ಬೆಂಗಳೂರು: ಸೇನಾ ಸಿಬ್ಬಂದಿ ಸೋಗಿನಲ್ಲಿ ಬೈಕ್ ಮಾರಾಟ ಮಾಡುವುದಾಗಿ ಫೇಸ್‌ಬುಕ್ ಜಾಹಿರಾತಿಗೆ ಮರುಳಾದ ವರ್ಕ್ ಶಾಪ್ ಉದ್ಯೋಗಿಯೊಬ್ಬರು 1 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಮೈಸೂರು ರಸ್ತೆಯ ನಿವಾಸಿ ಮುರುಗೇಶ್ (50) ದುಡ್ಡು ಕಳೆದುಕೊಂಡವರು.
ಮುರುಗೇಶ್ ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದು, ಜ.28ರಂದು ಬಿಡುವಿನ ಸಮಯದಲ್ಲಿ ಫೇಸ್‌ಬುಕ್ ನೋಡುತ್ತಿದ್ದಾಗ ಅದರಲ್ಲಿ ಬೈಕ್ ಮಾರಾಟಕ್ಕಿದೆ ಎಂಬ ಜಾಹಿರಾತನ್ನು ಗಮನಿಸಿದ್ದರು. ಕಡಿಮೆ ಬೆಲೆಗೆ ಆಕರ್ಷಕವಾಗಿದ್ದ ಬೈಕ್‌ನ ಚಿತ್ರ ಕಂಡು ಅದನ್ನು ಖರೀದಿಸಲು ಮುರುಗೇಶ್ ಮುಂದಾಗಿದ್ದರು. ಜಾಹಿರಾತಿನ ಪಕ್ಕದಲ್ಲೇ ನಮೂದಿಸಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿ ವಿಚಾರಿಸಿದ್ದರು. ಅತ್ತ ಅಪರಿಚಿತರು ತಾನು ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ನೀವಿದ್ದಲ್ಲಿಗೆ ಬೈಕ್ ಟ್ರಾನ್ಸ್‌ಪೋರ್ಟ್ ಮಾಡಲು 2 ಸಾವಿರ ರೂ. ಜಮೆ ಮಾಡುವಂತೆ ಸೂಚಿಸಿದ್ದರು. ಮುರುಗೇಶ್ 2 ಸಾವಿರ ರೂ. ಪಾವತಿಸಿದ್ದರು. ನಿಮಗೆ ಡೆಲಿವರಿ ಬರುತ್ತದೆ ಎಂದು ತಿಳಿಸಿದ್ದರು.
ವಿವಿಧ ನೆಪವೊಡ್ಡಿ ದುಡ್ಡು ಪೀಕಿದ ಅಪರಿಚಿತ: ಮರುದಿನ ಮತ್ತೆ ಕರೆ ಮಾಡಿದ ಅಪರಿಚಿತರು ನೆಲಮಂಗಲ ಟ್ರಾನ್ಸ್‌ಪೊàರ್ಟ್‌ನಲ್ಲಿ ಬೈಕ್ ಕಳಿಸಲಾಗಿದೆ. ಬೈಕ್ ಮೊತ್ತ 26 ಸಾವಿರ ರೂ. ಪಾವತಿಸುವಂತೆ ಸೂಚಿಸಿದ್ದರು. ಅದರಂತೆ ಮುರುಗೇಶ್ ದುಡ್ಡು ಪಾವತಿಸಿದ್ದರು. ಇದಾದ ಕೆಲ ಹೊತ್ತಿನಲ್ಲೇ ಇನ್ಶೂರೆನ್ಸ್ ಪಾವತಿಸಬೇಕೆಂದು ಹೇಳಿ ಮತ್ತೆ 21 ಸಾವಿರ ರೂ. ಹಾಕಿಸಿಕೊಂಡಿದ್ದರು. ನೀವು ಕಳಿಸಿರುವ ದುಡ್ಡು ತಪ್ಪಾಗಿ ಬೇರೆಯವರಿಗೆ ಹೋಗಿದೆ ಎಂದು ಪುನಃ 21 ಸಾವಿರ ರೂ. ಜಮೆ ಮಾಡಿಸಿಕೊಂಡಿದ್ದರು. ನೀವು ಒಂದು ತಾಸು ತಡವಾಗಿ ದುಡ್ಡು ಪಾವತಿಸಿದ್ದಕ್ಕೆ ದಂಡದ ಮೊತ್ತ 30 ಸಾವಿರ ರೂ. ಪಾವತಿಸುವಂತೆ ತಿಳಿಸಿದ್ದರು. ಮುರುಗೇಶ್ 30 ಸಾವಿರ ರೂ. ಅನ್ನು ಹಾಕಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ಅಪರಿಚಿತರು ಜಿಎಸ್‌ಟಿಗೆ 24 ಸಾವಿರ ರೂ. ಪಾವತಿಸುವಂತೆ ಸೂಚಿಸಿದ್ದರು. ಇದರಿಂದ ಅನುಮಾನ ಗೊಂಡ ಮುರುಗೇಶ್ ನನಗೆ ಬೈಕ್ ಬೇಡ, ನಾನು ಇದುವರೆಗೆ ಪಾವತಿಸಿದ 1 ಲಕ್ಷ ರೂ. ವಾಪಾಸ್ಸು ಕೊಡಿ ಎಂದು ಕೇಳಿದಾಗ ಅಪರಿಚಿತರು ಇದಕ್ಕೆ ನಿರಾಕರಿಸಿದ್ದರು. ನಂತರ ಅಪಚಿತರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ತಾವು ಮೋಸ ಹೋಗಿರುವುದನ್ನು ಅರಿತ ಮುರುಗೇಶ್ ಬ್ಯಾಟರಾಯನ ಪುರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.