ರಾಮನಗರ: ಒಂದು ಬಾರಿ ಫೇಲ್ ಆಗಿದ್ದೇವೆ, ಈಗ ಸಪ್ಲಿಮೆಂಟರಿಗೆ ಫುಲ್ ಪ್ರಿಪೇರ್ ಆಗುತ್ತಿದ್ದೇವೆ ಎಂದು ಮಾಜಿ ಸಿಎಂ, ಸಂಸದ ಡಿ.ವಿ.ಸದಾನಂದ ಗೌಡ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣ ಸಂಬಂಧ ಜಿಲ್ಲಾ ಪ್ರಮುಖರ ಸಭೆ ನಡೆಸುತ್ತಿದ್ದೇವೆ.ಈ ಚುನಾವಣೆಯಲ್ಲಿ ಆದ ಹಿನ್ನಡೆ, ಸಣ್ಣಪುಟ್ಟ ವ್ಯತ್ಯಾಸಗಳ ಅವಲೋಕನ ಮಾಡಿದ್ದೇವೆ.ಎಲ್ಲವನ್ನೂ ಸರಿಪಡಿಸಿ ನಾವು ಈ ಬಾರಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದರು.
ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷರ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೇವಲ ನಾಯಕತ್ವ ಬದಲಾವಣೆಯೇ ಚುನಾವಣೆಯ ಫಲಿತಾಂಶ ಅಲ್ಲ.ಅಧಿವೇಶನ ಪ್ರಾರಂಭವಾಗುವ ಮುಂಚೆ ವಿಪಕ್ಷ ನಾಯಕ ಬೇಕು.ಹಾಗಾಗಿ ಇನ್ನೆರಡು ಮೂರು ದಿನಗಳಲ್ಲಿ ವಿಪಕ್ಷ ನಾಯಕರ ನೇಮಕ ಆಗುತ್ತದೆ.ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಎದುರಿಸುವ ಸಮರ್ಥ ವ್ಯಕ್ತಿ ವಿಪಕ್ಷ ನಾಯಕರಾಗುತ್ತಾರೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ವಿಚಾರದ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ಕೇಂದ್ರದ ವರಿಷ್ಠರು ತೀರ್ಮಾನ ಮಾಡುತ್ತಾರೆ.ಕೇವಲ ರಾಜ್ಯ ನಾಯಕರ ಒಂದಷ್ಟು ಅಭಿಪ್ರಾಯ, ಸಲಹೆ ಪಡೆಯುತ್ತಾರೆ.ಬಳಿಕ ಸೂಕ್ತ ತೀರ್ಮಾನ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತದೆ.ಕಳೆದ ಬಾರಿ ನಾವು ಲೋಕಸಭಾ ಚುನಾವಣೆಯಲ್ಲಿ 25ಸ್ಥಾನ ಗೆದ್ದಿದ್ದೇವೆ.ನರೇಂದ್ರ ಮೋದಿಯವರೇ ನಮ್ಮ ಶಕ್ತಿ.ಮೋದಿ ನಾಯಕತ್ವ ಈ ಬಾರಿಯೂ ನಮಗೆ ಹೆಚ್ಚು ಸ್ಥಾನ ತಂದುಕೊಡುತ್ತದೆ ಎಂದರು.
ಕೇಂದ್ರದಿಂದ ರಾಜ್ಯಕ್ಕೆ ಅಕ್ಕಿ ನಿರಾಕರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಕುಣಿಯಲಾಗದವರು ನೆಲ ಡೊಂಕು ಅಂತಾರೆ.ಕಾಂಗ್ರೆಸ್ ನವರು ಯೋಜನೆ ಘೋಷಣೆಗೂ ಮೊದಲು ಮುಂದಾಲೋಚನೆ ಮಾಡಿಲ್ಲ.13 ಬಜೆಟ್ ಕೊಟ್ಟ ಸಿದ್ದರಾಮಯ್ಯ ಈ ಬಗ್ಗೆ ಆಲೋಚನೆ ಇರಲಿಲ್ವವೇ? . ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಅನ್ವಯ ಆಗುವ ರೀತಿ ನಿಯಮರೂಪಿಸಿದೆ.ಆ ನಿಯಮವನ್ನ ಎಲ್ಲರೂ ಅನುಸರಿಸಬೇಕು.ಪಿಯುಷ್ ಗೋಯಲ್ ಅವರನ್ನ ಭೇಟಿ ಮಾಡಿದರೆ ಅವರು ಮನೆಯಿಂದ ಅಕ್ಕಿ ತಂದುಕೊಡುತ್ತಾರಾ?.ಫುಡ್ ಸೆಕ್ಯುರಿಟಿ ಆ್ಯಕ್ಟ್ ಪ್ರಕಾರ ಅಕ್ಕಿ ಪಡೆದುಕೊಳ್ಳಬೇಕು ಎಂದು ಕಿಡಿ ಕಾರಿದರು.