Advertisement

ಗ್ರಾಪಂನಲ್ಲಿ ಮಲತ್ಯಾಜ್ಯ ಸಂಸ್ಕರಣೆ: ದೇಶದಲ್ಲೇ ಮೊದಲು

02:01 PM Jun 21, 2022 | Team Udayavani |

ಬೆಂಗಳೂರು: ನಗರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ರಾಜಾನುಕುಂಟೆ ಗ್ರಾಮ ಪಂಚಾಯ್ತಿಯಲ್ಲಿ ಮಲತಾಜ್ಯ ಸಂಸ್ಕರಣಾ ಘಟಕ ಶೀಘ್ರದಲ್ಲೇ ಸ್ಥಾಪನೆಯಾಗಲಿದೆ. ಯಲಹಂಕ ತಾಲೂಕು ವ್ಯಾಪ್ತಿಯ ನಾಲ್ಕೈದು ಗ್ರಾಮ ಪಂಚಾಯ್ತಿಗಳನ್ನು ಕೇಂದ್ರೀಕರಿಸಿ ಈ ಮಲ ತಾಜ್ಯ ಸಂಸ್ಕರಣಾ ಘಟಕವನ್ನು ನಿರ್ಮಿಸಲಾಗಿದ್ದು, ದೇಶದಲ್ಲೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಮಲ ತಾಜ್ಯ ಸಂಸ್ಕರಣಾ ಘಟಕ ಎಂಬ ಹಿರಿಮೆಗೆ ಇದು ಪಾತ್ರವಾಗಲಿದೆ.

Advertisement

ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳನ್ನು ಕೇಂದ್ರೀಕರಿಸಿ ಈ ಯೋಜನೆ ರೂಪಿಸಲಾಗಿದೆ. ನಗರದಲ್ಲಿ ಇರುವಂತೆ ಗ್ರಾಮೀಣ ಪ್ರದೇಶಗಳಲ್ಲಿ ಮಲತಾಜ್ಯ ನಿರ್ವಹಣೆ ಸಂಪರ್ಕ ಕೊಳವೆ ಮಾರ್ಗಗಳಿಲ್ಲ. ಆ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ಶೌಚಾಲಯಗಳನ್ನು ಗಮನದಲ್ಲಿಟ್ಟು ಕೊಂಡು ಕೇಂದ್ರ ಸರ್ಕಾರದ ಸ್ವತ್ಛ ಭಾರತ ಮಿಷನ್‌ ಮತ್ತು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಇದೀಗ ಸಿಡಿಡಿ ಸಂಸ್ಥೆಯ ಸಹಯೋಗದಲ್ಲಿ ಹೊಸ ಪ್ರಯತ್ನಕ್ಕೆ ಹೆಜ್ಜೆಯಿರಿಸಿದೆ.

ಹಳ್ಳಿಗಳಲ್ಲಿ ಶೌಚಾಲಯಗಳು ತುಂಬಿ ಕೆಲವು ಸಲ ಗಬ್ಬುನಾರಲು ಶುರುವಾಗುತ್ತವೆ. ಇದರಿಂದಾಗಿ ಹಳ್ಳಿಜನರ ಆರೋಗ್ಯದ ಮೇಲೂ ಪರಿಣಾಮ ಬೀಳುವ ಸಾಧ್ಯತೆ ಅಧಿಕವಿರುತ್ತದೆ. ಆ ಹಿನ್ನೆಲೆಯಲ್ಲಿ ಹಳ್ಳಿ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ರಾಜಾನು ಕುಂಟೆ ಗ್ರಾಮ ಪಂಚಾಯ್ತಿಯಲ್ಲಿ ನೂತನ ಮಲತಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲಾಗಿದೆ. ಯಲಹಂಕ ತಾಲೂಕು ವ್ಯಾಪ್ತಿಯ ರಾಜಾನು ಕುಂಟೆ ಗ್ರಾಮ ಪಂಚಾಯ್ತಿ, ಸಿಂಗನಾಹಕನಹಳ್ಳಿ ಗ್ರಾಮ ಪಂಚಾಯ್ತಿ, ಅರಕೆರೆ ಗ್ರಾಮ ಪಂಚಾಯ್ತಿ, ಗಂಟಿಗಾನ ಹಳ್ಳಿ ಗ್ರಾಮ ಪಂಚಾಯ್ತಿ ಸೇರಿದಂತೆ ಇನ್ನೂ ಕೆಲವು ಗ್ರಾಮ ಪಂಚಾಯ್ತಿಗಳನ್ನು ಸೇರಿಸಿ ಈ ಘಟಕವನ್ನು ನಿರ್ಮಾಣ ಮಾಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯ ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೇಂದ್ರ, ರಾಜ್ಯ ಸರ್ಕಾರದ ಅನುದಾನ: ರಾಜಾನುಕುಂಟೆಯಲ್ಲಿ 1 ಎಕರೆ 15 ಗುಂಟೆ ಪ್ರದೇಶದಲ್ಲಿ 44 ಲಕ್ಷ ರೂ. ವೆಚ್ಚದಲ್ಲಿ ಮಲತಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲಾಗಿದೆ. ಕೇಂದ್ರ ಸರ್ಕಾರದ ಸ್ವಚ್ಛ ಭಾರತ್‌ ಮಿಷನ್‌ ಮತ್ತು ರಾಜ್ಯ ಸರ್ಕಾರದ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯಡಿ ಯೋಜನೆ ರೂಪಿಸಲಾಗಿದೆ. ಘಟಕ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಶೇ.70 ರಷ್ಟು ಮತ್ತು ರಾಜ್ಯ ಸರ್ಕಾರ ಶೇ.30ರಷ್ಟು ಅನುದಾನ ನೀಡಲಿದೆ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಘಟಕಗಳು ಅಗತ್ಯವಾಗಿದೆ. ಕೆಲವು ಸಲ ಶೌಚೌಲಯಗಳು ತುಂಬಿಕೊಂಡು ನಾರುತ್ತಿರುತ್ತವೆ. ಇಂತಹ ಸಮಸ್ಯೆಗಳು ಎದುರಾಗದಿರಲಿ ಎಂಬ ಉದ್ದೇಶದಿಂದ ಈ ಘಟಕವನ್ನು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದೆ. ಈಗಾಗಲೇ ಘಟಕ ನಿರ್ಮಾಣ ಕಾರ್ಯ ಅಂತಿಮಗೊಂಡಿದ್ದು ಶೀಘ್ರದಲ್ಲೆ ಲೋಕಾರ್ಪಣೆಗೊ ಳ್ಳಲಿದೆ.ಅದಕ್ಕಾಗಿಯೆ ಎಲ್ಲ ರೀತಿಯ ತಯಾರಿ ಕೂಡ ನಡೆದಿದೆ ಎಂದು ಹೇಳಿದ್ದಾರೆ.

ಮಲತಾಜ್ಯ ಸಂಸ್ಕರಣೆ ಘಟಕದಲ್ಲಿ ಗೊಬ್ಬರ ತಯಾರಿಕೆ : ಆಧುನಿಕ ಯಂತ್ರಗಳ ಮೂಲಕ ಮನೆಗಳ ಶೌಚಾಲಯದ ಮಲ ತ್ಯಾಜ್ಯವನ್ನು ಸಂಗ್ರಹಿಸಿ ವಾಹನಗಳ ಮೂಲಕ ಮಲತಾಜ್ಯ ಸಂಸ್ಕರಣಾ ಘಟಕಕ್ಕೆ ರವಾನಿಸಲಾಗುತ್ತದೆ. ಬಳಿಕ ಘಟಕದಲ್ಲಿ ಯಂತ್ರಗಳ ಮೂಲಕ ತಾಜ್ಯವನ್ನು ಬೇರ್ಪಡಿ ಮಾಡಿ ಗೊಬ್ಬರ ತಯಾರಿಸಲಾಗುತ್ತದೆ. ಘಟಕದಲ್ಲಿ ತಯಾರಾಗುವ ಈ ಗೊಬ್ಬರವನ್ನು ಬೆಳೆಗಳಿಗೂ ಉಪಯೋಗಿಸಬಹುದು ಎಂದು ಬೆಂಗಳೂರು ನಗರ ಜಿಪಂಯ ಸಚ್ಛ ಭಾರತ್‌ ಮಿಷನ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳು ಸಾಮರ್ಥ್ಯಕ್ಕಿಂತೂ ಅಧಿಕವಾಗಿ ಘನ ತ್ಯಾಜ್ಯ ಸಂಗ್ರಹವಾದಾಗ ತುಂಬಿಕೊಂಡು ನಾರುವ ಪರಿಸ್ಥಿತಿ ಅಧಿಕವಿರುತ್ತದೆ. ಆ ಹಿನ್ನೆಲೆಯಲ್ಲಿ ಘಟಕ ನಿರ್ಮಾಣದಿಂದ ಗ್ರಾಮೀಣ ಜನರ ಆರೋಗ್ಯದ ದೃಷ್ಟಿಯಿಂದಲೂ ಅನುಕೂಲವಾಗಲಿದೆ.ರೋಗ-ರುಜೀನಿಗಳಿಂದ ಹಳ್ಳಿಗರನ್ನು ರಕ್ಷಿಸಬಹುದಾಗಿದೆ. ಮಲಹೊರುವ ಅನಿಷ್ಟ ಪದ್ಧತಿ ಕೂಡ ದೂರವಾಗಲಿದೆ ಎಂದು ತಿಳಿಸುತ್ತಾರೆ.

Advertisement

ಹಳ್ಳಿಗಳನ್ನು ಕೇಂದ್ರೀಕರಿಸಿ ಮಲತಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ಈ ಘಟಕವನ್ನು ನಿರ್ಮಿಸಿದ್ದು, ಶೀಘ್ರದಲ್ಲೆ ಕಾರ್ಯಾರಂಭ ಮಾಡಲಿದೆ. – ಎಚ್‌.ಆರ್‌.ರಾಜೇಶ್‌, ಪಿಡಿಒ, ರಾಜಾನುಕುಂಟೆ

 

-ದೇವೇಶ ಸೂರಗುಪ್ಪ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next