ವಿಜಯಪುರ: ಲಿಂಗತ್ವ ಅಲ್ಪಸಂಖ್ಯಾತರ ಸ್ವಾವಲಂಬಿ ಜೀವನಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದ್ದು, ಅಧಿಕಾರಿಗಳು ಸರ್ಕಾರ ನೀಡಿರುವ ಸೌಲಭ್ಯ ನೀಡಲು ಆದ್ಯತೆ ನೀಡಬೇಕೆಂದು ಲಿಂಗತ್ವ ಅಲ್ಪಸಂಖ್ಯಾತ ಜಿಲ್ಲಾಮಟ್ಟದ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಅಧ್ಯಕ್ಷ, ಜಿಲ್ಲಾಧಿಕಾರಿ ಡಾ|ವಿ.ಬಿ.ದಾನಮ್ಮನವರ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಲಿಂಗತ್ವ ಅಲ್ಪಸಂಖ್ಯಾತರ ಜಿಲ್ಲಾಮಟ್ಟದ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಈ ನಿರ್ದೇಶನ ನೀಡಿದ ಅವರು, ಲಿಂಗತ್ವ ಅಲ್ಪಸಂಖ್ಯಾತರು ಸರ್ಕಾರದ ಸೌಲಭ್ಯ ಪಡೆಯಲು ಆಧಾರ ಸಂಖ್ಯೆ, ಗುರುತಿನ ಚೀಟಿ ವಿತರಿಸುವ ಜತೆಗೆ, ಮಾಸಾಶನ, ಪಡಿತ ಚೀಟಿ, ಮತದಾರರ ಚೀಟಿ, ಆರೋಗ್ಯ ಸೇವೆಗಳಂತಹ ಎಲ್ಲ ಸೇವೆಗಳನ್ನು ಕಲ್ಪಿಸಲು ಮುಂದಾಗಬೇಕೆಂದು ತಾಕೀತು ಮಾಡಿದರು.
ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಬಗ್ಗೆ ಕರ್ನಾಟಕ ರಾಜ್ಯ ಟ್ರಾನ್ಸ್‌ಜೆಂಡರ್ಸ್ ನೀತಿ 2017 ಜಾರಿ ತರಲಾಗಿದೆ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಲಿಂಗತ್ವ ಅಲ್ಪಸಂಖ್ಯಾತರ ಪ್ರಮುಖ ಬೇಡಿಕೆಯಾದ ಗುರುತಿನ ಚೀಟಿ ವಿತರಣೆಗೆ ಅರ್ಜಿ ಸ್ವೀಕರಿಸಿ, ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಲಿಂಗತ್ವ ಅಲ್ಪಸಂಖ್ಯಾತರ ಬೇಡಿಕೆಯಂತೆ ಮೊದಲ ಹಂತದಲ್ಲಿ ಜಿಲ್ಲಾ, ತಾಲೂಕು ಗ್ರಾಮೀಣ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ರೂಪಿಸಬೇಕು. ಜಿಲ್ಲಾ-ತಾಲೂಕು ಮಟ್ಟದಲ್ಲಿ ರಚಿಸಿ, 3 ತಿಂಗಳಿಗೊಮ್ಮೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿ, ಜಿಲ್ಲಾ ಸಮಿತಿಗೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ನವಸ್ಫೂರ್ತಿ ಸಂಘ ಸಮುದಾಯ ಆಧಾರಿತ ಸಂಸ್ಥೆಯಾಗಿ, ಲಿಂಗತ್ಯ ಅಲ್ಪಸಂಖ್ಯಾತರೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಜಿಲೆಯಲ್ಲಿ ಈವರೆಗೆ 3279 ಜನ ಲಿಂಗತ್ವ ಅಲ್ಪಸಂಖ್ಯಾತರರು ನೋಂದಣಿಯಾಗಿದೆ. 18 ಇಲಾಖೆಗಳ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಮಿತಿ ಸದಸ್ಯರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಭೆಗೆ ತಿಳಿಸಿದರು.
ಲಿಂಗತ್ವ ಅಲ್ಪಸಂಖ್ಯಾತರ ಪ್ರತಿನಿಧಿ ಮಲ್ಲಪ್ಪ ಕುಂಬಾರ ಮಾತನಾಡಿ, ಬೀದಿಗೆ ಬಂದು ಭಿಕ್ಷೆ ಬೇಡಲು ಅಲ್ಪಸಂಖ್ಯಾತರಿಗೂ ಅಗತ್ಯವಿಲ್ಲ. ಸ್ವಾಭಿಮಾನ ಜೀವನ ನಡೆಸಲು ನಮಗೆ ಆಸೆ ಇದ್ದರೂ, ಉದ್ಯೋಗ ಹಾಗೂ ವಸತಿ ಸಮಸ್ಯೆ ಗಂಭೀರವಾಗಿ ನಮ್ಮನ್ನು ಕಾಡುತ್ತಿದೆ ಎಂದು ಸಭೆಯ ಮುಂದೆ ಸಮಸ್ಯೆ ಬಿಚ್ಚಿಟ್ಟರು. ಪರಿಣಾಮವೇ ಕಳೆದ 15 ವರ್ಷಗಿಂದ ಬಾಡಿಗೆ ಮನೆಯಲ್ಲಿದ್ದು, ಸಾವಿರಾರು ರೂ. ಬಾಡಿಗೆ ಭರಿಸಲಾಗುತ್ತಿದೆ. ಉದ್ಯೋಗ ಇಲ್ಲದ ಕಾರಣ ಹೊಟ್ಟೆ ಹೊರೆಯಲು ಭಿಕ್ಷೆ ಬೇಡುವುದು ಅನಿವಾರ್ಯವಾಗಿದೆ. ಭಿಕ್ಷೆ ಬೇಡಲು ಆಗದವರು ಲೈಂಗಿಕ ಕಾರ್ಯಕರ್ತೆಯರಾಗಿ ಕೆಲಸ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ. ಇದಕ್ಕಾಗಿ ನಗರದಿಂದ ಹೊರ ಹೋದರೆ ಮರಳಿ ಮನೆ ಸೇರುವ ವಿಶ್ವಾಸ ಇಲ್ಲದ ಪರಿಸ್ಥಿತಿ ಇದೆ ಎಂದು ನೋವು ನಿವೇದಿಸಿಕೊಂಡರು. ಸಮಾಜದಲ್ಲಿ ಜನರು ಕೂಡ ನಮ್ಮನ್ನು ಕೆಟ್ಟದಾಗಿ ಕಾಣುವ ಜತೆಗೆ ಹಿಂಸೆ ನೀಡುತ್ತಾರೆ. ಹಲವು ಸಂದರ್ಭಗಲ್ಲಿ ಹತ್ಯೆಯೂ ಆಗಿವೆ. ಹೀಗಾಗಿ ನಮಗೆ ವಾಸಿಸಲು ಮನೆಗಳನ್ನು ಕೊಡಬೇಕೆಂದು ಅಲ್ಪಸಂಖ್ಯಾತರು ಸಭೆಯಲ್ಲಿ ಮನವಿ ಮಾಡಿದರು.
ಅಲ್ಪಸಂಖ್ಯಾತರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಡಾ|ವಿ.ಬಿ.ದಾನಮ್ಮನವರ ಆದ್ಯತೆ ಮೇಲೆ ವಸತಿ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು. ಇದೇ ವೇಳೆ ಜಿಲ್ಲಾಮಟ್ಟದ ಮತ್ತು ತಾಲೂಕು ಮಟ್ಟದ ಸಮಿತಿ ರಚಿಸಲಾಯಿತು. ಸಮಿತಿ ಸದಸ್ಯರೂ ಆಗಿರುವ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ವೆಂಕಣ್ಣ ಹೊಸಮನಿ, ಟ್ರಾನ್ಸ್‌ಜೆಂಡರ್ಸ್ ಸಮುದಾಯ ಆಧಾರಿತ ಸಂಸ್ಥೆಯ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.