನಮಸ್ಕರಿಸುತ್ತಿದ್ದರು. ಆದರೆ ರಾಜ ಸ್ವಲ್ಪ ದೂರ ಮುಂದಕ್ಕೆ ಹೋಗುತ್ತಿದ್ದಂತೆ ಅಲ್ಲಿದ್ದ ಹುಲುಸಾಗಿ ಬೆಳೆದಿದ್ದ ಒಂದು ಬಾಳೆ ತೋಟದಲ್ಲಿ ಒಂದೇ ಒಂದು ಬಾಳೆ ಗಿಡವೂ ಗೊನೆಯನ್ನು ಬಿಟ್ಟಿರಲಿಲ್ಲ. ಆಗ ರಾಜ ಇದೇಕೆ ಹೀಗೆ ಎಂದು ಮಂತ್ರಿಯಲ್ಲಿ ಪ್ರಶ್ನಿಸಿದ. ಆಗ ಮಂತ್ರಿಯು ಪಕ್ಕದ ರೈತನಲ್ಲಿ ವಿಚಾರಿಸಿ ಈತನೊಬ್ಬ ಹುಚ್ಚು ರೈತ, ಯಾರ ಮಾತನ್ನೂ ಕೇಳದೆ ವಿಚಿತ್ರವಾದ ತಳಿಯ ಬಾಳೆ ಗಿಡವನ್ನು ನಾಟಿ ಮಾಡಿದ್ದಾನೆ ಎಂದು ಹೇಳಿದ. ಹೌದೇ, ಹಾಗಾದರೆ ಆ ರೈತನನ್ನು ಕರೆತನ್ನಿ ಎಂದು ರಾಜನು ಮಂತ್ರಿಗೆ ಆಜ್ಞಾಪಿಸಿದ.
ಆ ರೈತನಲ್ಲಿ ರಾಜನು ಈ ಬಗ್ಗೆ ಪ್ರಶ್ನಿಸಿದಾಗ, ಇವು ಸಾಮಾನ್ಯವಾದ ಬಾಳೆ ಗಿಡಗಳಲ್ಲ, ನನ್ನ ಮನೆಗೆ ಸಾಧುವೊಬ್ಬರು ಬಂದಿದ್ದರು, ಅವರು ನೀಡಿದ ವಿಶಿಷ್ಟ ಬಾಳೆ ಸಸಿಗಳು ಇವು. ಇವು ತತ್‌ಕ್ಷಣದಲ್ಲಿ ಬಾಳೆ ಹಣ್ಣನ್ನು ನೀಡದೆ 25 ವರ್ಷಗಳ ಅನಂತರ ವಿಭಿನ್ನವಾದ ಹಾಗೂ ಅತ್ಯಂತ ಬೆಲೆ ಬಾಳುವ ಬಾಳೆ ಹಣ್ಣುಗಳನ್ನು ನೀಡುತ್ತವೆ. ಈಗಾಗಲೇ ಇಪ್ಪತ್ತು ವರ್ಷಗಳು ಪೂರೈಸಿವೆ. ಇನ್ನು ಕೇವಲ ಐದು ವರ್ಷಗಳಲ್ಲಿ ನಾನು ಅತ್ಯಂತ ಮಹತ್ವದ ಫಸಲನ್ನು ಪಡೆಯಲಿದ್ದೇನೆ ಎಂದು ಆಶಾವಾದದಿಂದ ನುಡಿದ.
ರಾಜ ಕುತೂಹಲದಿಂದ ರೈತನಿಗೆ ಇನ್ನು ಐದು ವರ್ಷಗಳು ಕಳೆದ ಬಳಿಕ ನಿನ್ನ ತೋಟದಲ್ಲಿ ಬಿಡುವ ವಿಶಿಷ್ಟ ಬಾಳೆಹಣ್ಣನ್ನು ನನ್ನ ಅರಮನೆಗೆ ತಂದುಕೊಡುವಂತೆ ಆಜ್ಞಾಪಿಸಿದ. ಐದು ವರ್ಷಗಳು ಕಳೆದ ಬಳಿಕ ಆ ರೈತನ ತೋಟದಲ್ಲಿ ದೊಡ್ಡ ಗಾತ್ರದ, ವಿಭಿನ್ನ ಬಣ್ಣದ ಮತ್ತು ರಸಭರಿತವಾದ ರುಚಿರುಚಿಯಾದ ಬಾಳೆ ಹಣ್ಣಿನ ಗೊನೆಗಳು ಬಿಟ್ಟವು. ರಾಜನಿಗೆ ಕೊಟ್ಟ ಮಾತಿನಂತೆ ರೈತನು ಒಂದು ಬುಟ್ಟಿ ತುಂಬಾ ಗೊನೆಗಳನ್ನು ರಾಜನ ಮುಂದಿಟ್ಟ. ಅತ್ಯಂತ ವಿಶಿಷ್ಟವಾದ ಹಾಗೂ ರಸಭರಿತವಾದ ಬಾಳೆ ಹಣ್ಣನ್ನು ತಿಂದು ರಾಜನು ರೈತನ ತಾಳ್ಮೆ ಮತ್ತು ನಂಬಿಕೆಗೆ ತಲೆದೂಗಿದ.
ಅಮೃತದಂತಹ ರುಚಿರುಚಿಯಾದ ಬಾಳೆ ಹಣ್ಣನ್ನು ತಿಂದ ರಾಜನು ರೈತನ ಶ್ರಮಕ್ಕೆ ತಲೆದೂಗಿ ನಿಜವಾಗಿಯೂ ನೀನು ಅದ್ಭುತವನ್ನೇ ಬೆಳೆದಿದ್ದೀಯಾ ಎಂದು ಆತನನ್ನು ಹೊಗಳಿದ. ಅಷ್ಟು ಮಾತ್ರವಲ್ಲದೆ ರಾಜನು ಆ ರೈತನಿಗೆ ತನ್ನ ತಿಜೋರಿಯಲ್ಲಿದ್ದ ಕೋಟಿಗಟ್ಟಲೆ ಬೆಲೆಬಾಳುವ ವಜ್ರ ವೈಢೂರ್ಯಗಳನ್ನು ಮತ್ತು ಆ ರೈತನಿದ್ದ ಪ್ರಾಂತವನ್ನೇ ಅವನ ಹೆಸರಿಗೆ ಬರೆದುಕೊಟ್ಟು ಆ ಪ್ರಾಂತಕ್ಕೆ ಇನ್ನು ನೀನೇ ರಾಜ ಎಂದು ಘೋಷಿಸಿದ.
ನಮ್ಮ ಮೇಲೆ ನಾವಿಡುವ ನಂಬಿಕೆ ಮತ್ತು ತಾಳ್ಮೆಯೇ ನಮ್ಮನ್ನು ಜೀವನದ ಔನ್ನತ್ಯಕ್ಕೇರಿಸುತ್ತದೆ. ಇದೇ ಜೀವನದ ಬಲು ಅಮೂಲ್ಯವಾದ ತಪಸ್ಸು.
- ಸಂತೋಷ್ ರಾವ್ ಪೆರ್ಮುಡ