ಅಂದು ಊರಜಾತ್ರೆ. ಜಾತ್ರೆಯೆಂದ ಮೇಲೆ ಕೇಳಬೇಕೇ? ಸಾಲು ಸಾಲು ಅಂಗಡಿಗಳು, ತಿಂಡಿ ತಿನಿಸುಗಳು, ಮಣಿಸರಗಳು, ವಸ್ತ್ರದಂಗಡಿ, ಹಣ್ಣಿನಂಗಡಿ ಹೀಗೇ ಏನೇನೋ.. ಜಾತ್ರೆಯೆಂದರೆ ಊರಿನ ಕಳೆಯೇ ಬದಲಾಗುತ್ತದೆ. ಜೊತೆಗೆ ಅಲ್ಲಲ್ಲಿ ಕೈಗಾಡಿಗಳಲ್ಲಿ ಬಾಂಬೆ ಮಿಠಾಯಿ, ಲಿಂಬೆ ಸೋಡಾ, ಚುರುಮುರಿ ಇತ್ಯಾದಿ. ಆವರ ಸಂಭ್ರಮ, ಗುಲ್ಲಿನ ನಡುವೆ ಸರಸರನೆ ಓಡಾಡುವ ಮಕ್ಕಳು, ಹದಿಹರೆಯದ ಹುಡುಗಿಯರು. ಆಟಿಕೆಗಳ ಮುಂದೆ ನಿಂತು ಇಂಥದ್ದೇ ಬೇಕು ಎಂದು ಅತ್ತುಗರೆದು ಹೆತ್ತವರನ್ನು ಪೇಚಿಗೀಡು ಮಾಡುವ ಮಕ್ಕಳು. ಇವರನ್ನೆಲ್ಲ ನೋಡುತ್ತಿದ್ದಂತೆ ನಮ್ಮ ಗಮನ ಒಂದೆಡೆ ಗುಂಪಾಗಿ ಬರುತ್ತಿದ್ದ ಒಂದಷ್ಟು ಮಂದಿ ಹೆಂಗಸರ ಕಡೆ ಹೋಯಿತು. “ಅಲ್ಲಾ, ಇಷ್ಟು ವಯಸ್ಸಾದವರೂ ಜಾತ್ರೆ ಅಂತ ಸಿಂಗಾರ ಮಾಡಿಕೊಂಡು ಬರುತ್ತಾರಲ್ಲಾ, ಬಂದು ಅವರೇನು ಮಾಡುತ್ತಾರೆ? ಜಾತ್ರೆ ಸುತ್ತ ಓಡಾಡುವಷ್ಟರಲ್ಲಿ ನಮಗೇ ಕೈಕಾಲು ದಣಿದು ಉಸ್ಸಪ್ಪಾ ಅನ್ನುವಂತಾಗುತ್ತದೆ. ಹೀಗಿರುವಾಗ ಇವರೂ ಹೀಗೆ ಸಂಭ್ರಮಿಸಿಕೊಂಡು ಬರುತ್ತಾರಲ್ಲ? ಏನು ಕತೆಯೋ ಈ ಅಜ್ಜಿಯಂದಿರದ್ದು?’ ಎನಿಸಿತು. ತಟ್ಟನೆ ನಮ್ಮ ಬಾಲ್ಯದ ಜಾತ್ರೆ ನೆನಪಾಯಿತು.
ನಮಗೆ ಜಾತ್ರೆಯೆಂದರೆ ಧರ್ಮಸ್ಥಳದ ಲಕ್ಷದೀಪೋತ್ಸವ. ಅದು ದೇವರಿಗೆ ಸಲ್ಲುವ ಉತ್ಸವ ಎಂಬುದು ನನಗೆ ಬಹುಸಮಯದವರೆಗೂ ಗೊತ್ತೇ ಇರಲಿಲ್ಲ. ಏಕೆಂದರೆ ನಾವು ನೋಡುತ್ತಿದ್ದುದು ಅಲ್ಲಿನ ವಸ್ತು ಪ್ರದರ್ಶನದ ಅಂಗಡಿಗಳನ್ನು ಮಾತ್ರ. ಆ ನೂಕುನುಗ್ಗಲಿನಲ್ಲಿ ಅಮ್ಮನ ಕೈಬಿಡಿಸಿಕೊಳ್ಳದಂತೆ ಭದ್ರವಾಗಿ ಹಿಡಿದುಕೊಂಡು ಅಕ್ಕಪಕ್ಕದ ಅಂಗಡಿಗಳನ್ನು ನೋಡುತ್ತಾ ನಡೆಯುವುದೆಂದರೆ ಕಣ್ಣಿಗೆ ಹಬ್ಬ. ಮನೆಯಲ್ಲಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಅಜ್ಜ ಇದ್ದುದರಿಂದ ಮನೆಮಂದಿಯೆಲ್ಲಾ ಒಟ್ಟಾಗಿ ಜಾತ್ರೆಗೆಂದು ಹೋಗುವುದು ಸಾಧ್ಯವೇ ಇರಲಿಲ್ಲ. ಹೋಗಬೇಕೆಂಬ ಆಸೆ ನಮ್ಮಲ್ಲಿ ಯಾವತ್ತೂ ಮೊಳೆಯಲೇ ಇಲ್ಲವೇ? ಈಗ ಯೋಚಿಸಿದರೆ ಅರ್ಥವೇ ಆಗುವುದಿಲ್ಲ. ಅಷ್ಟಕ್ಕೂ ಹಾಗೆ ಮನೆಮಂದಿಯೆಲ್ಲ ಜೊತೆಯಾಗಿ ಟ್ರಿಪ್- ಟೂರು ಎಂದು ಹೋಗುವ ಸಾಧ್ಯತೆಗಳ ಬಗ್ಗೆ ನಮಗೆ ಯೋಚನೆಯಿರಲಿಲ್ಲ. ನಾವಾದರೋ ಮಕ್ಕಳು. ಆದರೆ ಅಮ್ಮ? ಅವಳೊಳಗೆ ಯಾವ ಹಂಬಲಗಳೂ ಇರಲಿಲ್ಲವೇ ಅಥವಾ ಅವಳು ತೋರುತ್ತಿದ್ದ ನಿರ್ಲಿಪ್ತತೆ ಅಭಾವ ವೈರಾಗ್ಯವೇ ಗೊತ್ತಿಲ್ಲ. ಆದರೆ ಜಾತ್ರೆಗೆ ಹೋಗುವುದೆಂದರೆ ಮಾತ್ರ ಒಂದು ವರ್ಷದ ತಯಾರಿ!
ಜಾತ್ರೆಯಲ್ಲಿ ಸಿಗುವ ಐಸ್‌ಕ್ರೀಮ್, ಚುರುಮುರಿ, ಕಲ್ಲಂಗಡಿ ಹಣ್ಣುಗಳನ್ನು ಸವಿಯುವ ಸುಖಕ್ಕೆ ವರ್ಷಪೂರ್ತಿ ಕಾಯಬೇಕು. ಅದರ ಹೊರತಾಗಿ ಇನ್ನಾವತ್ತೂ ಅವುಗಳ ಭಾಗ್ಯ ನಮಗಿಲ್ಲ. ಜೊತೆಗೆ ಜಾತ್ರೆಯಲ್ಲಿ ಅಮ್ಮ ಕೊಡಿಸುವ ಹೊಸಬಟ್ಟೆ. ಆಗ ರೆಡಿಮೇಡು ಫ್ರಾಕುಗಳು, ಮಿಡಿ ಎಂದರೆ ಏನೋ ಖುಷಿ. ನಮ್ಮಮ್ಮನೇ ಸ್ವತಃ ಬಟ್ಟೆಗಳನ್ನು ಹೊಲಿಯುವುದರಿಂದ ಸಾಮಾನ್ಯವಾಗಿ ನಮಗೆ ಮೂವರಿಗೆ ಒಂದೇ ತರಹದ ಬಟ್ಟೆ. ನಾಲ್ಕಾರು ಮೀಟರು ತಂದು ಹೊಲಿದರಾಯಿತು. ಯಾವ ಮದುವೆ ಉಪನಯನಗಳಿಗೆ ಹೋದರೂ “ಇವರು ಒಂದೇ ಮನೆ ಮಕ್ಕಳು’ ಎಂದು ಗುರುತಿಸುವುದಕ್ಕೆ ಬೇರೆ ಗುರುತೇ ಬೇಕಿರಲಿಲ್ಲ. ಅದೊಂದು ರೀತಿ ವಾರ್ಷಿಕ ಸಮವಸ್ತ್ರ ಇದ್ದಂತೆ. ವರ್ಷಕ್ಕೊಂದು ಹೊಸಬಟ್ಟೆ ಕೊಂಡುಕೊಳ್ಳುತ್ತಿದ್ದ ಆ ಸಮಯದಲ್ಲಿ ಆ ವರ್ಷದ ಎಲ್ಲ ಕಾರ್ಯಕ್ರಮಗಳಿಗೂ ಅದೇ. ಮುಂದಿನ ವರ್ಷಕ್ಕೆ ಅದು ಶಾಲೆಗೆ ಹಾಕುವುದಕ್ಕೆ! ಸದ್ಯ, ಆಗೆಲ್ಲ ಈಗಿನಂತೆ ಫೋಟೋಗಳ ಅಬ್ಬರವಿರಲಿಲ್ಲ. ಇಲ್ಲದಿದ್ದರೆ ಪ್ರತೀ ಫೋಟೋದಲ್ಲೂ ನಮ್ಮ ಒಂದೇ ರೀತಿಯ ಫ್ರಾಕುಗಳು ದಾಖಲಾಗಿರುತಿದ್ದವು!
ಆದರೆ ಜಾತ್ರೆಯಲ್ಲಿ ಅಮ್ಮ ಕೊಡಿಸುವ ಬಟ್ಟೆಯೆಂದರೆ ಹಾಗಲ್ಲ, ಒಬ್ಬೊಬ್ಬರಿಗೆ ಒಂದೊಂದು ಬಣ್ಣ. ಅವುಗಳನ್ನು ಕೊಂಡುಕೊಳ್ಳುವಾಗಲೂ ಅಷ್ಟೇ, ಅಮ್ಮ ತನ್ನ ಪರ್ಸಿನ ಗಾತ್ರಕ್ಕನುಗುಣವಾಗಿ ಹುಡುಕುತ್ತಾರೆಂಬುದು ನಮಗೆ ಗೊತ್ತಾಗುತ್ತಿರಲಿಲ್ಲ. ಒಂದು ಎರಡು ಮೂರು ಅಂಗಡಿಗಳನ್ನು ದಾಟಿ ಬರುತ್ತಿದ್ದಂತೆ ನಮಗೆ ಆತಂಕ, ಅಮ್ಮ ಕೊಡಿಸುತ್ತಾರೋ ಇಲ್ಲವೋ? ಅಂತೂ ಒಂದು ಅಂಗಡಿಯಲ್ಲಿ ನಮಗೆ ಮೂವರಿಗೆ ಬೇಕಾದುದನ್ನು ಕೊಂಡು ಕೊಂಡ ನಂತರ ಅಮ್ಮನ ಗಮನ ಪಾತ್ರೆಗಳ ಕಡೆಗೆ. ಇಲ್ಲವೇ ಕಂಬಳಿ ರಗ್ಗು ಬೆಡ್‌ಶೀಟುಗಳ ಕಡೆಗೆ. ಅವಕ್ಕಾಗಿ ಅಮ್ಮ ವರ್ಷಪೂರ್ತಿ ಇಷ್ಟಿಷ್ಟೇ ಎಂದು ಹಣ ಕೂಡಿಡುತ್ತಿದ್ದರು. ಅಪ್ಪನಿಗೆ ಬರುತ್ತಿದ್ದ ಪುಟ್ಟ ಸಂಬಳ ಮನೆ ನಿರ್ವಹಣೆ, ನಮ್ಮ ವಿದ್ಯಾಭ್ಯಾಸ, ಅಜ್ಜನ ಔಷಧಿ ಎಂದು ಹಂಚಿ ಹೋಗುತ್ತಿತ್ತು. ಅಂದರೂ ಸಾಲದ ಹೊರೆಯಿರದಂತೆ ಚೊಕ್ಕವಾಗಿ ನಿಭಾಯಿಸಿದವರು ಅಪ್ಪ-$ಅಮ್ಮ. ಇಂದು ಅವರ ನಾಲ್ಕು ಪಟ್ಟು ದುಡಿಯುತ್ತೇವಾದರೂ ಅವರಂತೆ ಹಣಕಾಸು ಯೋಜನೆ ಮಾಡಿಕೊಳ್ಳಲು ನಮಗೆ ಬರುವುದಿಲ್ಲ.
ಈಗ ಮಕ್ಕಳ ಜೊತೆಗೆ ಜಾತ್ರೆಗೆ ಹೋಗುವಾಗ ಅಮ್ಮ ಬಹಳವಾಗಿ ಕಾಡುತ್ತಾಳೆ. ಅಮ್ಮ ಒಂದು ದಿನವಾದರೂ ತನಗಾಗಿ ಏನೂ ಕೊಂಡುಕೊಳ್ಳುತ್ತಲೇ ಇರಲಿಲ್ಲವಲ್ಲ, ಅವಳಿಗೊಂದಾಸೆ ಇದ್ದಿರಲಾರದೇ? ಅಪ್ಪನೂ ಜೊತೆಯಲ್ಲಿ ಬಂದು ಅವಳಿಗಿಷ್ಟವಾದ ಏನನ್ನಾದರೂ ಕೊಡಿಸಬೇಕು ಎಂದು ಅವಳಿಗೆ ಅನಿಸಿರಲಾರದೇ? ನಾವು ಕಾಡಿ ಬೇಡಿದ್ದನ್ನು ಕೊಡಿಸುವಷ್ಟರಲ್ಲಿ ದಣಿದು ಹೋಗುವ ಪರ್ಸಿನ ನಡುವೆ ಅವಳ ಆಸೆಗಳು ಮುಗಿದು ಹೋದವೇ? ನಮ್ಮ ವಿದ್ಯಾಭ್ಯಾಸವೆಲ್ಲ ಮುಗಿದು ನಾವೊಂದು ನೆಲೆ ಕಂಡುಕೊಂಡ ಮೇಲೆ ಅಮ್ಮನ ಕವಾಟು ಸೀರೆಗಳಿಂದ ತುಂಬಿದ್ದು ನಿಜವಾದರೂ ಯೌವನದ ಕಾಲದಲ್ಲಿ ತೀರದುಳಿದ ಆಸೆಗಳಿಗೆ ಈಗ ಅರ್ಥ ಉಳಿದಿವೆಯೇ? ಮಕ್ಕಳು ಕೇಳಿದೊಂದಷ್ಟು ಆಟಿಕೆಗಳು, ಬಳೆ, ಇತ್ಯಾದಿಗಳನ್ನು ಕೊಡಿಸಿ ಇನ್ನೂ ಕೆಲವೆಡೆ ಹಟ ಮಾಡಿದಾಗ ಗದರಿ ಎಳೆದುಕೊಂಡು ಬರುವಷ್ಟರಲ್ಲಿ ಖಾಲಿಯಾದ ಪರ್ಸು ಅಣಕಿಸಿದಂತೆನಿಸಿತ್ತು. ಇನ್ನೂ ಮುಂದೆ ಬರುವಷ್ಟರಲ್ಲಿ ಸೀರೆ ಅಂಗಡಿಯೆದುರು ತೂಗು ಹಾಕಿದ್ದ ಮುದ್ದಾದ ಸೀರೆಗಳು ಇಪ್ಪತ್ತೆ„ದು ವರ್ಷಗಳ ಹಿಂದೆ ಅಮ್ಮನ ಭಾವನೆಗಳು ಏನಿದ್ದಿರಬಹುದೆಂಬುದನ್ನು ನನಗೆ ಸರಿಯಾಗಿಯೇ ಅರ್ಥ ಮಾಡಿಸಿದವು.
ಇಂದು ಪಟ್ಟಣದೊಳಗೆ ಹೊಸಬಟ್ಟೆ ಕೊಂಡುಕೊಳ್ಳಬೇಕಾದರೆ ಜಾತ್ರೆಗೆ ಕಾಯಬೇಕಿಲ್ಲ. ದಿನನಿತ್ಯ ಓಡಾಡುವ ರಸ್ತೆಯೇ ಜಾತ್ರೆಯ ಪ್ರತೀಕದಂತಿರುತ್ತದೆ. ಆದರೆ ಏನು ಕೊಂಡುಕೊಂಡರೂ ಅಮ್ಮ ಅಂದು ಕೊಡಿಸುತ್ತಿದ್ದ ಬಟ್ಟೆಗಳ ಘಮವಿಲ್ಲ. ಹೊಸ ಫ್ರಾಕನ್ನು ಸವರಿದಂತಹ ಅನಿರ್ವಚನೀಯ ಆನಂದವಿಲ್ಲ. ಪ್ರತಿಯೊಂದು ಹಬ್ಬಕ್ಕೂ ಹೊಸಬಟ್ಟೆಗಳನ್ನು ಕೊಂಡುಕೊಳ್ಳುವ ಅಭ್ಯಾಸವೊಂದು ಬೆಳೆದಿರುವ ಪಟ್ಟಣದೊಳಗೆ “ಯುಗಾದಿಗೆ, ವರಲಕ್ಷ್ಮೀ ಹಬ್ಬಕ್ಕೆ, ದೀಪಾವಳಿಗೆ, ಸಂಕ್ರಾಂತಿಗೆ’ ಎಂದು ಅಂಗಡಿಗಳೆಲ್ಲ ಧಿಮಿಗುಟ್ಟುವಾಗ ಅಂಥದೊಂದು ಹಿನ್ನೆಲೆಯಿಲ್ಲದ ಕಾರಣ ಈ ಊರಿಗೆ ನಾವು ಪರಕೀಯರೇನೋ ಎನಿಸುತ್ತದೆ.
ಹತ್ತು ತಿಂಗಳ ಹಿಂದೆ ಪಾರ್ಶ್ವವಾಯು ಕಾಡಿ ಈಗ ಚೇತರಿಸಿಕೊಳ್ಳುತ್ತಿರುವ ಅಮ್ಮ ಕಳೆದ ಬಾರಿ ನಮ್ಮನೆಗೆ ಬರುವಾಗ ಒಂದು ದೊಡ್ಡ ಬ್ಯಾಗಿನ ತುಂಬಾ ಅವರ ಸೀರೆಗಳನ್ನು ತಂದರು. “ಇವನ್ನೆಲ್ಲ ಇಟ್ಟುಕೊಂಡು ಇನ್ನು ನಾನೆಲ್ಲಿಗೆ ಉಡಲಿ? ಇನ್ನೆಲ್ಲೂ ಓಡಾಡುವುದಕ್ಕಾಗುವುದಿಲ್ಲ. ನೀನಾದರೆ ಕಾಲೇಜಿಗೆ ಉಡಬಹುದು, ಇಟ್ಟುಕೋ’ ಅಂದರು. ಅಮ್ಮ ಅವರಿಗಾಗಿಯೇ ಕೊಂಡುಕೊಂಡದ್ದು ಸಹಿತ ಒದಗಿದ್ದು ನನಗೆ. ಆ ಬ್ಯಾಗಿನ ತುಂಬಾ ಜಾತ್ರೆಯ ಫ್ರಾಕಿನ ಘಮವಿದೆಯೇ ಎಂದು ಹುಡುಕುತ್ತಲೇ ಇದ್ದೇನೆ.
ಆರತಿ ಪಟ್ರಮೆ, ತುಮಕೂರು