ಮುಂಬಯಿ: ಮಹಾಮೈತ್ರಿಕೂಟದಲ್ಲಿ ಬಿಜೆಪಿ ದೊಡ್ಡಣ್ಣನಾಗಿದ್ದು, ಅಗತ್ಯಕ್ಕೆ ತಕ್ಕಂತೆ ದೊಡ್ಡಣ್ಣ ತ್ಯಾಗ ಮಾಡಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮುಂಬಯಿ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಪ್ರತಿಪಾದಿಸಿದರು.
ರಾಜ್ಯದಲ್ಲಿ ಮೂರು ಪಕ್ಷಗಳ ಸರಕಾರವಿದ್ದರೂ ಬಿಜೆಪಿಯ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಫಡ್ನವೀಸ್ ಸ್ಪಷ್ಟಪಡಿಸಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯ ಸಿದ್ಧತೆ ಹಿನ್ನೆಲೆಯಲ್ಲಿ ದಾದರ್‌ನಲ್ಲಿರುವ ವಸಂತ ಸ್ಮತಿ ಕಚೇರಿಯಲ್ಲಿ ಮುಂಬಯಿ ಬಿಜೆಪಿ ಪದಾಧಿಕಾರಿಗಳು ಮತ್ತು ಮುಖಂಡರ ಸಭೆಯನ್ನು ಆಯೋಜಿಸಲಾಗಿತ್ತು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಆಯ್ಕೆ ಮಾಡುವ ಅವರ ಸಂಕಲ್ಪ ಬಿಜೆಪಿಗೆ ಮಾತ್ರವಲ್ಲದೆ ದೇಶಕ್ಕೆ ಮುಖ್ಯವಾಗಿದೆ. ನಮ್ಮ ಕಾರ್ಯಕರ್ತರು ದೇಶಕ್ಕಾಗಿ ತ್ಯಾಗ ಮಾಡಲು ಸಿದ್ಧರಿದ್ದಾರೆ. ಪ್ರಜಾಪ್ರಭುತ್ವದ ಮೂಲಕ ದೇಶವನ್ನು ಅತ್ಯುನ್ನತ ಶಿಖರಕ್ಕೆ ಕೊಂಡೊಯ್ಯಲು ನಾವು ಹೋರಾಡಬೇಕು ಎಂದು ಎಂದು ಫಡ್ನವೀಸ್ ಹೇಳಿದರು.
ಮೋದಿ ಅವರು ಕಳೆದ ಒಂಬತ್ತು ವರ್ಷಗಳ ಅಧಿಕಾರಾವಧಿಯಲ್ಲಿ ದೇಶವನ್ನು ಪರಿವರ್ತಿಸಿದ್ದಾರೆ. ಅವರ ನಾಯಕತ್ವವನ್ನು ವಿಶ್ವದಾದ್ಯಂತ ಮೆಚ್ಚಿಕೊಂಡಿದ್ದಾರೆ. ದೇಶದ ಆರ್ಥಿಕತೆಯು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಅನೇಕ ದೇಶಗಳು ಭಾರತದ ಪರವಾಗಿ ನಿಂತಿವೆ ಎಂದು ಉಲ್ಲೇಖಿಸಿದ ಫಡ್ನವೀಸ್ ಅವರು, ರಾಹುಲ್ ಗಾಂಧಿ ಅವರ ಇಂಡಿಯಾ ಮೈತ್ರಿಕೂಟದೊಂದಿಗೆ ನಮಗೆ ಯಾವುದೇ ಹೋರಾಟವಿಲ್ಲ.
ಮೋದಿಯವರನ್ನು ವಿರೋಧಿಸಲು ಅವರು ಒಟ್ಟಾಗಿ ಬಂದಿದ್ದಾರೆ. ಅವರಿಗೂ ಅನೇಕ ವಿವಾದಗಳಿವೆ. ಅವರಲ್ಲಿ ರಾಷ್ಟ್ರೀಯ ನಾಯಕರಿಲ್ಲ ಎಂದು ಹೇಳಿದ್ದಾರೆ.