Advertisement

ಸೌಲಭ್ಯ ವಂಚಿತ ಸರ್ಕಾರಿ ಕಾಲೇಜು; ತಿರುಗಿ ನೋಡ ಜನಪ್ರತಿನಿಧಿಗಳು

06:31 PM Jun 15, 2022 | Team Udayavani |

ಎಚ್‌.ಡಿ.ಕೋಟೆ: ಕುಡಿಯಲು ನೀರಿಲ್ಲ, ಶೌಚಾಲಯ ಇಲ್ಲ, ಬಯಲಿನಲ್ಲೇ ಮಲ ಮೂತ್ರ ವಿಸರ್ಜನೆ, ಕಾಂಪೌಂಡ್‌ ಇಲ್ಲ, ನೆಪಮಾತ್ರಕ್ಕೆ ಆಟದ ಮೈದಾನ ಇದೆ, 6 ಮಂದಿ ಉಪನ್ಯಾಸಕರ ಹುದ್ದೆ ಖಾಲಿ. ಇದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದುಸ್ಥಿತಿ.

Advertisement

ಸರ್ಕಾರಿ ಶಾಲಾ ಕಾಲೇಜುಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಂತ ಕಡಿಮೆ ಇಲ್ಲ ಎಂದು ಹೇಳುವ ಸರ್ಕಾರ, ಸ್ಥಳೀಯ ಜನಪ್ರತಿನಿಧಿಗಳು ತಾಲೂಕು ಕೇಂದ್ರ ಸ್ಥಾನದಲ್ಲಿನ ಸರ್ಕಾರಿ ಪದವಿ ಕಾಲೇಜಿಗೆ ಬಂದರೆ ತಿಳಿಯುತ್ತದೆ. ಎಚ್‌ .ಡಿ.ಕೋಟೆ ತಾಲೂಕು ಹಿಂದುಳಿದ ತಾಲೂಕು, ಈ ತಾಲೂಕಿನ ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನದ ಹೊಳೆಯನ್ನೇ ಹರಿಸುತ್ತಿದೆ. ಆದರೂ, ತಾಲೂಕು ಇಂದಿಗೂ ಅಭಿವೃದ್ಧಿ ಕಂಡಿಲ್ಲ. ಇದಕ್ಕೆ ಜನಪ್ರತಿನಿಧಿಗಳು ಸರ್ಕಾರದ
ನಿರ್ಲಕ್ಷ ತನ ಕಾರಣ ಅನ್ನುವ ಆರೋಪಗಳು ತಾಲೂಕಿನ ಬುದ್ಧಿಜೀವಿಗಳಿಂದ ಕೇಳಿ ಬರುತ್ತಿದೆ.

ಕಾಲೇಜಿನ ಸಮಸ್ಯೆ ಅರಿತ ತಿಂಗಳ ಹಿಂದಷ್ಟೇ ಕಾಲೇಜಿನ ಪ್ರಭಾರ ಪ್ರಾಚಾರ್ಯರಾಗಿ ಅಧಿಕಾರವಹಿಸಿಕೊಂಡ ಡಾ.ಪ್ರಸನ್ನ, ಸಂಸದರು, ಶಾಸಕರ ಗಮನಕ್ಕೆ ತಂದು ದಾನಿಗಳಿಂದ ಕಾಲೇಜಿನ ಶುಚಿತ್ವಕ್ಕೆ ಮುಂದಾಗಿರುವುದು ವಿದ್ಯಾರ್ಥಿಗಳಷ್ಟೇ ಅಲ್ಲದೆ, ಸ್ಥಳೀಯರಿಗೂ ಪ್ರಸನ್ನ ಅವರ ನಿಲುವು ಹರ್ಷ ತಂದಿದೆ.

1985ರಲ್ಲಿ ಸ್ಥಾಪನೆಯಾದ ಕಾಲೇಜು: ತಾಲೂಕು ಕೇಂದ್ರ ಸ್ಥಾನದ ಸರ್ಕಾರಿ ಪದವಿ ಕಾಲೇಜು 1985ನೇ ಸಾಲಿನಲ್ಲಿ ಲೋಕಾರ್ಪಣೆ ಆಯಿತು. ಇಂದಿಗೂ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಆರಂಭಗೊಂಡಿಲ್ಲ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮೈಸೂರು ಜಿಲ್ಲಾ ಕೇಂದ್ರಕ್ಕೆ ತೆರಳಬೇಕಾದ ಅನಿವಾರ್ಯತೆ ಇದೆ. ಶಿಕ್ಷಣವೇ ಅಭಿವೃದ್ಧಿ ಮೂಲ ಅನ್ನುವ ಸರ್ಕಾರ ಅಥವಾ ಚುನಾಯಿತ ಪ್ರತಿನಿಧಿಗಳು ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿಲ್ಲ ಅನ್ನುವುದಕ್ಕೆ ಕಾಲೇಜಿನ ಶೈಕ್ಷಣಿಕ ಮಟ್ಟ ಪ್ರತ್ಯಕ್ಷ ಸಾಕ್ಷಿಯಾಗಿದೆ.

ಇಲ್ಲಗಳ ನಡುವೆ ನೆಪಮಾತ್ರದ ಕಾಲೇಜು: ಕಾಲೇಜಿನಲ್ಲಿ ಶೌಚಾಲಯ ಇಲ್ಲ, ಆಟದ ಮೈದಾನದಲ್ಲಿ ಗಿಡಗಂಟಿ ಬೆಳೆದುನಿಂತು ವಿಷ ಜಂತುಗಳ ಅವಾಸ ಸ್ಥಾನವಾಗಿದೆ. ಕುಡಿಯಲು ನೀರಿಲ್ಲ, ಕಾಂಪೌಂಡ್‌ ಇಲ್ಲದೆ ದನಕರುಗಳಷ್ಟೇ ಅಲ್ಲದೆ, ರಾತ್ರಿ ವೇಳೆ ಕುಡುಕರ ಅನೈತಿಕತೆಯ ತಾಣವಾಗಿದೆ. ಮಲ ಮೂತ್ರ ವಿಸರ್ಜನೆಗೆ ಬಯಲನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದ್ದರೂ, ಕಾಲೇಜಿನ ಸಮಸ್ಯೆಗಳ ಕಡೆ ಯಾರೂ ಕ್ಯಾರೆ ಅನ್ನುತ್ತಿಲ್ಲ. ಹಾಗಾಗಿ ಇಲ್ಲಗಳ ನಡುವೆ
ಕಾಲೇಜಿನಲ್ಲಿ ಕಲಿಯಬೇಕಿದೆ ಅನ್ನುವುದು ವಿದ್ಯಾರ್ಥಿಗಳ ಅಳಲು.

Advertisement

ಕಾಲೇಜಿಗೆ ಮೂಲಸೌಕರ್ಯ ಒದಗಿಸಿ: ಸರ್ಕಾರಿ ಶಾಲಾ ಕಾಲೇಜು ಅನ್ನುವ ತಾತ್ಸರ ಮನೋ ಭಾವ ಜನರಿಂದ ದೂರವಾಗಲು ಸರ್ಕಾರ, ಸ್ಥಳೀಯ ಶಾಸಕರು, ಸಂಸದರು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡುವ ಮೂಲಕ ಕಾಲೇಜಿನ ಮೂಲ ಸೌಕರ್ಯ ಒದಗಿಸಲು ಮುಂದಾಗಬೇಕು ಅನ್ನುತ್ತಾರೆ ಕಾಲೇಜಿನ ವಿದ್ಯಾರ್ಥಿನಿಯರು.

ಉಪನ್ಯಾಸಕರ ನಿಯೋಜನೆಗೆ ಕ್ರಮಕೈಗೊಳ್ಳಿ: ಕಾಲೇಜಿನಲ್ಲಿದ್ದ ಪ್ರಾಚಾರ್ಯರು ಸೇರಿ ಒಟ್ಟು 6 ಉಪನ್ಯಾಸಕರು ವರ್ಗಾವಣೆಗೊಂಡಿದ್ದಾರೆ. ಕಾಲೇಜಿನಲ್ಲಿ 6 ಮಂದಿ ಉಪನ್ಯಾಸಕರ ಕೊರತೆ ಇದೆಯಾದರೂ, ತಾಲೂಕು ಕೇಂದ್ರದ ಕಾಲೇಜಿಗೆ ಉಪನ್ಯಾಸಕರ ಹುದ್ದೆ ತುಂಬಿಲ್ಲ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಅಡಚಣೆಯಾಗುತ್ತಿದೆ. ಸಂಬಂಧಪಟ್ಟವರು ಕಾಲೇಜಿನ ಮೂಲ ಸೌಕರ್ಯ ನೀಗಿಸುವಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮನವಿ ಮಾಡಿಕೊಂಡಿದ್ದಾರೆ.

ಆಡಳಿತ ಮಂಡಳಿ ಕಾರ್ಯಕ್ಕೆ ಮೆಚ್ಚುಗೆ: ಮೂಲ ಸಮಸ್ಯೆಗಳಿಂದ ವಂಚಿತವಾಗಿದ್ದ ಕಾಲೇಜಿನ ಸ್ಥಿತಿ ಅರಿತ, ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ.ಪ್ರಸನ್ನ ಮತ್ತು ಆಡಳಿತ ಮಂಡಳಿ ದಾನಿಗಳ ಮನ ಒಲಿಸಿ, ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮೆಟ್ಲಿಂಗ್‌ ಕಾಮಗಾರಿ ನಡೆಸಿದ್ದಾರೆ. ಕಾಲೇಜಿನ ಸುತ್ತಲೂ ಆವರಿಸಿಕೊಂಡಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ, ಕಾಲೇಜಿನ ಸುತ್ತಲೂ ಮಣ್ಣು ಹಾಕಿ ಗಿಡಗಳನ್ನು ಬೆಳೆಸಿ, ಪರಿಸರ ಸಂರಕ್ಷಣೆ ಮಾಡುವ ಕಾರ್ಯ ಕೈಗೆತ್ತಿ ಕೊಂಡಿರುವುದು ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ, ಪೋಷಕರು ಸಾರ್ವಜನಿಕರಿಗೂ ಆಡಳಿತ ಮಂಡಳಿ ಕಾರ್ಯ ಮೆಚ್ಚುಗೆ ತಂದಿದೆ.

ಕಾಲೇಜಿನ ಕೊರತೆಗಳ ಬಗ್ಗೆ ಶಾಸಕರು, ಸಂಸದರ ಗಮನಕ್ಕೆ ತಂದಿದ್ದೇವೆ. ದಾನಿಗಳ ಮನ ಒಲಿಸಿ, ಶುಚಿತ್ವ ಮತ್ತು ರಸ್ತೆ ಮೆಟ್ಲಿಂಗ್‌ ಕಾಮಗಾರಿ ಆರಂಭಿಸಿದ್ದೇವೆ. ಕಾಲೇಜಿನ ಸಮಸ್ಯೆ ಪರಿಹಾರಕ್ಕೆ ಹಂತವಾಗಿ ಕ್ರಮಕೈಗೊಳ್ಳಲಾಗುತ್ತದೆ.
●ಡಾ.ಪ್ರಸನ್ನ, ಪ್ರಭಾರ ಪ್ರಾಚಾರ್ಯರು

ಉತ್ತಮ ಶಿಕ್ಷಣಕ್ಕಾಗಿ ಸರ್ಕಾರಿ ಶಾಲಾ ಕಾಲೇಜಿಗೆ ಸೇರುವಂತೆ ಸರ್ಕಾರ ಹೇಳುತ್ತದೆ. ಆದರೆ, ತಾಲೂಕು ಕೇಂದ್ರ ಸ್ಥಾನದ ಸರ್ಕಾರಿ ಕಾಲೇಜಿನಲ್ಲಿ ಶೌಚಾಲಯ, ಕುಡಿಯುವ ನೀರು, ಆಟದ ಮೈದಾನ, ಉಪನ್ಯಾಸಕರ ಕೊರತೆ, ಕಾಪೌಂಡ್‌, ಇನ್ನಿತರ ಸೌಲಭ್ಯಗಳ ಕೊರತೆ ನಡುವೆ ಕಾಲೇಜಿನಲ್ಲಿ ಕಲಿಯುವುದು ಹೇಗೆ. ಹೀಗಾದರೆ ಸರ್ಕಾರಿ ಶಾಲಾ ಕಾಲೇಜಿನಲ್ಲಿ ಕಲಿಯಲು ಸಾಧ್ಯವೆ?
●ಕೀರ್ತನಾ, ದ್ವಿತೀಯ ಬಿಎ ವಿದ್ಯಾರ್ಥಿನಿ.

● ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next