Advertisement

ಶ್ರೇಷ್ಠತಾ ಕೇಂದ್ರದಿಂದ ಉದ್ಯಮಿಗಳಿಗೆ ಅನುಕೂಲ

06:20 AM Mar 06, 2019 | |

ಬೆಂಗಳೂರು: ದಾಬಸ್‌ಪೇಟೆ ಬಳಿ ಕಾಸಿಯಾದಿಂದ ನಿರ್ಮಿಸಲಾಗುತ್ತಿರುವ ಶ್ರೇಷ್ಠತಾ ಕೇಂದ್ರಕ್ಕೆ 20 ಕೋಟಿ ರೂ.ಗಳ ನೆರವು ಒದಗಿಸುವಂತೆ ಕಾಸಿಯಾ ಮಾಡಿದ ಮನವಿಯನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಕಾಸಿಯಾದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೆಎಸ್‌ಎಫ್‌ಸಿ ಮತ್ತು ಇತರ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಶ್ರೇಷ್ಠತಾ ಕೇಂದ್ರದಿಂದ ಸಂಶೋಧನೆ ಮತ್ತು ಅಭಿವೃದ್ಧಿಗೆ ಅನುಕೂಲವಾಗಲಿದೆ. ಉದ್ಯಮಿಗಳಿಗೆ ಅನುಕೂಲವಾಗುವ ಎಲ್ಲ ಕಾರ್ಯಗಳನ್ನು ಈಡೇರಿಸಲಾಗುವುದು ಎಂದರು. ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಮಸ್ಯೆಗಳನ್ನು ಅರಿಯುವ ಸಂಬಂಧ ಕಾಸಿಯಾ ಸೇರಿ ಇತರ ಉದ್ಯಮಿಗಳ ಒಕ್ಕೂಟದ ಪ್ರತಿನಿಧಿಗಳೊಂದಿಗೆ ಪ್ರತಿ ತಿಂಗಳು ಸಭೆ ನಡೆಸಲಾಗುವುದು.

ಎಲ್ಲ ಕ್ಷೇತ್ರಗಳಿಗೂ ಒತ್ತು ನೀಡುವ ಇಚ್ಛೆ ಇದೆ. ಹೀಗಾಗಿ ಉದ್ಯಮಿಗಳ ಸಮಸ್ಯೆಗಳನ್ನು ಅರಿತು ಪರಿಹರಿಸಲಾಗುವುದು ಎಂದು ಹೇಳಿದರು. ಕರ್ನಾಟಕ ರಾಜ್ಯ ಹಣಕಾಸು ನಿಗಮ(ಕೆಎಸ್‌ಎಫ್‌ಸಿ) ಮೂಲಕ ಉದ್ಯಮಿಗಳಿಗೆ ಶೇ.4 ಬಡ್ಡಿ ದರದಲ್ಲಿ ಹಣಕಾಸು ಸೌಲಭ್ಯ ಒದಗಿಸಲಾಗುತ್ತಿದೆ. ಆದರೆ ಮರುಪಾವತಿ ಅವಧಿ ಐದು ವರ್ಷವಿದ್ದು,

ಇದನ್ನು 10 ವರ್ಷಕ್ಕೆ ವಿಸ್ತರಿಸುವಂತೆ ಉದ್ಯಮಿಗಳು ಮನವಿ ಮಾಡಿದ್ದಾರೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು. ಕಾಸಿಯಾ ಅಧ್ಯಕ್ಷ ಬಸವರಾಜ ಜವಳಿ, ಶಾಸಕ ವಿ. ಸೋಮಣ್ಣ, ಕಾಸಿಯಾ ನಿಕಟಪೂರ್ವ ಅಧ್ಯಕ್ಷ ಆರ್‌.ಹನುಮಂತೇಗೌಡ, ಗೌರವ ಪ್ರಧಾನ ಕಾರ್ಯದರ್ಶಿ ರವಿಕಿರಣ್‌ ಕುಲಕರ್ಣಿ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next