ಮಂಡ್ಯ: ಪಾಕಿಸ್ಥಾನ ಹೆಸರು, ಜಾತಿ, ಧರ್ಮದ ಮೂಲಕ ಭಾವನಾತ್ಮಕವಾಗಿ ಚುನಾವಣೆ ಎದುರಿಸುವುದನ್ನು ಬಿಟ್ಟು ಅಭಿವೃದ್ಧಿ ಆಧಾರದ ಮೇಲೆ ಚುನಾವಣೆ ಎದುರಿಸಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬಿಜೆಪಿಗೆ ಸವಾಲು ಹಾಕಿದರು.
ನಗರದ ಸರಕಾರಿ ಮಹಿಳಾ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಗಣಿಗ ರವಿಕುಮಾರ್ ಗೌಡ ಪರ ಬೃಹತ್ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿಯದ್ದು ಡಬ್ಬಲ್ ಎಂಜಿನ್ ಅಲ್ಲ. ಅದು ಡಬ್ಬಲ್ ಲೂಟಿ ಸರಕಾರ. ಕಳೆದ 3 ವರ್ಷಗಳಿಂದ ಕರ್ನಾಟಕದಲ್ಲಿ ಬಿಜೆಪಿ ಸರಕಾರ ರಾಜ್ಯವನ್ನು ಲೂಟಿ ಹೊಡೆದಿದೆ ಹೊರತು ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ವಾಗ್ಧಾಳಿ ನಡೆಸಿದರು. ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ನ್ಯಾಯಯುತವಾಗಿ ಬಿಜೆಪಿ ಅ ಧಿಕಾರ ಹಿಡಿಯಲಿಲ್ಲ. ಹಣದಿಂದ ಶಾಸಕರನ್ನು ಖರೀದಿಸಿ, ವಾಮಮಾರ್ಗದಿಂದ ಸರ್ಕಾರ ರಚನೆಯಾಯಿತು. ಇದು ಲೂಟಿ ಸರ್ಕಾರವಾಗಿದ್ದು, 40 ಪರ್ಸೆಂಟ್ ಕಮಿಷನ್ ದಂಧೆಯಿಂದ ರಾಜ್ಯದ ಜನರ ಮೇಲಾಗುತ್ತಿರುವ ಪರಿಣಾಮ ಯಾವ ರೀತಿ ಇದೆ ಎಂಬುದು ಜನರೇ ಅರಿಯಲು ಆಗುತ್ತಿಲ್ಲ ಎಂದು ಕಿಡಿಕಾರಿದರು.
ಲೂಟಿ ತಡೆಯಲು ಕೈ ಅಧಿಕಾರಕ್ಕೆ ತನ್ನಿ
ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ ಒಂದೂವರೆ ಲಕ್ಷ ಕೋಟಿ ಲೂಟಿಯಾಗಿದೆ. ಈ ಲೂಟಿ ತಡೆಯಬೇಕೆಂದರೆ ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ, ಅನ್ನಭಾಗ್ಯ, ಕ್ಷೀರಭಾಗ್ಯ, ಆರೋಗ್ಯ ಭಾಗ್ಯ, ಇಂದಿರಾ ಕ್ಯಾಂಟೀನ್ ಮೂಲಕ ಅಭಿವೃದ್ಧಿಯನ್ನೇ ಧರೆಗಳಿಸಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಖಾಲಿ ಇರುವ ಎರಡೂವರೆ ಲಕ್ಷ ಸರಕಾರಿ ಉದ್ಯೋಗವನ್ನು ಭರ್ತಿ ಮಾಡುವುದಾಗಿ ಪ್ರಿಯಾಂಕಾ ಭರವಸೆ ನೀಡಿದರು.