Advertisement

ಅರ್ಹ ವಿಕಲಚೇತನರಿಗೆ ಸಿಗದ ಸೌಲಭ್ಯ: ಶೈಲಜಾ

03:24 PM Dec 04, 2018 | Team Udayavani |

ದಾವಣಗೆರೆ: ವಿಜ್ಞಾನ, ತಂತ್ರಜ್ಞಾನದಲ್ಲಿ ಸಾಕಷ್ಟು ಸಂಶೋಧನೆಗಳು ಆಗಿದ್ದರೂ ದೇಶದಲ್ಲಿ ಇನ್ನೂ ವಿಕಲಚೇತನರ ಪ್ರಮಾಣ ಕಡಿಮೆ ಆಗಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಜಾ ಬಸವರಾಜ್‌ ವಿಷಾದ ವ್ಯಕ್ತಪಡಿಸಿದ್ದಾರೆ. ಸೋಮವಾರ, ಎಂ.ಸಿ.ಸಿ. ಬಿ ಬ್ಲಾಕ್‌ನಲ್ಲಿರುವ ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವ ದೇಶ ವಿಕಲಚೇತನರಿಂದ ಮುಕ್ತ ಆಗುತ್ತದೋ ಆ ದೇಶದಲ್ಲಿ ಅಸಮಾನತೆ ನಿವಾರಣೆ ಸಾಧ್ಯ. ಆದರೆ ಅಂಕಿ ಅಂಶಗಳ ಪ್ರಕಾರ ಇನ್ನೂ ಕೂಡ ದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಅಂಗವಿಕಲತೆ ನಿವಾರಣೆ ಆಗಿಲ್ಲ. ಅಂಗವಿಕಲರು ಸಮಾಜಕ್ಕೆ ಭಾರವಲ್ಲ. ಅವರಲ್ಲಿ ಎಲ್ಲಾ ರೀತಿಯ ಚೈತನ್ಯ ಶಕ್ತಿ ಇದೆ. ಆ ಶಕ್ತಿಗೆ ಪ್ರೇರಣೆ, ಪ್ರೋತ್ಸಾಹವನ್ನು ಸರ್ಕಾರ, ಇಲಾಖೆಗಳು ನೀಡುವ ಕೆಲಸ ಮಾಡಬೇಕಿದೆ ಎಂದರು.

Advertisement

ಅಂಗವಿಕಲರಿಗೆ ಇನ್ನೂ ಸರಿಯಾದ ರೀತಿಯಲ್ಲಿ ಸರ್ಕಾರದ ಸೌಲಭ್ಯ ದೊರಕುತ್ತಿಲ್ಲ. ಸೌಲಭ್ಯ ಒದಗಿಸುವಲ್ಲಿ ಇಲಾಖೆಗಳು ಕೂಡ ನಿರ್ಲಕ್ಷ ವಹಿಸುತ್ತಿವೆ. ಹಾಗಾಗಿ ಅವರು ಜನಪ್ರತಿನಿಧಿಗಳ ಬಳಿ ತಮ್ಮ ಅಳಲು ತೋಡಿಕೊಳ್ಳುವಂತಾಗಿದೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಇಲಾಖೆ ಅಧಿಕಾರಿಗಳು ಎಚ್ಚರ ವಹಿಸಿ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಆರ್‌. ಜಯಶೀಲ, ವಿಕಲಚೇತನ ಮಕ್ಕಳ ಬಗ್ಗೆ ಯಾರಿಗೂ ಅನುಕಂಪ ಬೇಡ. ಪೋಷಕರು, ಶಿಕ್ಷಕರೇ ಅವರಿಗೆ ಆತ್ಮಸ್ಥೈರ್ಯ ತುಂಬುವ ನೇತಾರರು. ಮುಂದಿನ ದಿನಗಳಲ್ಲೂ ವಿಕಲಚೇತನ ಪ್ರತಿಭೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದರು. 

ವಿಕಲಚೇತನರು ಇಂದು ಕ್ರೀಡಾ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ವಿಶೇಷ ಸಾಧನೆ ಮಾಡುತ್ತಿದ್ದಾರೆ. ಹಾಗಾಗಿ ಪೋಷಕರು ಅಂತಹ ಮಕ್ಕಳನ್ನು ಕೀಳಾಗಿ ನೋಡದೇ ಅವರ ಆಸಕ್ತಿ ಗುರುತಿಸಿ, ಪ್ರೋತ್ಸಾಹಿಸಿದರೆ ಅವರೂ ಕೂಡ ಇತರರಂತೆ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಮಾತನಾಡಿ, ವಿಕಲಚೇತನ ಮಕ್ಕಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತರುತ್ತಿರುವುದು ನಿಜಕ್ಕೂ ಶ್ಲಾಘನೀಯ. ಸರ್ಕಾರದಿಂದ ವಿಕಲಚೇತನರಿಗೆ
ಸಾಕಷ್ಟು ಸೌಲಭ್ಯಗಳಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಜಿಲ್ಲಾ ವಿಕಲಚೇತನಾಧಿಕಾರಿ ಜಿ.ಎಸ್‌. ಶಶಿಧರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ 2011ರ ಸರ್ವೆ ಪ್ರಕಾರ 40819 ವಿಕಲಚೇನರಿದ್ದು, ಇಲಾಖೆಯಲ್ಲಿ ಗ್ರಾಮೀಣ ಮತ್ತು ನಗರ ಸೇರಿ 27,331 ನೋಂದಣಿ ಮಾಡಿಕೊಂಡಿದ್ದಾರೆ. ಡಿಸೆಂಬರ್‌-2018ರ ಅಂತ್ಯಕ್ಕೆ 13,581 ವಿಲಚೇತನರು ತಲಾ 600 ರೂ. ಹಾಗೂ 13704 ತೀವ್ರತರದ ವಿಕಲಚೇತನರು ತಲಾ 1400 ರೂ. ಸೇರಿದಂತೆ ಒಟ್ಟು 27,285 ವಿಕಲಚೇತನರು ಮಾಸಾಶನ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

Advertisement

ಸ್ಥಳೀಯ ಇಲಾಖೆ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಯ ಶೇ. 3ರ ಮತ್ತು ಸಂಸದರು, ಶಾಸಕರ ಅನುದಾನದಲ್ಲಿ ಜಿಲ್ಲೆಯಲ್ಲಿ ಇದುವರೆಗೆ 700 ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ತ್ರಿಚಕ್ರ ವಾಹನ ವಿತರಿಸಲಾಗಿದೆ ಎಂದರು.  ಜಿಲ್ಲೆಯ ವಿಕಲಚೇತನ ಸಾಧಕರಾದ ವಿಕಲಚೇತನರ ಕ್ರಿಕೆಟ್‌ನ ಭಾರತ ತಂಡ ಪ್ರತಿನಿಧಿಸಿರುವ ಜಿಲ್ಲೆಯ ಆಟಗಾರ ಬಿ.ಎಂ. ಜೆ. ಪ್ರವೀಣ್‌, ರಾಜ್ಯಮಟ್ಟದ ಆಟಗಾರ ಬಿ. ಸುನಿಲ್‌, ಸಿಇಟಿಯಲ್ಲಿ 396ನೇ ರ್‍ಯಾಂಕ್‌ ಪಡೆದು ಮೆಡಿಕಲ್‌ ಸೀಟ್‌ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿನಿ ಎಸ್‌. ಸಿಂಧು ಆವರಗೆರೆ, ಕ್ರೀಡಾಪಟು ಸಿದ್ದೇಶ್‌, ಈಜುಪಟು ಉತ್ತೇಜ್‌ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಂತರ ವಿಕಲಚೇತನರಿಗೆ 10 ತ್ರಿಚಕ್ರ ವಾಹನ, 10 ವೀಲ್‌ ಚೇರ್‌, 3 ಸಿ.ಪಿ. ಚೇರ್‌ಗಳನ್ನು ವಿತರಿಸಲಾಯಿತು. ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಪಾಲಿಕೆ ಸದಸ್ಯ ಜಿ.ಬಿ. ಲಿಂಗರಾಜ್‌, ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೀರಯ್ಯಸ್ವಾಮಿ, ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಗಿರೀಶ್‌, ವೀರೇಶ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next