ನಂಜನಗೂಡು: ತಾಲೂಕಿನ ಅಳಗಂಚಿ ಗ್ರಾಮದಲ್ಲಿರುವ ಬಣ್ಣಾರಿ ಅಮ್ಮನ್ ಷುಗರ್ ಕಾರ್ಖಾನೆಯ ಎಥೆನಾಲ್ ಘಟಕ ಸ್ಥಗಿತಕ್ಕೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆಯನ್ನು ರೈತರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಹಿಂತೆಗೆದುಕೊಂಡಿದ್ದಾರೆ.
ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ವಿರುದ್ಧ ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ| ಸುಧಾಕರ್ ಹಾಗೂ ವರುಣಾ ಕ್ಷೇತ್ರದ ಶಾಸಕ ಡಾ| ಯತೀಂದ್ರ ಸಿದ್ದರಾಮಯ್ಯ ಭೇಟಿ ನೀಡಿ ಪ್ರತಿಭಟನಾಕಾರರು ಹಾಗೂ ಕಾರ್ಖಾನೆಯ ಆಡಳಿತ ಮಂಡಳಿಯೊಂದಿಗೆ ನಡೆಸಿದ ಮಾತುಕತೆ ತಾತ್ಕಾಲಿಕವಾಗಿ ಫಲಪ್ರದವಾದ ಹಿನ್ನೆಲೆಯಲ್ಲಿ ಶುಕ್ರವಾರ ತಡರಾತ್ರಿ ಪ್ರತಿಭಟನೆಯನ್ನು ಹಿಂಪಡೆಯಲು ರೈತರು ನಿರ್ಧರಿಸಿದರು.
ತನಿಖೆ: ಕಾರ್ಖಾನೆಯ ಎಥೆನಾಲ್ ಘಟಕದಿಂದ ಇಲ್ಲಿನ ಸುತ್ತಮುತ್ತಲ ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆಗಳ ಕುರಿತು, ಅಂತರ್ಜಲ ಕಲುಷಿತ, ಬೂದಿ ಹಾಗೂ ವಾಸನೆಗಳ ಕುರಿತಂತೆ ತಾವು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಅಥವಾ ಬೇರೆ ಸ್ವಾಯತ್ತ ಸಂಸ್ಥೆಯ ನುರಿತ ತಜ್ಞರಿಂದ ತನಿಖೆ ನಡೆಸಲಾಗುವುದು. ಆ ವರದಿಯ ಆಧಾರದ ಮೇಲೆ ಮೂರು ವಾರದೊಳಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಡಾ|ಸುಧಾಕರ್ ನೀಡಿದ ಭರವಸೆಯ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ ಎಂದು ಪ್ರತಿಭಟನೆ ನೇತೃತ್ವವಹಿಸಿದ್ದ ರೈತ ನಾಯಕ ವಿದ್ಯಾಸಾಗರ ತಿಳಿಸಿದರು.
ತಪ್ಪು ಕಂಡುಬಂದರೆ ಕ್ರಮ: ತನಿಖಾ ಸಮಿತಿಯಲ್ಲಿ ರೈತ ಸಂಘ ಹೆಸರಿಸುವ ತಜ್ಞರನ್ನೂ ಸೇರಿಸಿಕೊಳ್ಳಲಾಗುವುದು. ಆ ಸಮಿತಿ ಕಾರ್ಖಾನೆಯವರ ತಪ್ಪನ್ನು ಎತ್ತಿ ತೋರಿಸಿದಲ್ಲಿ ಶಾಶ್ವತವಾಗಿ ಎಥೆನಾಲ್ ಘಟಕವನ್ನು ಮುಲಾಜಿಲ್ಲದೆ ಸ್ಥಗಿತಗೊಳಿಸಲಾಗುವುದು ಎಂದು ವರುಣಾ ಶಾಸಕ ಡಾ| ಯತೀಂದ್ರ ಸಮ್ಮುಖದಲ್ಲಿ ರಾಜ್ಯ ಪರಿಸರ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಡಾ| ಸುಧಾಕರ್ ಭರವಸೆ ನೀಡಿದರು.
ಎಚ್ಚರಿಕೆ: ಶಾಸಕರು ನೀಡಿರುವ ಭರವಸೆ ಈಡೇರದಿದ್ದರೆ ಹಾಗೂ ಇಲ್ಲಿನ ಜನತೆಗೆ ನ್ಯಾಯ ದೊರಕಿಸಕೊಡದಿದ್ದರೆ ಮತ್ತೆ ಕಾರ್ಖಾನೆ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಜಿಪಂ ಸದಸ್ಯ ಸದಾನಂದ ಮತ್ತಿತರರು ಉಪಸ್ಥಿತರಿದ್ದರು.